Thursday, September 19, 2024

ಪ್ರಾಯೋಗಿಕ ಆವೃತ್ತಿ

ಅರಿಸಿನ ಕುಂಕುಮಕ್ಕೆ ನಿರ್ಬಂಧ| ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯಿಂದ ಮುಖಭಂಗ ಅನುಭವಿಸಿದ ತೇಜಸ್ವಿ ಸೂರ್ಯ !

ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಬಳಸುವ ವಿಚಾರವಾಗಿ ಅಕ್ಟೋಬರ್ 18ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಈ ಆದೇಶದಲ್ಲಿ, ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಈ ಆದೇಶ ಹೊರಡಿಸಿತ್ತು. ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ಸಿದ್ದರಾಮಯ್ಯ ಸರ್ಕಾರ ಕೂಡ ಪಾಲಿಸಿತ್ತು.

“>

ಆದರೆ ಈ ಆದೇಶವನ್ನೇ ಟ್ವೀಟ್ ಮಾಡುವ ಮೂಲಕ ಅಪಪ್ರಚಾರ ನಡೆಸಿ, ಆ ಮೂಲಕ ಕೋಮು ಆಯಾಮ ನೀಡಲು ಹೊರಟಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತೀವ್ರ ಮುಖಭಂಗವಾಗಿದೆ. ನಿನ್ನೆ ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕದ ಜೊತೆಗೆ ತಮಿಳುನಾಡು ಸರ್ಕಾರದ ಆದೇಶವನ್ನೂ ಹಂಚಿಕೊಂಡಿದ್ದರು.

ಟ್ವೀಟ್‌ನಲ್ಲಿ, ‘ಎರಡು ರಾಜ್ಯಗಳು. ಎರಡು ಸರ್ಕಾರಿ ಆದೇಶಗಳು. ಒಂದು ಗುರಿ – ಆಯುಧ ಪೂಜೆ. ಇಂಡಿಯಾ ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲಿನ ದ್ವೇಷ ಮತ್ತು ತಿರಸ್ಕಾರದಲ್ಲಿ ಒಂದಾಗಿದ್ದಾರೆ. ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂ ಸರ್ಕಾರಿ ಆದೇಶಗಳನ್ನು ಹೊರಡಿಸಿವೆ. ಹಲವಾರು ವರ್ಷಗಳಿಂದ ದಕ್ಷಿಣ ಭಾರತದ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಆದರೆ ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಮೈತ್ರಿಕೂಟದವರು ಗುರಿ ಮಾಡಿಕೊಂಡಿದ್ದಾರೆ’ ಎಂದು ಕೋಮು ಆಯಾಮ ನೀಡಿದ್ದರು. ಇದೇ ಟ್ವೀಟ್ ಅನ್ನು ಆಧರಿಸಿ ಕೆಲವೊಂದು ‘ಗೋಧಿ’ ಮಾಧ್ಯಮಗಳು ಪರಿಶೀಲನೆ ನಡೆಸದೆ ವರದಿ ಕೂಡ ಪ್ರಕಟಿಸಿ, ಕಾಂಗ್ರೆಸ್‌ ಸರ್ಕಾರ ಹಿಂದು ವಿರೋಧಿ ಎಂಬಂತೆ ಬಿಂಬಿಸಲು ಹೊರಟಿದ್ದೂ ಇದೆ.

ಈ ಹಿನ್ನೆಲೆಯಲ್ಲಿ ಈ ಮಾಹಿತಿ ಅರಿತ ಸಿಎಂ ಸಿದ್ದರಾಮಯ್ಯ, ಕೂಡಲೇ ಸ್ಪಷ್ಟೀಕರಣ ನೀಡಿದ್ದರಿಂದ ಕೋಮು ಆಯಾಮ ನೀಡಲು ಹೊರಟಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ತೀವ್ರ ಮುಖಭಂಗವಾಗಿದೆ.

“>

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಸರ್ಕಾರ ಹೊರಡಿಸಿರುವ ಈ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಲ್ಲದೇ, 2021 ಹಾಗೂ 2022 ರ ಸರ್ಕಾರಿ ಆದೇಶ ಅಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಆದೇಶದ ಬಗ್ಗೆ ಸ್ಪಷ್ಟೀಕರಣ ನೀಡಿದ ನಂತರ, ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಒಳ್ಳೆಯದಾಯಿತು ಎಂದು ತಿಳಿಸಿದ್ದಾರೆ.

ಆ ಬಳಿಕ ಸಂಸದನ ಕಾಲೆಳೆದಿರುವ ನೆಟ್ಟಿಗರು, ಸುಳ್ಳು ಸುದ್ದಿ ಹರಡುವುದರಲ್ಲಿ ನೀವು ನಿಸ್ಸೀಮರು ಎಂದು ಎಲ್ಲರಿಗೂ ಗೊತ್ತು. ಇಂತಹ ವಿಚಾರಗಳಲ್ಲಿ ಬಹಳಷ್ಟು ಆಸಕ್ತಿ ತೋರುವ ನೀವು ಅಭಿವೃದ್ಧಿಯ ವಿಚಾರದಲ್ಲಿ ಯಾಕೆ ಸುಮ್ಮನಿರುತ್ತೀರಾ? ಇಂಥ ಸುಳ್ಳುಗಳನ್ನ ಹೇಳಿಕೊಂಡು ಬಾಳುವ ಬದುಕು ಬೇಕೇ? ಸಂಸದನ ಸ್ಥಾನಕ್ಕಿರುವ ಘನತೆಯನ್ನಾದರೂ ಉಳಿಸಿಕೊಳ್ಳಿ’ ಎಂದು ಪಾಠ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಈ ಹಿಂದೆ ಇಂಥದ್ದೇ ಸುಳ್ಳು ಸುದ್ದಿಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿರುದ್ಧವೂ ಹರಡಿದ್ದರು. ಇದನ್ನೇ ನಂಬಿಕೊಂಡು ಸುದ್ದಿ ಪ್ರಸಾರ ಮಾಡಿದ್ದ ಆಜ್‌ತಕ್‌ ಸುದ್ದಿವಾಹಿನಿ ಹಾಗೂ ಅದರ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಸದ್ಯ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!