೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚದ ೨.೫೦ ಕೋಟಿಯ ಲೆಕ್ಕವನ್ನು ನೀಡದೆ, ಕಸಾಪ ಬೈಲಾ ತಿದ್ದುಪಡಿ ಮೂಲಕ ಮಹೇಶ್ ಜೋಶಿ ಸರ್ವಾಧಿಕಾರಿಯಾಗಿ ಹೊರಟ್ಟಿದ್ದು, ಆತನನ್ನು ಕೂಡಲೇ ಕಸಾಪ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ, ಕಸಾಪ ಪದಾಧಿಕಾರಿಗಳು, ಆಜೀವ ಸದಸ್ಯರು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಜೋಶಿ ವಿರುದ್ದ ಮಂಡ್ಯದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಮಂಡ್ಯದ ರೈತ ಸಭಾಂಗಣದ ಆವರಣದಲ್ಲಿರುವ ಕುವೆಂಪು ಅವರ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸಂಜಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಜೋಶಿ ವಿರುದ್ದ ಘೋಷಣೆಗಳನ್ನು ಮೊಳಗಿಸಿದರು.
ಮಹೇಶ ಜೋಶಿ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರಿ ಧೋರಣೆ ವಿರುದ್ಧ ಇಂದು ಮಂಡ್ಯದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರತಿಭಟನಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಾಗಿದ್ದು, ಅದಕ್ಕೂ ಮುನ್ನ ಕನ್ನಡ ಪರ ಮನಸ್ಸುಗಳು ಜೋಶಿ ವಿರುದ್ದ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
‘ಡಾ.ಮಹೇಶ್‌ಜೋಶಿ ಅಮಾನತು ಮಾಡಿ – ಕಸಾಪ ಉಳಿಸಿ’ ಘೋಷಣೆಯಡಿ ನಡೆಯುವ ಜಾಗೃತಿ ಸಮಾವೇಶದಲ್ಲಿ ನಾಡಿನ ಕಸಾಪ ಅಜೀವ ಸದಸ್ಯರು, ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಕೆಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದಾರೆ.
ಜೋಶಿ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಸರ್ಕಾರ ಇಂತಹ ಸಂದರ್ಭದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಕಳಂಕಿತ ಅಧ್ಯಕ್ಷನನ್ನು ಅಮಾನತಿನಲ್ಲಿಟ್ಟು, ಆಡಳಿತಾಧಿಕಾರಿ ನೇಮಕ ಮಾಡಬೇಕು. ಇಲ್ಲವಾದಲ್ಲಿ ಆಡಳಿತ ಮಂಡಳಿಯ ಸೂಪರ್‌ಸೀಡ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರೊ.ಬಿ.ಜಯಪ್ರಕಾಶ್ ಗೌಡ, ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಡಾ.ಮೀರಾಶಿವಲಿಂಗಯ್ಯ, ಸುನಂದ ಜಯರಾಂ, ಕಾರಸವಾಡಿ ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.




