Thursday, July 25, 2024

ಪ್ರಾಯೋಗಿಕ ಆವೃತ್ತಿ

ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?

ವಿವೇಕಾನಂದ ಎಚ್.ಕೆ

ಒಂದು ಸಲಹೆ ಮತ್ತು ಮನವಿ…..

ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ ಪುನರ್ ಸ್ಥಾಪನೆಯ ಪ್ರಯತ್ನ……

ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?………………..

ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ………

ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ, ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. ನಮ್ಮ ಅತ್ಯಂತ ಖಾಸಗಿ ಆರೋಗ್ಯದಿಂದ – ವಿಶ್ವದ ಎಲ್ಲಾ ಆಸಕ್ತಿದಾಯಕ ವಿಷಯಗಳನ್ನೂ ಚರ್ಚಿಸುತ್ತೇವೆ. ನಮ್ಮ ಆರ್ಥಿಕ ಸಂಕಷ್ಟ, ನೈತಿಕ, ಅನೈತಿಕ ಸಂಬಂಧಗಳು, ಇತರರ ಬಗ್ಗೆ ನಮಗಿರುವ ಪ್ರೀತಿ, ದ್ವೇಷ, ಅಸೂಯೆ ಎಲ್ಲವನ್ನೂ ಮಾತನಾಡುತ್ತೇವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲವೂ ನಮ್ಮ ನಮ್ಮ ಆಸಕ್ತಿಗೆ ಅನುಗುಣವಾಗಿ ಸಂಭಾಷಣೆ ಇರುತ್ತದೆ. ಕೆಲವೊಮ್ಮೆ ಗಾಢ ಸ್ನೇಹ ಇರಬಹುದು ಅಥವಾ ಕೆಲವೊಮ್ಮೆ ದೂರದ ಸ್ನೇಹ, ಪರಿಚಯ ಇರಬಹುದು…..

ಆದರೆ,
ಈ ಗೆಳೆತನದ ಸಮಯದಲ್ಲಿ ನಾವು ಆಡಿದ ಸಹಜ ಲೋಕಾಭಿರಾಮದ ಮಾತುಗಳನ್ನು ನಮಗೆ ತಿಳಿಯದಂತೆ ಜೊತೆಗಾರರಲ್ಲಿ ಒಬ್ಬರು ಧ್ವನಿಮುದ್ರಿಸಿಕೊಂಡಿದ್ದು, ಮತ್ತೆಂದೋ ನಮ್ಮ ಬಗ್ಗೆ ಕೋಪ, ಬೇಸರ ಉಂಟಾದಾಗ ಅದನ್ನು ತಮಗೆ ಅನುಕೂಲಕರವಾಗಿ ಬಹಿರಂಗ ಪಡಿಸಿದರೆ ನಮ್ಮ ಸ್ಥಿತಿ ಹೇಗಾಗಬಹುದು. ಇದು ಅತ್ಯಂತ ಹಿಂಸಾತ್ಮಕ ಅನುಭವ ನೀಡುತ್ತದೆ. ಮಹಿಳೆಯರ ವಿಷಯದಲ್ಲಿ ಇನ್ನೂ ಕಠೋರವಾಗಿ ಇದು Blackmail ಆಗಿ ಅವರ ಬದುಕಿಗೇ ಬೆಂಕಿ ಹಚ್ಚುವ ಸಾಧ್ಯತೆಯೇ ಹೆಚ್ಚು……

ಇದು ಸರಿಯೇ ? ತಪ್ಪೇ ?……,

ನನ್ನ ದೃಷ್ಟಿಯಲ್ಲಿ ಇದು ಅತ್ಯಂತ ಅಮಾನವೀಯ, ಹೇಸಿಗೆ, ಅನಾಗರಿಕ ಮತ್ತು ಮಾನವೀಯ ನಂಬುಗೆಗೆ ಮಾಡಬಹುದಾದ ಬಹುದೊಡ್ಡ ಮೋಸ……

ನಾವು ಯಾವುದೋ ಪಕ್ಷ, ಸಂಘಟನೆ, ಸಂಸ್ಥೆಯ ಅಧಿಕೃತ ವಕ್ತಾರರೋ, ಸರ್ಕಾರಿ ಅಧಿಕಾರಿಯೋ ಆಗಿದ್ದು, ತುಂಬಾ ಜವಾಬ್ದಾರಿ ಸ್ಥಾನದಲ್ಲಿದ್ದು, ದೇಶ ಅಥವಾ ಸಮಾಜ ದ್ರೋಹದ ಅಥವಾ ಕಾನೂನಿಗೆ ವಿರುದ್ದವಾದ ಚಟುವಟಿಕೆಗಳ ಸಂದರ್ಭದಲ್ಲಿ ಇದು ಒಂದಷ್ಟು ಸಹನೀಯ. ಅದನ್ನು ಹೊರತುಪಡಿಸಿ ನಮ್ಮ ಲೋಕಾಭಿರಾಮದ, ಬೇಸರ ಕಳೆಯುವ, ಆಸಕ್ತಿಯ ವಿಷಯಗಳನ್ನು ಮಾತನಾಡುವಾಗ ನಾವು ವ್ಯಕ್ತಪಡಿಸುವ ಕೋಪ, ಆಕ್ರೋಶ, ದುಃಖ, ಅಸೂಯೆ, ತಮಾಷೆ, ಪ್ರೀತಿ, ಪ್ರೇಮ ಮತ್ತು ಇನ್ನೊಬ್ಬರ ಬಗ್ಗೆ ಸಹಜವಾದ ಉದ್ದೇಶಪೂರ್ವಕವಲ್ಲದ ಕೊಂಕುನುಡಿಗಳನ್ನು ಮುದ್ರಿಸಿ ಬಹಿರಂಗಪಡಿಸಿದರೆ ಆಗುವ ಮರ್ಮಾಘಾತ ಯಾವ ಶತ್ರುವಿಗೂ ಬೇಡ ಎನಿಸುತ್ತದೆ……

ಹಾಗಾದರೆ ಇದನ್ನು ತಡೆಯುವುದು ಹೇಗೆ ?

ಇದು ಖಂಡಿತ ಈಗಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಹಾಗಂತ ಕೇವಲ ಅಧಿಕೃತ, ಕೃತಕ, ಮೇಲ್ಮಟ್ಟದ ತೋರಿಕೆಯ ಮಾತುಗಳನ್ನು ಮಾತ್ರ ಆಡುತ್ತಾ ಇರಲು ಸಾಧ್ಯವೇ ? ಮುಕ್ತ ಮಾತುಕತೆ ಬೇಡವೇ ? ಮುಕ್ತ ಮಾತುಕತೆಯಿಂದಲೆ ಅಲ್ಲವೇ ವ್ಯಕ್ತಿಗಳು ಸ್ಪಷ್ಟವಾಗುವುದು. ಸ್ನೇಹ ಸಂಬಂಧಗಳು ಬಲವಾಗುವುದು. ಇಲ್ಲದಿದ್ದರೆ ಪ್ರಿತಿಯ ಮಾತನ್ನು ಸಹ ತುಂಬಾ ಯೋಚಿಸಿ ಬರೆದುಕೊಂಡು ಮಾತನಾಡಬೇಕಾಗುತ್ತದೆ. ಅದು ಸಾಧ್ಯವೇ ?. ಅದು ಅಸಹಜ ಮತ್ತು ಕೃತಕ ಎನಿಸುವುದಿಲ್ಲವೇ ?…..

ಅದಕ್ಕಾಗಿ ನಾವು ಮಾಡಬಹುದಾದ ಕೆಲಸವೆಂದರೆ, ಈ ರೀತಿಯ ಖಾಸಗಿ ಮಾತುಕತೆಗಳನ್ನು ನಮ್ಮ ಜೊತೆಗಾರರು ಬಹಿರಂಗ ಪಡಿಸಿದ ಸಂದರ್ಭದಲ್ಲಿ ಅದು ಎಷ್ಟೇ ಗಂಭೀರ ವಿಷಯವಾಗಿದ್ದರೂ ಅದನ್ನು ಇತರರು ನಿರ್ಲಕ್ಷಿಸಬೇಕು. ಖಾಸಗಿ ಸಂಭಾಷಣೆ ಬಹಿರಂಗ ಪಡಿಸಿದವರೇ ಮೊದಲ ಅಪರಾಧಿ ಮತ್ತು ನಂಬಿಕೆಯ ವಂಚಕ ಎಂದು ಒಕ್ಕೊರಲಿನಿಂದ ಖಂಡಿಸಬೇಕು. ನಮ್ಮ ಗಮನಕ್ಕೆ ಬಾರದೆ ಧ್ವನಿಮುದ್ರಿಸಿಕೊಂಡಿರುವುದೇ ದೊಡ್ಡ ದ್ರೋಹ. ಧ್ವನಿಮುದ್ರಣದಲ್ಲಿ ಇರುವ ವಿಷಯ ಈ ಕಾರಣದಿಂದಲೇ ತನ್ನ ಮಹತ್ವ ಕಳೆದುಕೊಳ್ಳುವಂತೆ ಮಾಡಬೇಕು. ಆಗ ಈ ರೀತಿಯ ನಂಬಿಕೆ ದ್ರೋಹದ ಕೃತ್ಯಗಳಿಗೆ ಕಡಿವಾಣ ಹಾಕಬಹುದು……

ಗೆಳೆತನದಲ್ಲಿ ಇನ್ನಷ್ಟು ಮುಕ್ತ ಮತ್ತು ಆತ್ಮೀಯ ವಾತಾವರಣ ನಿರ್ಮಿಸಿ ಸ್ವತಂತ್ರವಾಗಿ ಜೊತೆಗಾರರೊಂದಿಗೆ ಮಾತನಾಡಬಹುದು. ಇದನ್ನು ಎಲ್ಲರೂ ಒಟ್ಟಾಗಿ ಪಾಲಿಸೋಣ ಎಲ್ಲಾ ಸಂಬಂಧಗಳಲ್ಲಿಯೂ…..

(ಕಾನೂನು ಬಾಹಿರ ಕ್ರಿಮಿನಲ್ ಚಟುವಟಿಕೆಗಳಿಗೆ ಅಥವಾ ಅತ್ಯಗತ್ಯ ವ್ಯಾವಹಾರಿಕ ಅನಿವಾರ್ಯತೆಗೆ ಅಥವಾ ಅನಿವಾರ್ಯ ಮುನ್ನೆಚ್ಚರಿಕೆಗೆ ಇದು ಅನ್ವಯಿಸುವುದಿಲ್ಲ. ಕೇವಲ ಸಹಜ ಗೆಳೆತನದ ಸಹಜ ವರ್ತನೆಗಳಿಗೆ ಮಾತ್ರ ಅನ್ವಯ )
ವಿಭಿನ್ನ ಸಲಹೆಗಳಿಗೆ ಸ್ವಾಗತ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!