Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಜಿಪಿ ರವಿಕಾಂತೇಗೌಡ ತೇಜೋವಧೆ ಖಂಡನೀಯ- ಪ್ರೊ.ಜಯಪ್ರಕಾಶ ಗೌಡ

ಪ್ರಸಿದ್ಧ ಸಾಹಿತಿ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ ಹಾಗೂ ದಕ್ಷ ಪೊಲೀಸ್ ಅಧಿಕಾರಿ ಎನಿಸಿರುವ ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಪಡೆ ಪರವಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಬೆಂಗಳೂರಿನ ಕೇಂದ್ರವಲಯದ ಐಜಿಪಿಯಾಗಿ ಕರ್ತವ್ಯ ನಿರತರಾಗಿರುವ ಡಾ.ಬಿ.ಆರ್.ರವಿಕಾಂತೇಗೌಡರು ಭೂ ಮಾಫಿಯಾ, ಮಟ್ಕಾ ಮತ್ತಿತರ ಸಾಮಾಜಿಕ ಪಿಡುಗಿನ ವಿರುದ್ಧ ಯಶಸ್ವಿ ಹೋರಾಟ ನಡೆಸಿ ಜನಮನ್ನಣೆ ಗಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕನ್ನಡದಲ್ಲಿ ಪರೇಡ್ ಮಾಡಿಸುವ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ. ಅಂತಹವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಇತ್ತೀಚೆಗೆ ಹುಲಿಯೂರುದುರ್ಗದ ಕೆ.ಜಿ.ಕೃಷ್ಣ ಎಂಬ ವ್ಯಕ್ತಿ ಬಿ.ಆರ್.ರವಿಕಾಂತೇಗೌಡರ ಹೆಸರನ್ನು ದುರುಪಯೋಗಪಡಿಸಿಕೊಂಡು ಬಡವರ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿದ;್ದರಿಂದ ಈತನ ಬಗ್ಗೆ ತನಿಖೆ ನಡೆಸಿ ಮೊಕದ್ದಮೆ ದಾಖಲಿಸಿ ಬಂಧಿಸಿದ್ದರು. ಇದರಿಂದ ಕುಪಿತಗೊಂಡ ಕೆ.ಜಿ.ಕೃಷ್ಣ ಖಾಸಗಿ ವಾಹಿನಿ ನೆರವಿನೊಂದಿಗೆ ರವಿಕಾಂತೇಗೌಡರ ವರ್ಚಸ್ಸಿಗೆ ಧಕ್ಕೆಯಾಗುವಂತಹ ಸುದ್ದಿಗಳನ್ನು ಬಿತ್ತರಿಸಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಹಾಗಂತ ಬಿ.ಆರ್.ರವಿಕಾಂತೇಗೌಡರನ್ನು ನಾವು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಸಮಾಜದಲ್ಲಿ ಗೌರವ ಸ್ಥಾನದಲ್ಲಿರುವವರ ಬಗ್ಗೆ ಆರೋಪ ಮಾಡುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಬೇಕು. ಅವರು ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಿ. ತಪ್ಪಿತಸ್ಥರೆಂದು ಕಂಡುಬಂದರೆ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಬೆಂಬಲವೂ ಇರುತ್ತದೆ. ಆದರೆ, ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಖಾಸಗಿ ಟಿವಿ ವಾಹಿನಿಯೊಂದರ ಮೂಲಕ ತೇಜೋವಧೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬಿ.ಆರ್.ರವಿಕಾಂತೇಗೌಡರಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ಶುಕ್ರವಾರ (ಅ.೬) ನಗರದಲ್ಲಿ ಜಿಲ್ಲಾ ಸ್ವಾಭಿಮಾನಿ ಪಡೆಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರೈತರ ಸೊಸೈಟಿ ಆವರಣದಲ್ಲಿರುವ ಕುವೆಂಪು ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಎಸ್.ಬಿ.ಶಂಕರಗೌಡ, ಗುರುಪ್ರಸಾದ್ ಕೆರಗೋಡು, ಪ್ರೊ.ಹುಲ್ಕೆರೆ ಮಹದೇವ್, ರಮೇಶ್, ಕೆ.ಸಿ.ರವೀಂದ್ರ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!