ಭಾರತೀಯ ರಿಸರ್ವ್ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿ ವಾಣಿಜ್ಯ ಬ್ಯಾಂಕುಗಳಿಗೆ ಆರ್ ಬಿಐ ನೀಡುವ ಸಾಲದ ದರವಾದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದೆ. ಇದರಿಂದ ರೆಪೊ ದರ ಈಗ ಶೇಕಡಾ 6.25ಕ್ಕೆ ಇಳಿದಿದೆ.
ಹಣಕಾಸು ನೀತಿ ಚೌಕಟ್ಟನ್ನು ಪರಿಚಯಿಸಿದಾಗಿನಿಂದ ಸರಾಸರಿ ಹಣದುಬ್ಬರ ಕಡಿಮೆಯಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಆರ್ಥಿಕತೆಯು ಜಾಗತಿಕ ಸವಾಲುಗಳಿಗೆ ನಿರೋಧಕವಾಗಿಲ್ಲದಿದ್ದರೂ ಪ್ರಬಲವಾಗಿದೆ ಎಂದು ಅವರು ಹೇಳಿದರು.
ಕಳೆದ 5 ವರ್ಷಗಳಲ್ಲಿ ಇದು ಮೊದಲ ಬಾರಿಗೆ ಆರ್ ಬಿಐ ರೆಪೊ ದರ ಕಡಿತ ಮಾಡಿದೆ. ಕಳೆದ ಎರಡು ವರ್ಷಗಳ ಕಾಲ ರೆಪೊ ದರವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿತ್ತು. ಆರ್ ಬಿಐ ರೆಪೊ ದರವನ್ನು ಕಡಿತಗೊಳಿಸಿದ್ದು 2020ರ ಮೇ ತಿಂಗಳಲ್ಲಿ.
ರೆಪೊ ದರವು ಇಲ್ಲಿಯವರೆಗೆ ಶೇಕಡಾ 6.50 ರಷ್ಟಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶದ ಆರ್ಥಿಕತೆಯು ಕನಿಷ್ಠ ಮಟ್ಟಕ್ಕೆ ಇಳಿದ ನಂತರ ಬಳಕೆಯನ್ನು ಹೆಚ್ಚಿಸಲು ಮಧ್ಯಮ ವರ್ಗಕ್ಕೆ ಇದುವರೆಗಿನ ಅತಿದೊಡ್ಡ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಅಂದರೆ 2025-26 ರ ಬಜೆಟ್‌ನಲ್ಲಿ ಘೋಷಿಸಿದ ವಾರದಲ್ಲಿ ಆರ್’ಬಿಐ ಈ ಕ್ರಮ ಕೈಗೊಂಡಿದೆ.




