Friday, September 20, 2024

ಪ್ರಾಯೋಗಿಕ ಆವೃತ್ತಿ

ಪಡಿತರ ಅಕ್ಕಿ ದಂಧೆ: ಮಂಡ್ಯ ಪೊಲೀಸರು ಸತ್ಯ ಬಯಲು ಗೊಳಿಸಲಿ

ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಕೆಲವು ರೈಸ್ ಮಿಲ್ ಗಳಲ್ಲಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇದನ್ನು ಬಯಲು ಮಾಡುತ್ತೇವೆಂದು ಹೋದ ಕೆಲವು ಪೀತ ಪತ್ರಿಕೋದ್ಯಮದ ವರದಿಗಾರರು ರೈಸ್ ಮಿಲ್ ಮಾಲೀಕರಿಂದ ಹಣ ಪಡೆದ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ಮಂಡ್ಯ ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಪಡಿತರ ಅಕ್ಕಿ ದಂಧೆ ಮತ್ತು ವಸೂಲಿಕೋರರ ಹಾವಳಿ ಕೊನೆಯಾಗುವುದೇ ಇಲ್ಲ.

ಮಂಡ್ಯ ಎಸ್ಪಿ ಎನ್. ಯತೀಶ್ ಅವರು ಈ ಬಗ್ಗೆ ಗಮನ ಹರಿಸಿ, ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸತ್ಯವನ್ನು ಜನತೆಯ ಮುಂದೆ ಬಹಿರಂಗಪಡಿಸಬೇಕೆಂಬ ಹಿನ್ನೆಲೆಯಲ್ಲಿ ಈ ವಿಶೇಷ ವರದಿ.

ಹೆಚ್.ಕೆ. ರೈಸ್ ಮಿಲ್ ನಲ್ಲಿ ನಡೆದಿದ್ದೇನು?

ಕಳೆದ ಆಗಸ್ಟ್ 16ರಂದು ಮಧ್ಯಾಹ್ನ 3.30 ರ ಸುಮಾರಿಗೆ ಮಂಡ್ಯದ ತೂಬಿನಕೆರೆ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಹೆಚ್.ಕೆ.ರೈಸ್ ಮಿಲ್ ನಲ್ಲಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದೆ ಎಂದು ಬೆಂಗಳೂರಿನ ನ್ಯೂಸ್ ಅಲರ್ಟ್ ಎಂಬ ವರದಿಗಾರರ ತಂಡದ ಚಂದನ್ ಗೌಡ ಮಂಜುನಾಥ್ ಸೇರಿದಂತೆ ಏಳೆಂಟು ಮಂದಿಯ ತಂಡ ಎರಡು ಕಾರುಗಳಲ್ಲಿ ಹೋಗಿ ವಿಡಿಯೋ ಮಾಡಿ ಪಡಿತರ ಅಕ್ಕಿ ಪಾಲಿಷ್ ಮಾಡುತ್ತಿದ್ದೀರಿ ಎಂದು ಆರೋಪಿಸಿದೆ.

ಆಗ ರೈಸ್ ಮಿಲ್ ಮಾಲೀಕರು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದೇವೆ ಬಿಲ್ ಕೂಡ ಇದೆ ಎಂದು ತೋರಿಸಿದರೂ ಕೇಳದ ಕಾರಣ ಅವರು ರೈಸ್ ಮಿಲ್ ಸಂಘದ ಪದಾಧಿಕಾರಿಗಳನ್ನು ಕರೆಸಿದ್ದಾರೆ.

ಈ ಮಧ್ಯೆ ನ್ಯೂಸ್ ಅಲರ್ಟ್ ಮಾಧ್ಯಮದವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ರೀ-ಫಿಲ್ಲಿಂಗ್ ದಂಧೆ ನಡೆಯುತ್ತಿದೆ ಎಂದು ಕರೆ ಮಾಡಿ ಅವರನ್ನು ಅಲ್ಲಿಗೆ ಕರೆಸಿದ್ದಾರೆ.

ಸ್ಥಳಕ್ಕೆ ಹೋದ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಮಂಡ್ಯ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದಪ್ಪ ಅವರ ಸಮ್ಮುಖದಲ್ಲಿ ಅಕ್ಕಿ ಕ್ರಮಬದ್ಧವಾಗಿದೆ ಎಂದು ತಿಳಿದಿದೆ. ಯಾವಾಗ ಎಲ್ಲಾ ಸರಿಯಾಗಿದೆ ಎಂದು ತಿಳಿಯಿತೋ ರೈಸ್ ಮಿಲ್ ಮಾಲೀಕರು ಗರಂ ಆಗಿ ಯಾಕೆ ಹೀಗೆ ತೊಂದರೆ ಕೊಡುತ್ತೀರಿ ಎಂದು ಪ್ರಶ್ನಿಸಲು ಶುರು ಮಾಡಿ ಮಂಡ್ಯದ ಕೆಲವು ಪತ್ರಕರ್ತರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದಾರೆ.

ಆಗ ನ್ಯೂಸ್ ಅಲರ್ಟ್ ಮಾಧ್ಯಮದವರು ಮಂಡ್ಯದ ಪತ್ರಕರ್ತನೊಬ್ಬನನ್ನು ಕರೆಸಿ ರೈಸ್ ಮಿಲ್ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ಮಾಡಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ಹೊರಡಲು ಅಣಿಯಾಗಿದ್ದರು.

ಮಧ್ಯಾಹ್ನ 3.30 ರಿಂದ ಇದೆಲ್ಲಾ ನಡೆಯುತ್ತಿದ್ದರೂ ಮಂಡ್ಯದ ಆರೇಳು ಮಂದಿ ಪತ್ರಕರ್ತರು ಹೆಚ್.ಕೆ.ರೈಸ್ ಮಿಲ್ ಆವರಣಕ್ಕೆ ಬಂದದ್ದು 5.30 ರ ನಂತರ. ಅಷ್ಟರಲ್ಲಾಗಲೇ ತುಮಕೂರಿನ ಅಕ್ಕಿ ಸಾಗಿಸುತ್ತಿದ್ದವರಿಂದ ಹಣ ಪಡೆದದ್ದು, ಕಿರುಗಾವಲು ರೈಸ್ ಮಿಲ್ ಮಾಲೀಕರಿಂದ ಹಣ ಪಡೆದ ಆರೋಪ ಕೂಡಾ ಕೇಳಿಬಂದಿದೆ.

ಮಂಡ್ಯದ ಪತ್ರಕರ್ತರಿಗೆ ವಿಷಯ ತಿಳಿದು ಅವರು ಅಲ್ಲಿಗೆ ಹೋಗುವ ವೇಳೆಗೆ ಮಾತುಕತೆ ನಡೆದು ನ್ಯೂಸ್ ಅಲರ್ಟ್ ತಂಡದವರು ಹೊರಟು ನಿಂತಿದ್ದರು. ಆಗ ಮಂಡ್ಯದ ಪತ್ರಕರ್ತರು ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತುಮಕೂರು ಹಾಗೂ ಕಿರುಗಾವಲು ರೈಸ್ ಮಿಲ್ ಮಾಲೀಕರಿಂದ ಹಣ ಪಡೆದಿರುವ ಆರೋಪದ ಬಗ್ಗೆ ಮೊಬೈಲ್ ನಲ್ಲಿ ರೆಕಾರ್ಡ್ ಆಗಿರುವುದನ್ನು ಅವರಿಗೆ ಕೇಳಿಸಿ ಈಗಲಾದರೂ ಸತ್ಯ ಹೇಳುವಂತೆ ಕೇಳಿದ್ದಾರೆ. ಇದೆಲ್ಲವೂ ಮಂಡ್ಯ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದಪ್ಪ ಅವರ ಸಿಬ್ಬಂದಿ ಸಮ್ಮುಖದಲ್ಲಿಯೇ ನಡೆದಿದೆ.

( ಮೇಲಿನ ವಿಡಿಯೋದಲ್ಲಿ  ಸ್ಟ್ರಿಂಗ್ ಅಪರೇಷನ್ ಮಾಡಲು ಬಂದವರ ಅಸಲಿಯತ್ತಿನ ಪರಿ !!!)

ಯಾವಾಗ ನ್ಯೂಸ್ ಅಲರ್ಟ್ ಮಾಧ್ಯಮದ ವರದಿಗಾರ ಚಂದನ್ ಗೌಡ, ಮಂಜುನಾಥ್ ಅವರು ಅನುಮಾನ ಬರುವಂತೆ ಮಾತುಗಳಾಡಿದರೋ ಆಗ ತನಿಖೆ ನಡೆಸಿ ಸತ್ಯ ಬಯಲು ಮಾಡಲೆಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೈಸ್ ಮಿಲ್ ಮಾಲೀಕರು ಚಂದನ್ ಗೌಡ, ಮಂಜುನಾಥ್, ಮುನಿರಾಜು ಅವರ ಮೇಲೆ ದೂರು ದಾಖಲಿಸಿ ಎಫ್ಐಆರ್ ಮಾಡಿಸಿದ್ದಾರೆ.

ಮಂಡ್ಯ ಪತ್ರಕರ್ತರ ಮೇಲೆ ದೂರು

ನಮ್ಮ ಮೇಲೆ ದೂರು ದಾಖಲಾಗಲು ಮಂಡ್ಯ ಪತ್ರಕರ್ತರೇ ಕಾರಣ ಎಂದು ಮಂಡ್ಯದ ಮೂವರು ಪತ್ರಕರ್ತರ ಮೇಲೆ ಮೇಲೆ ನ್ಯೂಸ್ ಅಲರ್ಟ್ ವರದಿಗಾರ ಚಂದನ ಗೌಡ ಕೊಟ್ಟ ಪ್ರತಿ ದೂರಿನ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ನಮ್ಮನ್ನು ಅಕ್ರಮವಾಗಿ ರೂಮಿನಲ್ಲಿ ಕೂಡಿಹಾಕಿ ಕ್ಯಾಮರಾ ಕಿತ್ತುಕೊಂಡು ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ. ರೂಮಿನಲ್ಲಿ ಕೂಡಿ ಹಲ್ಲೆ ನಡೆಸಿದ್ರು ಎನ್ನುವ ಆರೋಪವೇ ಸುಳ್ಳು.

(ಮೇಲಿನ ವಿಡಿಯೋ: ರೂಮಿನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ರು ಎನ್ನುವ ಆರೋಪವೇ ಸುಳ್ಳು…)

ಅಂದು ರೈಸ್ ಮಿಲ್ ನಲ್ಲಿ ನೂರಾರು ಜನರು ಜೊತೆ ಆಹಾರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಇದ್ದಾಗಲೂ ಈ ರೀತಿ ಸುಳ್ಳು ದೂರು ನೀಡಲಾಗಿದೆ. ಅಕ್ರಮವಾಗಿ ರೂಮಿನಲ್ಲಿ ಬಂಧಿಸಿ ಹಲ್ಲೆ ಮಾಡಿರುವ ಬಗ್ಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಯವರು ಸಿಸಿ ಟಿವಿ ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಜನರ ಮುಂದಿಡಲಿ.

ಎಸ್ಪಿಯವರು ಸತ್ಯ ಬಯಲು ಮಾಡಲಿ

ನ್ಯೂಸ್ ಅಲರ್ಟ್ ತಂಡದ ಚಂದನ್ ಗೌಡ ಮತ್ತು ಮಂಜುನಾಥ್ ಮಾತನಾಡಿರುವ ಆಡಿಯೋ ಮತ್ತು ವಿಡಿಯೋಗಳನ್ನು ಎಸ್ಪಿ ಯತೀಶ್ ರವರು ಗಮನಿಸಿ ಉನ್ನತ ತನಿಖೆಗೆ ಆದೇಶಿಸಲಿ.ಮಂಡ್ಯದ ಪತ್ರಕರ್ತರು ಅವರ ಮೊಬೈಲ್ ಕರೆಗಳ ಡೀಟೈಲ್ಸ್ ಕೊಡಲು ಸಿದ್ಧರಿದ್ದಾರೆ. ಹಾಗೆಯೇ ನ್ಯೂಸ್ ಅಲರ್ಟ್ ತಂಡದವರ ಮೊಬೈಲ್ ಕರೆಗಳ ಡೀಟೇಲ್ಸ್ ತೆಗೆಸಬೇಕೆಂದು ಮಂಡ್ಯ ಪತ್ರಕರ್ತರು ಈಗಾಗಲೇ ನಿಮಗೆ ಮನವಿ ಪತ್ರ ಕೂಡ ಕೊಟ್ಟಿರುವುದರಿಂದ, ನೀವು ಈ ಕೂಡಲೇ ತನಿಖೆಗೆ ಆದೇಶಿಸಿದರೆ ಮಂಡ್ಯದ ಪತ್ರಕರ್ತರು ಸಂಪೂರ್ಣ ಸಹಕಾರ ನೀಡಲು ಸಿದ್ಧ. ಪಡಿತರ ಅಕ್ಕಿ ದಂಧೆ ಕೊನೆಯಾಗಿ, ಪೀತ ಪತ್ರಿಕೋದ್ಯಮ ಕೂಡ ಇಲ್ಲಿಗೇ ಕೊನೆಯಾಗಲಿ.

ಹಾಗೆಯೇ ಅಂದು ಚಂದನ್ ಗೌಡ ಜೊತೆಯಲ್ಲಿ ಬಂದಿದ್ದ ಇನ್ನೂ ಮೂವರು ಮಂಡ್ಯ ಪತ್ರಕರ್ತರು ಬರುತ್ತಿದ್ದಂತೆ ಬೇರೊಂದು ಕಾರಿನಲ್ಲಿ ಪರಾರಿಯಾದರು. ಅವರು ತಪ್ಪು ಮಾಡಿಲ್ಲದಿದ್ದರೆ, ಸಾಚಾಗಳೇ ಆಗಿದ್ದರೆ ಪೋಲಿಸರು, ಆಹಾರ ಇಲಾಖೆ ಅಧಿಕಾರಿಗಳು ಇದ್ದರೂ ಯಾಕೆ ಪರಾರಿಯಾಗಬೇಕಿತ್ತು? ಪರಾರಿಯಾದ ನ್ಯೂಸ್ ಅಲರ್ಟ್ ವಾಹಿನಿಯ ವರದಿಗಾರರನ್ನು ಪೋಲೀಸರು ವಿಚಾರಣೆ ಮಾಡಿದರೆ ಸತ್ಯ ಬಯಲಾಗಲಿದೆ.

ಹಣ ವಸೂಲಿಯ ಸ್ಟ್ರಿಂಗ್ ಆಪರೇಷನ್?

ಇನ್ನು ಇವರು ಅದೆಷ್ಟು ಸ್ಟ್ರಿಂಗ್ ಆಪರೇಷನ್ ಮಾಡಿ ಎಲ್ಲೆಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲು ಮಾಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ.ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಹಣ ಮಾಡುವ ದಂಧೆ ನಡೆಸುತ್ತಿರುವ ಕೆಲ ಯೂಟ್ಯೂಬ್ ವಾಹಿನಿಗಳ ಸಂಖ್ಯೆ ಹೆಚ್ಚಾಗಿದ್ದು,ಇವುಗಳ ಹಾವಳಿಯಿಂದ ಸರಿಯಾಗಿರುವ ಪತ್ರಕರ್ತರನ್ನು ಜನರು ಸಂಶಯದಿಂದ ನೋಡುವಂತಾಗಿದೆ. ಹಣ ಪಡೆದವರ ಮೇಲೆ ಪ್ರಕರಣ ದಾಖಲಾಗುವ ಜೊತೆಗೆ ಈ ರೀತಿ ಏಕೆ ಮಾಡುತ್ತೀರಿ ಎಂದು ಕೇಳಿದ ತಪ್ಪಿಗೆ ಮಂಡ್ಯ ಪತ್ರಕರ್ತರ ಮೇಲೂ ಪ್ರಕರಣ ದಾಖಲಾಗಿರುವುದು ಸರಿಯೇ? ಮಂಡ್ಯದ ಪತ್ರಕರ್ತರು ಎಲ್ಲಾ ತನಿಖೆಗೂ ಸಿದ್ದರಿದ್ದಾರೆ. ನ್ಯೂಸ್ ಅಲರ್ಟ್ ವಾಹಿನಿಯವರು ಸಾಚಾ ಆಗಿದ್ದರೆ ನಿಜವಾಗಿಯೂ ನಡೆದಿದ್ದೇನು ಎಂಬ ಬಗ್ಗೆ ಸತ್ಯ ಹೇಳಲಿ.

ಹಾಗೆಯೇ ಚಂದನ್ ಗೌಡ,ಮಂಜುನಾಥ್ ತುಮಕೂರಿನ ಅಕ್ಕಿ ಸಾಗಣೆ ಮಾಡುವ ವ್ಯಕ್ತಿಯೊಬ್ಬರಿಂದ ಹಣ ಪಡೆದ ಬಗ್ಗೆ ಮಂಡ್ಯ ರೈಸ್ ಮಿಲ್ ಸಂಘದ ಪದಾಧಿಕಾರಿಗಳು ತಿಳಿದು, ಅವರು ಪೋನ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಚಂದನ್ ಗೌಡ ಹಾಗೂ ಮಂಜುನಾಥ್ ಕೂಡ ಮೊಹಮದ್ ಎಂಬ ವ್ಯಕ್ತಿಗೆ ಪೋನ್ ಮಾಡಿ ಮಂಡ್ಯ ರೈಸ್ ಮಿಲ್ ಮಾಲೀಕರು ಪೋನ್ ಮಾಡಿದರೆ, ಬಂದವರು ನಾವಲ್ಲ ಬೇರೆಯವರು ಅಂತ ಹೇಳಿ, ಹುಬ್ಬಳ್ಳಿ ಕಡೆಯ ರಿಪೋರ್ಟ್‌ರ್ ಅಂತ ಹೇಳಿ ಅವರಿಗೆ ನಾನು ಹಣ ಕೊಟ್ಟಿದ್ದು ಎಂದು ಹೇಳುವಂತೆ ಮಾತಾನಾಡಿರುವುದರ ಆಡಿಯೋ ಸಾಕ್ಷಿ ಇದೆ.

(ಸ್ಟ್ರಿಂಗ್ ಆಪರೇಷನ್ ಮಾಡಿದವರ ಧ್ವನಿ)

ಆಗ ಮೆಹಮೂದ್ ಎಂಬ ವ್ಯಕ್ತಿ ನಾನು ನಿಮಗೆ ಹಣ ಕೊಟ್ಟಿದ್ದು ಸಾಕಾಗಿಲ್ವಾ,ಅಲ್ಲಿಗೆ ಏಕೆ ಹೋಗಿದ್ದೀರಾ,ಅಲ್ಲಿಗೆ ಹೋಗಿದ್ದು ಎಷ್ಟು ಸರಿ? ಎಂದೆಲ್ಲಾ ಮಾತನಾಡಿರುವುದು ಕೂಡಾ ಆಡಿಯೋದಲ್ಲಿದೆ.

ಮತ್ತೊಂದು ವೀಡಿಯೋದಲ್ಲಿ ಇವರಿಗೆ ಇಂತಿಷ್ಟೇ ಹಣ ನೀಡಿರುವ ಬಗ್ಗೆಯೂ ಕೂಡ ಮಾಹಿತಿ ಇದೆ. ಮಂಡ್ಯದ ಪತ್ರಕರ್ತರು ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದರೆ ಕ್ರಮಕೈಗೊಳ್ಳಿ ಎಂದು ಹೆಚ್.ಕೆ‌.ರೈಸ್ ಮಿಲ್ ನಲ್ಲಿದ್ದ ಪೋಲಿಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಹೇಳಿದಾಗ ಅವರು ಕ್ರಮಬದ್ಧವಾಗಿದೆ ಎಂದು ಹೇಳಿದ್ದಾರೆ.

ವಾಸ್ತವ ಸತ್ಯ ಹೀಗಿದ್ದರೂ ಮಂಡ್ಯದ ಪತ್ರಕರ್ತರು ಪಡಿತರ ಅಕ್ಕಿ ದಂಧೆಯ ಪರವಾಗಿದ್ದಾರೆ. ನಾವು ದಂಧೆಯ ವಿರುದ್ಧವಾಗಿದ್ದೇವೆ ಎಂದು ಸುದ್ದಿ ಮಾಡಿರುವ ನ್ಯೂಸ್ ಅಲರ್ಟ್ ವಾಹಿನಿಯವರು ತಾವು ಸಾಚಾ ಆಗಿದ್ದರೆ ಮಂಡ್ಯ ಪೋಲಿಸರ ಸಮ್ಮುಖದಲ್ಲಿ ಬಂದು ವಿಚಾರಣೆ ಎದುರಿಸಲಿ.

ಎಸ್ಪಿ ಯತೀಶ್ ಅವರು ನ್ಯೂಸ್ ಅಲರ್ಟ್ ವರದಿಗಾರ ಚಂದನ್ ಗೌಡ,ಮಂಜುನಾಥ್ ರೈಸ್ ಮಿಲ್ ಮಾಲೀಕರ ಜೊತೆ ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದರೆ ನಿಜವಾದ ಅಸಲಿಯತ್ತು ಗೊತ್ತಾಗುತ್ತದೆ.

ಹಣ ಮಾಡುವ ದಂಧೆ

ಕಿರುಗಾವಲು, ನಾಗಮಂಗಲ, ಬಸರಾಳು ಹನಕೆರೆ ಸೇರಿದಂತೆ ಹಲವು ಕಡೆಗಳಲ್ಲಿ ರೈಸ್ ಮಿಲ್ ಮಾಲೀಕರಿಂದ ಲಕ್ಷ ಲಕ್ಷ ಹಣ ಪಡೆದಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದ್ದು ,ಮಂಡ್ಯ ಪೋಲೀಸರು ಯಾವ ಮಾಧ್ಯಮದವರು ಬಂದು ಹಣ ವಸೂಲಿ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಿ.

ಮಂಡ್ಯ ಎಸ್ಪಿ ಯತೀಶ್ ಅವರು ದಕ್ಷ ಅಧಿಕಾರಿ ಎಂದು ಹೆಸರಾಗಿದ್ದು, ಈ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂಬುದು ಮಂಡ್ಯ ಜನತೆಯ ಹಾಗೂ ಪತ್ರಕರ್ತರ ಮನವಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!