Tuesday, September 17, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಇಷ್ಟವಾಗುವುದು ಇಂಥಾ ಕಾರಣಗಳಿಗೆ…..

ಮಾಚಯ್ಯ ಎಂ ಹಿಪ್ಪರಗಿ
(ಕಿರು ಬರಹ)

ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ 40% ಕಮೀಷನ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಹಾಜರಾಗಲು ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದರು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವುದು ನಿಜವಾದರೂ, ನಿರೀಕ್ಷಿಸಿದಷ್ಟು ಸೀಟು ಗಳಿಸುವಲ್ಲಿ ವಿಫಲವಾಗಿರುವುದು ಸತ್ಯ. ಕಡೇಪಕ್ಷ ಎರಡಂಕಿ ಮುಟ್ಟಲೂ ಕಾಂಗ್ರೆಸಿಗೆ ಸಾಧ್ಯವಾಗಿಲ್ಲ.

ದೇಶದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ವ್ಯಕ್ತವಾದ ಬೆಂಬಲವನ್ನು ಪರಿಗಣಿಸಿದರೆ, ಕರ್ನಾಟಕ ತನ್ನ ಕೊಡುಗೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದಿತ್ತು ಮತ್ತು ಹಾಗೆ ಮಾಡಿದ್ದಲ್ಲಿ, ಬಿಜೆಪಿಗೆ ಸರ್ಕಾರ ರಚನೆ ಮಾಡುವುದು ಇನ್ನೂ ಕಷ್ಟವಾಗುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಈ ಅಭಿಪ್ರಾಯ ಕಾಂಗ್ರೆಸ್ ನಾಯಕರಲ್ಲೂ ಇದ್ದಿರಬಹುದು. ರಾಹುಲ್ ಗಾಂಧಿಗೂ ಬಂದಿರಬಹುದು.

ಅದೇನೆ ಇರಲಿ, ಫಲಿತಾಂಶದ ನಂತರ ಅನ್ಯ ಕಾರಣಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿದ್ದರೂ ಸೋಲು ಗೆಲುವಿನ ಕುರಿತು ಪರಾಮರ್ಶೆ ಮಾಡುವುದು ರಾಷ್ಟ್ರೀಯ ನಾಯಕರೆನಿಸಿಕೊಂಡವರ ಹೊಣೆ. ಇಂತದ್ದನ್ನು ಎಲ್ಲಾ ಪಕ್ಷಗಳೂ ಮಾಡುತ್ತವೆ. ಸಾಮಾನ್ಯವಾಗಿ ಹೀಗೆ ಪರಾಮರ್ಶೆ ಮಾಡುವಾಗ ರಾಜ್ಯದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಲಾಗುತ್ತೆ. ಹೆಚ್ಚೆಂದರೆ ಗೆದ್ದ ಅಭ್ಯರ್ಥಿಗಳನ್ನು ಕರೆಸಿಕೊಂಡು ಶುಭಾಶಯ ಕೋರಲಾಗುತ್ತೆ. ಆದರೆ ಇವತ್ತು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ, ಗೆದ್ದ ಅಭ್ಯರ್ಥಿಗಳು ಮಾತ್ರವಲ್ಲದೆ ಸೋತವರನ್ನೂ ಕರೆಸಿಕೊಂಡು, ತನ್ನ ಜೊತೆಗೆ ಕೂರಿಸಿಕೊಂಡು ಫಲಿತಾಂಶದ ಏರುಪೇರಿನ ಚರ್ಚೆ ನಡೆಸಿದ್ದಾರೆ. ಪೂರ್ವನಿರ್ಧರಿತ ಅಜೆಂಡಾವಿಲ್ಲದೆ, ಕೆಲವೇ ತಾಸುಗಳ ಮಟ್ಟಿಗೆ ನಡೆದ ಆ ಕಿರುಸಭೆಯಲ್ಲಿ ಒಬ್ಬೊಬ್ಬರ ಸೋಲಿನ ಕಾರಣಗಳ ಕುರಿತು ದೀರ್ಘವಾಗಿ ಚರ್ಚಿಸುವ ಅವಕಾಶ ಇರಲಿಲ್ಲ. ಹಾಗಾಗಿ ಸೋತವರನ್ನು ಕರೆಸದಿದ್ದರೂ ನಡೆಯುತ್ತಿತ್ತು. ಆದರೆ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಬಿತ್ತುವ ಸಲುವಾಗಿ ಅವರನ್ನೆಲ್ಲ ರಾಹುಲ್ ಗಾಂಧಿ ಕರೆಸಿದ್ದರು. ಸೋತವರಿಗೆ ಆತ್ಮವಿಶ್ವಾಸ ತುಂಬಲು, ಆ ಮೂಲಕ ಪಕ್ಷ ಸಂಘಟನೆಗೆ ಅವರನ್ನು ಹುರಿದುಂಬಿಸಲು ಇಷ್ಟು ಸಾಕಲ್ಲವೇ!?

ಸೋಲನ್ನು ನಾವೆಲ್ಲ ತುಂಬಾ ಕೆಟ್ಟದಾಗಿ ಸ್ವೀಕರಿಸುತ್ತೇವೆ. ಸೋತವನು/ಳು ಕುಗ್ಗಿ ಹೋಗುತ್ತಾನೆ/ಳೆ. ಅವಮಾನ, ತಿರಸ್ಕಾರಗಳಿಗೆ ತುತ್ತಾಗುತ್ತಾನೆ/ಳೆ. ಅದರಲ್ಲೂ ರಾಜಕಾರಣದಂತಹ ಸ್ಪರ್ಧಾತ್ಮಕ ತಂತ್ರಗಾರಿಕೆಯ ಕ್ಷೇತ್ರದಲ್ಲಿ ಸೋತವರನ್ನು ಸತ್ತವರೆಂದೇ ಪರಿಗಣಿಸುವ ಪರಿಪಾಠವಿದೆ. ಆದರೆ ರಾಹುಲ್ ಗಾಂಧಿ, ಗೆದ್ದವರನ್ನಷ್ಟೇ ಅಲ್ಲ; ಸೋತವರನ್ನೂ ತನ್ನ ಸಂಗಡ ಕೂರಿಸಿಕೊಂಡು ಮಾತಾಡಿದ ವಿದ್ಯಮಾನ ರಾಜಕೀಯದ ಹೊರತಾಗಿಯೂ ಒಂದು ಒಳ್ಳೆ ಪಾಠ ಎನ್ನಬಹುದು. ರಾಹುಲ್, ಹೆಜ್ಜೆಹೆಜ್ಜೆಗೂ ಸೋಲನ್ನು ಕಂಡ ವ್ಯಕ್ತಿ. ಸೋಲಿನ, ಅವಮಾನದ ತಿರಸ್ಕಾರಗಳನ್ನು ಉಂಡ ವ್ಯಕ್ತಿ. ಆ ಎಲ್ಲಾ ಅನುಭವಗಳು ಇವತ್ತು ಆತನನ್ನು ಪರಿಪಕ್ವವಾಗಿ ಮಾಗಿಸಿವೆ. ಹಾಗಾಗಿಯೇ ರಾಜಕಾರಣದಲ್ಲಿ ಹೊಸ ದಾರಿಗಳಿಗೆ ಅವರು ತೆರೆದುಕೊಳ್ಳುತ್ತಿದ್ದಾರೆ. ಸೋತವರನ್ನು ಸಂತೈಸಿದ್ದು ಕೂಡಾ ಅಂತದ್ದರಲ್ಲಿ ಒಂದು….

ಪ್ರಿಯ ರಾಹುಲ್, ನೀವು ಪ್ರಧಾನಿಯಾಗುವಿರೋ ಇಲ್ಲವೋ ಗೊತ್ತಿಲ್ಲ; ಆದರೆ, ನಿಮ್ಮನ್ನು ಇಷ್ಟಪಡದೆ ಇರಲು ಕಾರಣಗಳೇ ಸಿಗುತ್ತಿಲ್ಲ…..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!