Thursday, June 13, 2024

ಪ್ರಾಯೋಗಿಕ ಆವೃತ್ತಿ

ಏ.17ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ| ಸ್ಟಾರ್ ಚಂದ್ರು ಪರ ಮತಯಾಚನೆ

ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಏ.17ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಕಾಂಗ್ರೆಸ್ ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿಯವರು ಆಗಮಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೆಗೌಡ) ಅವರ ಪರ ಮತಯಾಚನೆ ನಡೆಸಲಿದ್ದಾರೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಸೋಮವಾರ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಏ.17 ರಂದು ಮಧ್ಯಾಹ್ನ 1 ಗಂಟೆಗೆ ಸಮಾವೇಶ ಉದ್ಘಾಟನೆಯಾಗಲಿದ್ದು, ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಜನರ ಆಶೀರ್ವಾದ ಕೋರಲಿದ್ದಾರೆ ಎಂದು ತಿಳಿಸಿದರು.

ಸರ್ಕಾರ ನುಡಿದಂತೆ ನಡೆದಿದೆ

ಕಳೆದ ಹತ್ತು ತಿಂಗಳ ಆಡಳಿತದ ಅವಧಿಯಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಸಾಧನೆಯನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟು ರಾಹುಲ್ ಗಾಂಧಿಯವರು ಸ್ಟಾರ್ ಚಂದ್ರು ಅವರ ಪರ ಮತಯಾಚನೆ ಮಾಡಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರ ಆಶಯದಂತೆ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಯಿತು.ಅವರ ಆಶಯದಂತೆ ರಾಜ್ಯದಲ್ಲಿ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಸಚಿವ ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು ಈ ಸಮಾವೇಶ ಯಶಸ್ವಿಯಾಗಿ ನಡೆಸುವ ಜವಾಬ್ದಾರಿ ಹೊತ್ತಿದ್ದು, ಮಂಡ್ಯದ ಸ್ವಾಭಿಮಾನ ಹಾಗೂ ಗ್ಯಾರಂಟಿ ಕಾರ್ಯಕ್ರಮಗಳು ನಮ್ಮ ಅಭ್ಯರ್ಥಿಗೆ ಶ್ರೀ ರಕ್ಷೆಯಾಗಿದೆ ಎಂದರು.

ಹಲವು ಉದ್ಯಮಗಳ ಸ್ಥಾಪನೆ

ಕಳೆದ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಕೃಷ್ಣರಾಜಸಾಗರ ಜಲಾಶಯದ ಎಲ್ಲಾ ನಾಲೆಗಳ ಆಧುನೀಕರಣಕ್ಕೆ ಹಣಕಾಸಿನ ಮಂಜೂರಾತಿ ಪಡೆದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹಲವು ಉದ್ಯಮಗಳ ಸ್ಥಾಪನೆ, ಆಧುನಿಕ ಕೃಷಿ ಪದ್ಧತಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರು ಗಮನಿಸಿದ್ದು, ಮಂಡ್ಯದ ಸ್ವಾಭಿಮಾನ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಆಶೀರ್ವಾದ ಮಾಡಬೇಕೆಂದು ಕೋರಿದರು.

ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಶಾಸಕ ಗಣಿಗ ರವಿ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಮದನ್ ಕುಮಾರ್, ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!