Friday, September 20, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ನೀರು ಬಿಡುಗಡೆ| ಸರ್ಕಾರದ ವಿರುದ್ದ ಕಪ್ಪುಬಾವುಟ ಪ್ರದರ್ಶನ: ರೈತರ ಬಂಧನ

ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಲವಾರು ರೈತರು, ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದದರು. ಈ ಸಂದರ್ಭದಲ್ಲಿ ಕಾವೇರಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಮಂಡ್ಯ ನಗರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಗ್ಯಾರಂಟಿ ಸಮಾವೇಶ ದಿನವೇ ಸರ್ ಎಂ ವಿ ಪ್ರತಿಮೆ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾವೇರಿ ಹೋರಾಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಪ್ಪು ಬಾವುಟ ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿಯಲ್ಲಿ ಪ್ರತಿಭಟಿಸಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ. ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಅಂಬುಜಮ್ಮ,ರೈತ ಸಂಘದ ಇಂಡು ವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್,ಮಹಾಂತಪ್ಪ ಸೇರಿದಂತೆ ಹಲವರನ್ನು ಪೊಲೀಸರು ಕರೆದೊಯ್ದರು.

ತಮಿಳುನಾಡಿಗೆ ನೀರು ಬಿಟ್ಟು ರೈತರನ್ನು ವಂಚಿಸಿದ ಸರ್ಕಾರವನ್ನು ಪ್ರಶ್ನಿಸಿದ ಪ್ರತಿಭಟನಾಕಾರರನ್ನು ಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗಾಗಿ ಗ್ಯಾರಂಟಿ ಸಮಾವೇಶವನ್ನ ಮಾಡುತ್ತಿದ್ದಾರೆ, ನೆರೆ ರಾಜ್ಯಕ್ಕೆ ನೀರು ಹರಿಸಿ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ರಾಜ್ಯ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಕೆ ಆರ್ ಎಸ್ ಸೇರಿದಂತೆ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗಿವೆ, ನೀರಿಲ್ಲದ ಹಿನ್ನಲೆಯಲ್ಲಿ ರೈತರು ಹೊಸ ಬೆಳೆ ಹಾಕಿಲ್ಲ, ಜಮೀನಿನಲ್ಲಿರುವ ಬೆಳೆಗೆ ನೀರು ನೀಡಿಲ್ಲ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ, ಇಂತಹ ಸಂಕಷ್ಟ ಪದ್ದತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಕಿಡಿಕಾರಿದರು.

ಜನ – ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ನಾಲೆಗಳಿಗೆ ನೀರು ಬಿಡುಗಡೆ ಮಾಡಿ ಎಂದು ರೈತರು ಒತ್ತಾಯ ಮಾಡಿದರು ಸಹ ನೀರು ಬಿಡದ ಸರ್ಕಾರ ಇದೀಗ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುವ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಅಣೆಕಟ್ಟೆ ಭರ್ತಿ ಮಾಡಿಕೊಳ್ಳಲು ನದಿಗೆ ನೀರು ಬಿಡಲಾಗಿದೆ ಎಂದು ಸಬೂಬು ಹೇಳುತ್ತಿರುವ ಸರ್ಕಾರ ರೈತರನ್ನು ದಿಕ್ಕು ತಪ್ಪಿಸುತ್ತಿದೆ, ಕೆ ಆರ್ ಎಸ್ ಅಣೆಕಟ್ಟೆಯಿಂದ ನಾಲ್ಕು ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.

ರೈತರ ಹಿತ ಕಾಪಾಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಬೆಳೆ ರಕ್ಷಣೆಗೆ ನೀರು ನೀಡದೆ ತಮಿಳುನಾಡಿಗೆ ನೀರು ಬಿಡುವ ಮೂಲಕ ವಚನಭ್ರಷ್ಟರಾಗಿದ್ದಾರೆ, ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!