Friday, September 20, 2024

ಪ್ರಾಯೋಗಿಕ ಆವೃತ್ತಿ

ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ: ಚಲುವರಾಯಸ್ವಾಮಿ ಸೂಚನೆ

ಜನ ಸಾಮನ್ಯರ ಸಂಕಷ್ಟಕ್ಕೆ ಸ್ಪಂದಿಸಿ‌, ಕಾಲಮಿತಿ ಹಾಗೂ ಗುಣಮಟ್ಟದೊಂದಿಗೆ ಯೋಜನೆಗಳನ್ನು ಅನುಷ್ಟಾನ ಮಾಡುವಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು, ಜಾನುವಾರುಗಳ‌ ಮೇವಿನ ಸಮಸ್ಯೆ ತಲೆದೋರದಂತೆ ಯೋಜನೆ ರೂಪಿಸಿ, ನಿರ್ವಹಣೆ ಮಾಡಿ ಎಂದು ಸಚಿವರು ಸೂಚನೆ ನೀಡಿದರು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಾರದು , ಖಾಸಗಿ ಕೊಳವೆಯ ಬಾವಿಗಳನ್ನು ಬಾಡಿಗೆ ಪಡೆಯಿರಿ, ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ‌ವೂ ನೀರು ಪೂರೈಸಿ ‌. ಅಗತ್ಯ ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ಜಾನುವಾರುಗಳಿಗೆ ಮೇವಿನ ಬ್ಯಾಂಕ್, ಗೋಶಾಲೆ ಪ್ರಾರಂಭಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ಲೋಪ ಸಹಿಸುವುದಿಲ್ಲ

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪ ಸಹಿಸುವುದಿಲ್ಲ. ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೌಲಭ್ಯ ತಲುಪಬೇಕು. ಮನೆ ಮನೆ ಸಮೀಕ್ಷೆ ನಡಿಸಿ ಸೌಲಭ್ಯ ತಲುಪದ ಅರ್ಹರನ್ನು ಗುರುತಿಸಿ ಪಟ್ಟಿ ಮಾಡಿ, ಗಣಕೀರಣ ಪೂರ್ಣಗೊಳಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಜನಪರವಾಗಿ ಕೆಲಸ ಮಾಡಬೇಕು. ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಸಚಿವರು ಎಚ್ಚರಿಕೆ ‌ನೀಡಿದರು. ಕೆ.ಆರ್ .ಎಸ್ ಜಲಾಶಯದ ನೀರಿನ ಲಭ್ಯತೆಯನ್ನು ಎಚ್ಚರಿಕೆಯಿಂದ ನಿಭಾಯಿಸಿ, ಮುಂದಿನ ಮಳೆಗಾಲ ಪ್ರಾಂಭದ ವರಗೆ ಕುಡಿಯಲು ಲಭ್ಯ ವಾಗುವಂತೆ ನಿರ್ವಹಣೆ ಮಾಡಿ ಎಂದು ಸಚಿವರು ಸೂಚಿಸಿದರು

ಮುಂದಿನ 10 ದಿನದೊಳಗೆ ಫ್ರೂಟ್ಸ್ ಐಡಿ ಹಾಗೂ ಕೆ.ವೈ.ಸಿ ನೋಂದಣಿ, ದಾಖಲೆ ತಿದ್ದುಪಡಿ, ಆಧಾರ್ ಜೋಡಣೆ ಪೂರ್ಣಗೊಳ್ಳಬೇಕು ಎಂದು ಕೃಷಿ ಸಚಿವರು ಗಡುವು ನೀಡಿದರು.

ಏಪ್ರಿಲ್‌ ವೇಳೆಗೆ ಹಂತ ಹಂತವಾಗಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ.
ಅಲ್ಲಿಯವರಗೆ ಇರುವ ಅಧಿಕಾರಿ, ಸಿಬ್ಬಂದಿ ಯಾವುದೇ ಕೊರತೆಯಾಗದಂತೆ ಕೆಲಸ ಮಾಡಿ , ಶೇ 100 ರಷ್ಟು ಆರ್ಥಿಕ ಭೌತಿಕ ಗುರಿ ಸಾಧನೆ ಮಾಡಿ ಎಂದರು.

ತೆಂಗಿನ ಬೆಳೆಗೆ ಕಾಡುತ್ತಿರುವ ಕಪ್ಪು ತಲೆ ಹುಳ ನಿಯಂತ್ರಿಸಿ, ರೈತರಿಗೂ ಜಾಗೃತಿ ಮೂಡಿಸಿ ಎಂದು ಸಚಿವರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ತೂಕದಲ್ಲಿ ವ್ಯತ್ಯಾಸ

ಟಿ.ಎ.ಪಿ.ಸಿ ಎಂ ಎಸ್ ಗೆ ಎಫ್ ಸಿ ಐ ನಿಂದ ಬರುವ ಪಡಿತರದ ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ .ಇದರಿಂದ ನ್ಯಾಯಬೆಲೆ ಅಂಗಡಿಗೆ ಹೋಗುವ ಪಡಿತರ ಕೊರತೆಯಾಗುತ್ತಿದೆ ಎಂದು ಶಾಸಕ ನರೇಂದ್ರ ಸ್ವಾಮಿ ಅವರು ಪ್ರಸ್ತಾಪ‌ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತೂಕ ಮತ್ತು ಅಳತೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು ಲೋಪಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತ್ವರಿತ ಅರ್ಜಿ ವಿಲೇವಾರಿಗೆ ಸೂಚನೆ

ಅಕ್ರಮ ಸಕ್ರಮ ಯೋಜನೆಯಡಿ ನಮೂನೆ ಸಲ್ಲಿಸಲಾಗಿರುವ ನಮೂನೆ 50-53 ಹಾಗೂ 94ಸಿ ,
ಸಿ.ಸಿ,ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ,ಅರ್ಹ ಬಡವರಿಗೆ ತಾಂತ್ರಿಕ ತೊಂದರೆ ನೀಡಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಸಚಿವರು ಸಲಹೆ ನೀಡಿದರು.

ಎಲ್ಲಾ ಗ್ರಾಮಗಳಿಗೆ ಸ್ಮಶಾನ

ಎಲ್ಲಾ ಗ್ರಾಮಗಳಿಗೂ ಸ್ಮಶಾನ ಅಗತ್ಯ . ಸ್ಮಶಾನ ಇರದ ಗ್ರಾಮ ಗುರುತುಸಿ ಕಾಯ್ದಿರಿಸಿ ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ಕುಮಾರ್ ಅವರು ಈವರಗಿನ ಸ್ಥಿತಿಗತಿ ವಿವರ ನೀಡಿದರು‌.

ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಬಗ್ಗೆ ಎಲ್ಲಾ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಎನ್ ಹೆಚ್ ಎ .ಐ ಅಧಿಕಾರಿಗಳು ತಾತ್ಸಾರ ಧೋರಣೆ ಬಿಟ್ಟು ಮುಂದುವರೆದು ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಯೋಜನೆ ಯಲ್ಲಿ ಇರುವಂತೆ ವೈಜ್ಞಾನಿಕವಾಗಿ ಕೆಲಸ ಮಾಡಬೇಕು, ಎಲ್ಲಾ ಕಡೆಗಳಲ್ಲಿ ಸಂಚಾರ ಯೋಗ್ಯ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಅರಣ್ಯ ಇಲಾಖೆ ನಿರ್ಲಕ್ಷ್ಯ ಸಲ್ಲ

ಜಿಲ್ಲೆಯಲ್ಲಿ ಕಾಡು ಪ್ರಣಿಗಳ ದಾಳಿ ಹೆಚ್ಚುತ್ತಿದ್ದು ಜನ ಜಾನುವಾರುಗಳ ಜೀವ ಹಾನಿಯಾದಲ್ಲಿ ಇಲಾಖೆ ಅಧಿಕಾರಿ ಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕೃಷಿ ಸಚಿವರು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿರುವ ದೂರುಗಳಿದ್ದು ಅಬಕಾರಿ‌ ಇಲಾಖೆ ಅಧಿಕಾರಿಗಳು ನಿಗಾವಹಿಸಿ ದಾಳಿ ಹೆಚ್ಚಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು

ಸಭೆಯಲ್ಲಿ ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ, ರವಿಕುಮಾರ್ ಗೌಡ (ಗಣಿಗ), ಉದಯ್ ಗೌಡ, ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಂದ್ರ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಅಪರ ಜಿಲ್ಲಾಧಿಕಾರಿ ನಾಗರಾಜ್ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!