Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿದ್ಯಾರ್ಥಿ ನಿಲಯಗಳ ಪುನರಾರಂಭಕ್ಕೆ ಸಕಲ ಸಿದ್ದತೆ : ಶೇಖ್ ತನ್ವೀರ್ ಆಸಿಫ್

2024-25ನೇ ಶೈಕ್ಷಣಿಕ ಸಾಲಿನ ಶಾಲಾ ತರಗತಿಗಳು ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ಪುನರಾರಂಭವನ್ನು ಸಂಭ್ರಮದಿಂದ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಮಂಡ್ಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಹಾಯಕ ನಿರ್ದೇಶಕರು, ನಿಲಯ ಮೇಲ್ವಿಚಾರಕರುಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದರು.

109 ವಿದ್ಯಾರ್ಥಿ ನಿಲಯಗಳು

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 109 ವಿದ್ಯಾರ್ಥಿ ನಿಲಯಗಳು, ಸಮಾಜ ಕಲ್ಯಾಣ ಇಲಾಖೆಯ 46 ವಿದ್ಯಾರ್ಥಿ ನಿಲಯಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 02 ವಸತಿ ಶಾಲೆಗಳು ಮತ್ತು ಒಟ್ಟು 05 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಬೇಸಿಗೆ ರಜೆಯ ನಂತರ ಪುನರಾರಂಭಗೊಳ್ಳುತ್ತಿರುವುದರಿಂದ ವಿದ್ಯಾರ್ಥಿನಿಲಯಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ನಿಲಯಾರ್ಥಿಗಳಿಗೆ ಸ್ವಾಗತ ಕೋರುವಂತೆ ಸೂಚಿಸಿದರು.

ಸ್ವಚ್ಚತಾ ಕಾರ್ಯ

ವಿದ್ಯಾರ್ಥಿ ನಿಲಯಗಳ ಪ್ರಾರಂಭದ ಮುನ್ನ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಶಯನ ಕೊಠಡಿ, ಊಟದ ಕೊಠಡಿ, ವಿದ್ಯಾರ್ಥಿನಿಲಯಗಳ ಒಳ ಮತ್ತು ಹೊರ ಆವರಣ, ನಿಲಯದ ನೀರಿನ ಟ್ಯಾಂಕ್ ಮತ್ತು ಸಂಪುಗಳ ಸ್ವಚ್ಚತೆಯ ಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಹಾಗೂ ನಿಲಯದ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಸೂಚಿಸಿದರು.

ಶೌಚಾಲಯ ಹಾಗೂ ಸ್ನಾನದ ಗೃಹಗಳ ಕಿಟಕಿ, ಬಾಗಿಲುಗಳು ಹಾಳಾಗಿದ್ದಲ್ಲಿ ಹಾಗೂ ಸೋಲಾರ್ ವಾಟರ್ ಹೀಟರ್ ಸುಸ್ಥಿತಿಯಲ್ಲಿ ಇಲ್ಲದೇ ಇದ್ದಲ್ಲಿ ದುರಸ್ಥಿಪಡಿಸಲು ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದರು.

ಅಡುಗೆ ತಯಾರಕರು ಅಡುಗೆ ಕೋಣೆಯನ್ನು ಆಗಿಂದಾಗ್ಗೆ ಶುಚಿಗೊಳಿಸುವಂತೆ ಹಾಗೂ ಅಡುಗೆ ತಯಾರಿಕೆಗೆ ಶುದ್ಧ ಕುಡಿಯುವ ನೀರನ್ನು ಬಳಸುವಂತೆ ಮತ್ತು ಅಡುಗೆ ಮಾಡುವ ಪಾತ್ರೆಗಳನ್ನು ಸಮರ್ಪಕವಾಗಿ ಶುಚಿಗೊಳಿಸುವಂತೆ ಸೂಚಿಸಿದರು.

ಕುಡಿಯುವ ನೀರಿನ ಸಂಪರ್ಕ ಇಲ್ಲದಿದ್ದಲ್ಲಿ ಸಂಬಂಧಪಟ್ಟ ನಗರಸಭೆ/ ಪುರಸಭೆ/ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಕುಡಿಯುವ ನೀರಿನ ಸೌಲಭ್ಯ ಪಡೆದುಕೊಳ್ಳಲು ಅಗತ್ಯಕ್ರಮವಹಿಸುವಂತೆ ಸೂಚಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕ ವೈರ್ ಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಿದರು.

ಕೌನ್ಸಲಿಂಗ್ ಮಾಡಿಸಿ

ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳ ಚಲನ ವಲನಗಳ ಬಗ್ಗೆ ಹಾಗೂ ಇತರರೊಂದಿಗೆ ಹೆಚ್ಚಾಗಿ ಬೆರೆಯದ ವಿದ್ಯಾರ್ಥಿ/ವಿದ್ಯಾರ್ಥಿನಿಲಯರ ಕಡೆ ಹೆಚ್ಚಿನ ಗಮನಹರಿಸಿ ಅಂತಹ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಮಾಡಿಸಿ ಸಮಸ್ಯೆ ಪರಿಹರಿಸುವಂತೆ ವಾರ್ಡನ್‌ಗಳಿಗೆ ಸೂಚಿಸಿದರು.

ದಾಖಲಾತಿ ಕೊರತೆಯಿರುವ ವಿದ್ಯಾರ್ಥಿನಿಲಯಗಳ ಸಮೀಪದಲ್ಲಿರುವ ಶಾಲಾ/ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಲಯಗಳ ಪ್ರವೇಶ ಪಡೆದುಕೊಳ್ಳಲು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಿರ್ದೇಶನ ನೀಡವಂತೆ ಹಾಗೂ ಸಂಬAಧಪಟ್ಟ ನಿಲಯ ಮೇಲ್ವಿಚಾರಕರು ಪ್ರವೇಶಾತಿಗೆ ಸಂಬಂಧಿಸಿದಂತೆ ಜಾಹಿರಾತುಗಳ ಮೂಲಕ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಉತ್ತೇಜಿಸುವಂತೆ ಸೂಚಿಸಿದರು.

ನೀರಿನ ಶುಚಿತ್ವಕ್ಕೆ ಹೆಚ್ಚಿನ ಗಮನಹರಿಸಿ ನೀರಿನ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಿ ಶುದ್ದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಹಾಗೂ ಉತ್ತಮ ಆಹಾರ ಸಾಮಗ್ರಿಗಳು, ತಾಜಾ ತರಕಾರಿಗಳನ್ನು ಬಳಸುವುದು, ಮೆನುಚಾರ್ಟ್ ಪ್ರಕಾರ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡುವುದು ಹಾಗೂ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳು, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ನಿಲಯ ಮೇಲ್ವಿಚಾರಕರುಗಳಿಗೆ ಸೂಚಿಸಿದರು.

ಪ್ರತಿ ಮಾಹೆಯಲ್ಲೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುವುದು, ವಿದ್ಯಾರ್ಥಿಗಳಿಗೆ ಒದಗಿಸುವ ನಿರ್ಮಲ ಕಿಟ್, ಸಿರಿಗಂಧ ಕಿಟ್, ಇನ್ನಿತರ ವಸ್ತುಗಳ ಅವಧಿ ಮುಗಿದಿರುವುದನ್ನು (Expiry Date) ಖಚಿತಪಡಿಸಿಕೊಂಡು ಒದಗಿಸಲು ಅಗತ್ಯಕ್ರಮವಹಿಸಲು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ಥಿಗೊಳಿಸುವುದು/ ಸ್ಥಳಾಂತರಿಸುವ ಕಡೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!