Friday, September 20, 2024

ಪ್ರಾಯೋಗಿಕ ಆವೃತ್ತಿ

ದೆಹಲಿಯಲ್ಲಿ ಪಡಿತರ ವಿತರಕರ ಬೃಹತ್ ಪ್ರತಿಭಟನೆ: ಟಿ.ಕೃಷ್ಣಪ್ಪ

ದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಂಬರುವ ಜನವರಿ 16ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಬಂದಾಗಿಂದಲೂ ಇಡೀ ದೇಶದ ನ್ಯಾಯಬೆಲೆ ಅಂಗಡಿ ಮಾಲೀಕರು, ಪಡಿತರ ವಿತರಣೆ ಹಾಗೂ ಸರ್ಕಾರದ ಯೋಜನೆಯನ್ನು ದೇಶಾದ್ಯಂತ ಎಲ್ಲಾ ಜನತೆಗೆ ಸುಸೂತ್ರವಾಗಿ ತಲುಪಿಸುವಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ಇತ್ತಿಚೇಗೆ ಕೇಂದ್ರ ಸರ್ಕಾರವು ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಜಿ.ಎಸ್.ಟಿ ವ್ಯಾಪ್ತಿಗೆ ತಂದು, ರಶೀದಿ ತೆರೆಯುವ ಪಾಸ್ ಮಿಷನ್ ಪ್ರಿಂಟರ್ ಗಳ ಮೂಲಕ ರಶೀದಿ ವಿತರಿಸುವಂತೆ ಒತ್ತಾಯಿಸುತ್ತಿದೆ, ಇದನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ದೇಶಾದ್ಯಂತ ಒಂದು ಯೂನಿಟ್‌ಗೆ 5 ಕೆ.ಜಿ. ಆಹಾರ ಪದಾರ್ಥವನ್ನು ವಿತರಿಸಲು ಆಹಾರ ಭದ್ರತೆಯಡಿಯಲ್ಲಿ ಆದೇಶ ಮಾಡಲಾಗಿದೆ, ಆದರೆ ಅದೇ ರೀತಿ ಕಮೀಷನ್‌ ನೀಡುವುದನ್ನು ಏಕರೂಪಗೊಳಿಸಬೇಕು, ಪ್ರಸ್ತುತ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಮಿಷನ್ ನೀಡುವ ಪದ್ದತಿ ಜಾರಿಯಲಿದ್ದು, ಇದನ್ನು ಕೈಬಿಡಬೇಕು, ಏಕರೂಪ ಕಮೀಷನ್ ಅನ್ನು ದೇಶಾದ್ಯಂತ ಕ್ವಿಂಟಾಲ್‌ ಗೆ ರೂ.300ಗಳಂತೆ ನೀಡಲು ಆದೇಶಿಸಬೇಕೆಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ಅಕ್ಕಿ ಜೊತೆಗೆ ಅಗತ್ಯ ವಸ್ತುಗಳಾದ ಬೆಲ್ಲ, ಸಕ್ಕರೆ, ಉಪ್ಪು, ಎಣ್ಣೆ, ಬೇಳೆ, ಗೋಧಿ, ದ್ವಿದಳಧಾನ್ಯಗಳು ಸಹ ಪೂರೈಸಬೇಕು, ನ್ಯಾಯಬೆಲೆ ಅಂಗಡಿಗಳನ್ನು ಆರ್ಥಿಕವಾಗಿ ಸಬಲಗೊಳಿಸಲು ಇರುವ ಆರ್ಥಿಕ ನೀತಿಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.

ಸಿ.ಸಿ.ಕ್ಯಾಮರಾ, ಜಿಪಿಎಸ್ ಅಳವಡಿಸಿ

ಈಗಾಗಲೇ ರಾಜ್ಯದ ಮುಖ್ಯಮಂತ್ರಿಯವರಿಗೆ, ಆಹಾರ ಸಚಿವರಿಗೆ, ಸಗಟು ಮಳಿಗೆಗಳಿಗೆ ಬಯೋಮೆಟ್ರಿಕ್‌ ಎಲೆಕ್ಟ್ರಾನಿಕ್ ಸ್ಕೆಲ್, ಸಿ.ಸಿ.ಕ್ಯಾಮರಾ ಹಾಗೂ ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿ.ಪಿ.ಎಸ್. ಅಳವಡಿಸಲು ಮನವಿ ಪತ್ರ ಕೊಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಮಂಜೂರಾತಿ ಕೊಟ್ಟು ಹಣವನ್ನು ಬಿಡುಗಡೆ ಮಾಡಿದ್ದರೂ ಸಹ ಇನ್ನೂ ಕಾರ್ಯನ್ಮುಖವಾಗಿರುವುದಿಲ್ಲ. ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಈಗಾಗಲೇ ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನಲ್ಲಿ 6,250 ಕ್ವಿಂಟಾಲ್ ಅಕ್ಕಿ, ಚನ್ನಪಟ್ಟಣ ತಾಲ್ಲೂಕು ಸಗಟು ಮಳಿಗೆಗಳಲ್ಲಿ 2,600 ಕ್ವಿಂಟಾಲ್ ಅಕ್ಕಿ ಹಾಗೂ ಇನ್ನು ಕೆಲವು ಕಡೆ ಕದ್ದು ಮಾರುತ್ತಿರುವುದು ಪತ್ತೆಯಾಗಿದೆ,  ಆದ್ದರಿಂದ ಗೌಡೋನ್ ಗಳಿಗೆ ಸಿ.ಸಿ.ಕ್ಯಾಮರಾ ಹಾಗೂ ಲಾರಿಗಳಿಗೆ ಜಿ.ಪಿ.ಎಸ್. ಅಳವಡಿಸಿದರೆ ಇಂತಹ ಭ್ರಷ್ಟಚಾರಕ್ಕೆ ತಡೆಯಾಕಬಹುದು ಎಂದರು.

ದೆಹಲಿಯಲ್ಲಿ ನಡೆಯುವ ಹೋರಾಟಕ್ಕೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು, ವಿ.ಎಸ್.ಎಸ್.ಎನ್. ಕಾರ್ಯದರ್ಶಿಗಳು, ಸಂಘ ಸಂಸ್ಥೆಗಳ ಕಾರ್ಯದರ್ಶಿಗಳು ಭಾಗವಹಿಸಬೇಕೆಂದು ಮಾತನಾಡಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜಣ್ಣ ಹೆಚ್.ಪಿ, ಕಾರ್ಯದರ್ಶಿ ದೇವರಾಜು, ಪದಾಧಿಕಾರಿಗಳಾದ ನಾಗೇಶ್, ಸ್ವಾಮಿ ಹಾಗೂ ಮಂಚಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!