Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲಿ – ರೆಹಮಾನ್ ಖಾನ್

ಶಿಸ್ತು ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ‌ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ ರೆಹಮಾನ್ ಖಾನ್ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿಗಳ ನಾಯಕತ್ವ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು..
ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ತೀವ್ರವಾದ ಸ್ಪರ್ಧೆಯನ್ನು ನೀಡಿ, ಗುರಿ ಸಾಧನೆಯನ್ನು ಮಾಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿ ಹಾಕಿ ಆತ್ಮವಿಶ್ವಾಸದಿಂದ ಮುನ್ನಡೆದು ಸಾಧನೆ ಮಾಡಬೇಕು ಎಂದರು.
ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರದ ಶಕ್ತಿಯು ಸಾಧಕರ ಸ್ವತ್ತೇ ಹೊರತು, ಸೋಮಾರಿಗಳ ಸ್ವತ್ತಲ್ಲವಾದ್ದರಿಂದ, ವಿದ್ಯಾರ್ಥಿಗಳು ಸೃಜನಶೀಲತೆ  ಹಾಗೂ ಕ್ರಿಯಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು ಎಂದರು.
ಕೆ ಆರ್ ಪೇಟೆ ಪಟ್ಟಣವು ಇಂದು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ವಾಗಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಮುನ್ನಡೆಸುತ್ತಿರುವ ಸ್ಕೂಲ್ ಆಫ್ ಇಂಡಿಯಾದ ಅಧ್ಯಾಪಕರ ಬದ್ಧತೆ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಭಾಗದ ಎನ್.ಸಿ.ಸಿ ಕಮಾಂಡೆಂಟ್ ಕರ್ನಲ್ ಆರ್ ಆರ್ ಮೆನನ್ ಕೂಲ್ ಅವರು, ಶಾಲೆಯ ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣ, ವಿದ್ಯಾರ್ಥಿಗಳಲ್ಲಿನ ಶಿಸ್ತು ಸಂಯಮವನ್ನು ಕಂಡು ಸಂತೋಷವಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಗುಣಮಟ್ಟವು ಯಾವುದೇ ಅಂತರಾಷ್ಟ್ರೀಯ ಶಾಲೆಯ ಗುಣಮಟ್ಟಕ್ಕೆ ಕಡಿಮೆಯೇನಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗೆ ಎನ್.ಸಿ.ಸಿ ಘಟಕವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ಕೂಲ್ ಆಫ್ ಇಂಡಿಯಾ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳು, ಅಗ್ನಿ, ಜಲ, ವಾಯು, ಭೂಮಿ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ನಾಯಕರು ಹಾಗೂ ಉಪನಾಯಕರುಗಳಿಗೆ ಎನ್ ಸಿ ಸಿ ಕಮಾಂಡೆಂಟ್ ಕರ್ನಲ್ ಮೆನನ್  ಅಧಿಕಾರ ಹಸ್ತಾಂತರ ಮಾಡಿದರು..
ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಸಮರ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಆಯೇಷ ರೆಹಮಾನ್ ಖಾನ್, ಶಾಜಿಯಾ ಮಕ್ಸೂದ್, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಅನುಪಮಾ ರಾಮಚಂದ್ರ, ಕನ್ನಿಕಾ ಅರವಿಂದ್, ಅಂಜಲಿ ತ್ರಿವೇದಿ, ಮೇರಿ ಫಾತಿಮಾ ಜಾರ್ಜ್, ಶಾಲೆಯ ಮುಖ್ಯ ಶಿಕ್ಷಕಿ ಶೈನಿ ಡಯಾಸ್, ಪುರಸಭೆ ಮಾಜಿ ಅಧ್ಯಕ್ಷ ಕೆ ಗೌಸ್ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಕೂಲ್ ಆಫ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳು ನೀಡಿದ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಹಾಗೂ ಅತಿಥಿಗಳ ಮೆಚ್ಚುಗೆಗೆ ಪಾತ್ರವಾದವು. ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭವು  ನಾಡಗೀತೆಯೊಂದಿಗೆ ಆರಂಭ ವಾಗಿ ರಾಷ್ಟ್ರಗೀತೆಯ ಪಠಣ ದೊಂದಿಗೆ ಮುಕ್ತಾಯ ಗೊಂಡಿತು .

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!