Thursday, July 25, 2024

ಪ್ರಾಯೋಗಿಕ ಆವೃತ್ತಿ

ಫ್ಯಾಕ್ಟ್ ಚೆಕ್| ₹ 500ರ ನೋಟಿನಲ್ಲಿ ಗಾಂಧಿ ಬದಲು ರಾಮನ ಫೋಟೋ ಮುದ್ರಿಸಲಾಗಿದೆಯೇ ?

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ದಿನಾಂಕ ಸಮೀಪಿಸುತ್ತಿದೆ. ಜನವರಿ 22, 2024ರಂದು ಈ ಕಾರ್ಯಕ್ರಮ ನಡೆಯಲಿದೆ. ಈ ನಡುವೆ 500 ರೂಪಾಯಿಯ ಕರೆನ್ಸಿ ನೋಟಿನಲ್ಲಿ ರಾಮ ಮತ್ತು ರಾಮ ಮಂದಿರ ಫೋಟೋಗಳನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಪ್ರಿಂಟ್ ಮಾಡಿದೆ ಎಂಬ ಸುದ್ದಿ ಹಬ್ಬಿದೆ.

ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ‘ಮಹಾತ್ಮ ಗಾಂಧಿಯ ಫೋಟೋ ಬದಲು ರಾಮನ ಫೋಟೋ ಮತ್ತು ಕೆಂಪು ಕೋಟೆಯ ಫೋಟೋ ಬದಲು ರಾಮ ಮಂದಿರ ಫೋಟೋ’ ಇರುವ 500 ರೂಪಾಯಿಯ ಕರೆನ್ಸಿ ನೋಟಿನ ಫೋಟೋ ಹಂಚಿಕೊಳ್ಳಲಾಗ್ತಿದೆ.

ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗ್ತಿರುವ ಫೋಟೋ

‘Manoj Dhareshwar’ (ಮನೋಜ್ ಧರೇಶ್ವರ್) ಎಂಬ ಫೇಸ್‌ಬುಕ್ ಬಳಕೆದಾರ ಜನವರಿ 16,2024ರಂದು ತಮ್ಮ ಖಾತೆಯಲ್ಲಿ ಈ ಫೋಟೋ ಮತ್ತು ಸುದ್ದಿ ಹಂಚಿಕೊಂಡಿದ್ದರು.

‘karatagi_troll_market’_ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜನವರಿ 10ರಂದು 500 ರೂಪಾಯಿ ಕರೆನ್ಸಿ ನೋಟಿನಲ್ಲಿ ಕೆಂಪುಕೋಟೆಯ ಬದಲು ರಾಮ ಮಂದಿರ ಫೋಟೋ ಹಾಕಲಾಗಿದೆ ಎಂದು ಫೋಟೋ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಹಲವರು “ಸರಿಯಾದ ನಿರ್ಧಾರ, ಜೈಶ್ರೀರಾಂ” ಎಂಬ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ವಾಸ್ತವ : ನಾನು ಗೌರಿ.ಕಾಂ ಈ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದೆ. ಈ ವೇಳೆ ಕರೆನ್ಸಿ ನೋಟುಗಳಲ್ಲಿ ರಾಮ ಮತ್ತು ರಾಮ ಮಂದಿರ ಫೋಟೋಗಳನ್ನು ಪ್ರಿಂಟ್ ಮಾಡುವ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಆಗಲಿ, ಭಾರತ ಸರ್ಕಾರವಾಗಲಿ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಥವಾ ಇತರ ಅಧಿಕಾರಿಗಳು ಈ ಕುರಿತು ಯಾವುದೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ಸುದ್ದಿಯ ಕುರಿತು ನಾವು ಆರ್‌ಬಿಐ ವಕ್ತಾರ ಯೋಗಿಶ್ ದಯಾಳ್ ಅವರನ್ನು ಮಾತನಾಡಿಸಿದಾಗ ಅವರು, “ಈ ಬಗ್ಗೆ ಆರ್‌ಬಿಐಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾಗಿ ಖ್ಯಾತ ಸುಳ್ಳು ಸುದ್ದಿ ಪತ್ತೆ ವೆಬ್‌ಸೈಟ್ Boom (ಬೂಮ್) ವರದಿ ಮಾಡಿದೆ.

ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದುವರೆಗೆ (ಜನವರಿ16,2024) 500 ರೂಪಾಯಿಯ ಕರೆನ್ಸಿ ನೋಟಿನಲ್ಲಿ ಮಹಾತ್ಮ ಗಾಂಧಿ ಮತ್ತು ಕೆಂಪುಕೋಟೆಯ ಫೋಟೋಗಳು ಹಾಗೆಯೇ ಇದೆ. ಯಾವುದೇ ಬದಲಾವಣೆ ಆಗಿಲ್ಲ. ಈ ಕುರಿತ ಸ್ಕ್ರೀನ್ ಶಾಟ್‌ಗಳು ಇಲ್ಲಿದೆ.


ಲಭ್ಯವಿರುವ ಖಚಿತ ಮೂಲಗಳನ್ನು ಮತ್ತು ಮಾಹಿತಿಗಳನ್ನು ನಾನು ಗೌರಿ.ಕಾಂ ಪರಿಶೀಲಿಸಿ ನೋಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ರಾಮ ಮತ್ತು ರಾಮ ಮಂದಿರ ಫೋಟೋಗಳಿರುವ ಕರೆನ್ಸಿ ನೋಟಿನ ಫೋಟೋ ಮಾರ್ಪ್‌ ಮಾಡಿರುವಂತದ್ದು, ನಕಲಿ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!