Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ – ಅಖಿಲೇಶ್ ನಾಯಕತ್ವ ಒಪ್ಪಿಕೊಂಡ ಉತ್ತರ ಪ್ರದೇಶ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷಕ್ಕೆ 60 ನಾಲ್ಕು ಸ್ಥಾನ ನೀಡಿದ್ದ ಉತ್ತರ ಪ್ರದೇಶದ ಜನರು, ಈ ಬಾರಿ ಕೇವಲ 36 ಸ್ಥಾನ ನೀಡಿದ್ದಾರೆ. ಇದಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ 44 ಸ್ಥಾನಗಳನ್ನು ನೀಡುವ ಮೂಲಕ ಅವರ ನಾಯಕತ್ವಕ್ಕೆ ಜೈ ಎಂದಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಮೈತ್ರಿ ಕೂಟ ಸರ್ಕಾರ ರಚಿಸಲು ಅಗತ್ಯಕ್ಕಿಂತ 20 ಸ್ಥಾನಗಳು ಹೆಚ್ಚಿವೆ
ಆದರೂ ಶ್ರೀರಾಮನಿಗೆ ರಾಮಮಂದಿರ ಕಟ್ಟಿದ ಉತ್ತರ ಪ್ರದೇಶದಲ್ಲೇ ಬಿಜೆಪಿ ಹೀನಾಯವಾಗಿ ಸೋತಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಹಿನ್ನಡೆ ಭಾರೀ ಆಶ್ಚರ್ಯವನ್ನುಂಟು ಮಾಡಿದೆ. 80 ಸ್ಥಾನಗಳಿರುವ ಆ ರಾಜ್ಯದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಹಿನ್ನಡೆ ಅನುಭವಿಸಿದ್ದು, ಕೇವಲ 36 (ಬಿಜೆಪಿ 33 + ಮಿತ್ರಪಕ್ಷಗಳು 3) ಸ್ಥಾನಗಳನ್ನು ಗೆದ್ದಿವೆ. ಉಳಿದ 44 ಸ್ಥಾನಗಳನ್ನು ‘ಇಂಡಿಯಾ’ ಒಕ್ಕೂಟ ಗೆದ್ದು ಬೀಗಿದೆ.

ಅಖಿಲೇಶ್-ರಾಹುಲ್ ಕಮಾಲ್

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವ ಉತ್ತರ ಪ್ರದೇಶದಲ್ಲಿ ಕಮಾಲ್ ಮಾಡಿದೆ. ಇಬ್ಬರು ನಾಯಕರು ದೊಡ್ಡ ಲೋಕಸಭಾ ಹೋರಾಟದಲ್ಲಿ ಜೊತೆಗೂಡಿ ‘ಇಂಡಿಯಾ’ ಕೂಟವನ್ನು ಮುನ್ನಡೆಸಿದ್ದಾರೆ. ಎನ್‌ಡಿಎಯನ್ನು 30ರ ಆಸುಪಾಸಿಗೆ ಕಟ್ಟಿ ಹಾಕಿ, 40ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ.

ಮತ್ತೆ ಬಿಜೆಪಿ ಗರಿಷ್ಠ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಬೆದರಿಕೆ ಇದೆ ಎಂಬುದನ್ನು ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಸಫಲರಾಗಿದ್ದು ಫಲ ನೀಡಿದೆ. ಎನ್‌ಡಿಎ 400ರ ಗಡಿ ಮುಟ್ಟಿದರೆ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ರದ್ದುಪಡಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ‘ಸಂಪತ್ತಿನ ಹಂಚಿಕೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ’ ಎಂಬ ಪ್ರತ್ಯಾರೋಪದೊಂದಿಗೆ ಎದುರಿಸಲು ಯತ್ನಿಸಿದರೂ, ಅದು ಪ್ರಯೋಜನವಾಗಲಿಲ್ಲ. ಸಂವಿಧಾನಕ್ಕೆ ಬಿಜೆಪಿಯಿಂದ ಬೆದರಿಕೆ ಎಂಬುದು ಜನರ ಮನದಲ್ಲಿ ಹೆಚ್ಚು ಪ್ರಭಾವ ಬೀರಿತು.

ಆಡಳಿತ ವಿರೋಧಿ ಅಲೆ

ಅನೇಕ ಹಾಲಿ ಸಂಸದರ ವಿರುದ್ಧ ಪ್ರಬಲ ವಿರೋಧವಿದ್ದರೂ, ಬಿಜೆಪಿ ತಂತ್ರಜ್ಞರು ಅವುಗಳನ್ನು ಲೆಕ್ಕಿಸಲಿಲ್ಲ. ಪಕ್ಷದ ಆಂತರಿಕ ಸಮೀಕ್ಷೆಗಳು ಹಾಲಿ ಸಂಸದರ ವಿರುದ್ಧ ಸಾರ್ವಜನಿಕ ಕೋಪವನ್ನು ಸೂಚಿಸಿದ್ದವು. ಅದಾಗ್ಯೂ, ಸಾಂಸ್ಥಿಕ ವಿರೋಧವನ್ನು ನಿರ್ಲಕ್ಷಿಸಿ, ಹಾಲಿ ಸಂಸದರಿಗೆ ಬಿಜೆಪಿ ಮಣೆ ಹಾಕಿತು. ಹಿಂದಿನ ಚುನಾವಣೆಯಲ್ಲಿ 181 ಮತಗಳ ಕಡಿಮೆ ಅಂತರದಿಂದ ಗೆದ್ದಿದ್ದ ಅಭ್ಯರ್ಥಿಗಳು ಈ ಬಾರಿ ಹೀನಾಯವಾಗಿ ಸೋತಿದ್ದಾರೆ.

ಜನ ವಿರೋಧಿ ಸರ್ಕಾರ

ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವೈಫಲ್ಯಗಳನ್ನು ಜನರ ಮನಸ್ಸಿಗೆ ಮುಟ್ಟಿಸಿದ್ದು ಕೂಡ ಫಲ ನೀಡಿತು.ಇದಕ್ಕೆ ಅವರಿಬ್ಬರ ಪ್ರಚಾರ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದದ್ದೇ ಸಾಕ್ಷಿಯಾಗಿತ್ತು.
ರೈತರ ಸಂಕಷ್ಟ, ಆರ್ಥಿಕ ಆತಂಕ, ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆಯ ವಿರುದ್ಧ ಪ್ರತಿಪಕ್ಷಗಳ ನಿರೂಪಣೆ ಬಿಜೆಪಿ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿತು. ಅದರಲ್ಲೂ ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆ ಯುವಜನರಲ್ಲಿ ಕೋಪವನ್ನು ಹೆಚ್ಚಿಸಿತ್ತು. ಅದು ಬಿಜೆಪಿ ವಿರೋಧಿ ಮತಗಳಾಗಿ ಪರಿವರ್ತನೆಯಾಯಿತು.

ಅಖಿಲೇಶ್ ಪಿಡಿಎ ತಂತ್ರ

ಅಖಿಲೇಶ್ ಯಾದವ್ ಪಿಡಿಎ ತಂತ್ರ ಕೂಡ ಜನರ ಮನಸ್ಸು ಮುಟ್ಟಿತು ಹಿಂದುಳಿದ ದಲಿತ ಅಲ್ಪಸಂಖ್ಯಾತ ಎಂಬ ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ವರದಾನವಾಯಿತು.ಇಂಡಿಯಾ ಮೈತ್ರಿ ಕೂಟಕ್ಕೆ ಹಿಂದುಳಿದ,ದಲಿತ,ಅಲ್ಪಸಂಖ್ಯಾತ ಮತದಾರರು ಜೈ ಅಂದರು.
ಬಿಜೆಪಿ ಅಲ್ಪಸಂಖ್ಯಾತರನ್ನು ಮನವೊಲಿಸವಲ್ಲಿ ವಿಫಲವಾಗಿದ್ದಲ್ಲದೆ, ವಿರೋಧ ಪಕ್ಷಗಳಲ್ಲಿ ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡುವುದನ್ನು ತಡೆಯುವಲ್ಲಿಯೂ ಸೋತಿತು. ಪರಿಣಾಮ, ವಿಪಕ್ಷಗಳು ಕನಿಷ್ಟ 85% ಮುಸ್ಲಿಂ ಮತಗಳನ್ನು ಪಡೆದಿದ್ದರೆ, ಎನ್‌ಡಿಎ ಕೇವಲ 6% ಮತಗಳನ್ನು ಮಾತ್ರ ಗಳಿಸಿದೆ.

ಮತ್ತೊಂದೆಡೆ, ಜಾತಿಯ ಆಧಾರದ ಮೇಲೆ ಹೆಚ್ಚು ಮತ ಚಲಾಯಿಸಿದ ಹಿಂದೂ ಮತದಾರರು ಕೂಡ ಬಿಜೆಪಿಯಿಂದ ಹಿಂದೆ ಸರಿದಿದ್ದಾರೆ. ಅವರು ಬಿಜೆಪಿ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

ರಾಮಮಂದಿರದ ಪ್ರಭಾವ ಇಲ್ಲ

1980ರ ದಶಕದಿಂದಲೂ ಬಿಜೆಪಿ ಚುನಾವಣಾ ಭರವಸೆಯಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವು ಈ ಚುನಾವಣೆಯಲ್ಲಿಯೂ ಪ್ರಮುಖವಾಗಿ ಮಾತನಾಡುವ ಅಂಶವಾಗಿತ್ತು. ಬಿಜೆಪಿ ರಾಮ ಮಂದಿರದ ಬಗ್ಗೆ ಮಾತನಾಡುತ್ತಲೇ ಇತ್ತು. ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ನಿರ್ಣಾಯಕ ಅಂಶವಾಗಲಿದೆ ಎಂದು ಬಿಜೆಪಿಗರು ನಂಬಿದ್ದರು.

ಲೋಕಸಭೆ ಚುನಾವಣೆಯಲ್ಲಿ ಅದರ ಲಾಭವನ್ನು ಪಡೆಯಲು ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗದ ರಾಮಮಂದಿರವನ್ನು ಮೋದಿ ಉದ್ಘಾಟಿಸಿದರು. ಆದರೆ, ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿಯೇ ಜನರು ಬಿಜೆಪಿಗೆ ಮತ ಹಾಕಲಿಲ್ಲ. ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸಮಾಜವಾದಿ ಪಕ್ಷದ ದಲಿತ ನಾಯಕ ಅವಧೇಶ್ ಪ್ರಸಾದ್ ಎದುರು ಹೀನಾಯವಾಗಿ ಸೋತಿದ್ದಾರೆ. ಮಾತ್ರವಲ್ಲ, ಪ್ರಧಾನಿ ಮೋದಿ ಅವರು ಕಳೆದ ಚುನಾವಣೆಗಿಂತ ಈ ಬಾರಿ ಕಡಿಮೆ ಮತಗಳನ್ನು ವಾರಣಾಸಿಯಲ್ಲಿ ಪಡೆದು, ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕುಸಿದ ಮಾಯಾವತಿ ಪ್ರಾಬಲ್ಯ

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಯುಪಿಯಲ್ಲಿ ಒಂದು ಕಾಲದಲ್ಲಿ ಬೃಹತ್ ಶಕ್ತಿಯಾಗಿತ್ತು. ಆದರೆ, ಈ ಚುನಾವಣೆಯಲ್ಲಿ ತನ್ನ ಖಾತೆ ತೆರೆಯಲು ವಿಫಲವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲೂ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹೀನಾಯ ಸೋಲು ಕಂಡಿತ್ತು. ಆದರೆ, 2019ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗಳಿಸಿ, ತನ್ನ ನೆಲೆ ಉಳಿಸಿಕೊಂಡಿತ್ತು. ಈ ಬಾರಿ ಏಕಾಂಗಿಯಾಗಿ ಹೋರಾಟ ನಡೆಸಿ, ಸೋಲು ಕಂಡಿದೆ. ಇದಲ್ಲದೆ, ಬಿಎಸ್‌ಪಿ 2019ರಲ್ಲಿ ಪಡೆದಿದ್ದ ಶೇ.19.43 ರಷ್ಟು ಮತಗಳನ್ನು ಉಳಿಸಿಕೊಳ್ಳುವಲ್ಲಿಯೂ ವಿಫಲವಾಗಿದೆ. ಬಿಎಸ್‌ಪಿಯ ನಷ್ಟವು ‘ಇಂಡಿಯಾ’ ಮೈತ್ರಿಕೂಟಕ್ಕೆ ಲಾಭವಾಗಿದೆ. ಇಂಡಿಯಾ ಕೂಟದ ಮತಗಳು ಶೇ.40ಕ್ಕಿಂತ ಹೆಚ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!