Thursday, June 13, 2024

ಪ್ರಾಯೋಗಿಕ ಆವೃತ್ತಿ

ರೋಹಿತ್ ಚಕ್ರತೀರ್ಥ ಸಮರ್ಥಿಸಿಕೊಂಡ ಸಿ.ಟಿ.ರವಿ

ರೋಹಿತ್ ಚಕ್ರತೀರ್ಥ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಸಿಇಟಿ ಕೋಚಿಂಗ್ ನೀಡುವ ಅವರು ಶೈಕ್ಷಣಿಕವಾಗಿ ಸಾಕಷ್ಟು ಓದಿಕೊಂಡಿದ್ದಾರೆ ಎಂದು ತಿಳಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಸಮರ್ಥಿಸಿಕೊಂಡರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಕೆಲವರು ಪ್ರಚಾರಕ್ಕೋಸ್ಕರ ದೊಡ್ಡ ವಿವಾದವನ್ನಾಗಿ ಮಾಡುತ್ತಿದ್ದಾರೆ.

ಪಕ್ಷವೊಂದರ ಟೂಲ್ ಕಿಟ್ ಆಗಿ ಇದನ್ನು ಬಳಸುತ್ತಿರುವ ಇಂತಹ ಜನರಿಗಾಗಿ ಪಠ್ಯಪುಸ್ತಕ ಪರಿಷ್ಕರಣೆಯನ್ನೇ ದೂರುವುದು ಸರಿಯಲ್ಲ ಎಂದರು.
ಪಠ್ಯಪುಸ್ತಕ ಸಮಿತಿಯ ರೋಹಿತ್ ಚಕ್ರತಿರ್ಥ ಸಾಕಷ್ಟು ಓದಿಕೊಂಡಿದ್ದ ರಿಂದಲೇ ಅವರನ್ನು ಆಯ್ಕೆ ಮಾಡಲಾಗಿದೆ. 2017ರಲ್ಲಿ ಯಾರೋ ನಾಡ ಗೀತೆಯ ಬಗ್ಗೆ ಅವರಿಗೆ ಮಾಡಿದ ಟ್ವೀಟ್ ಅನ್ನು ಹಂಚಿಕೊಂಡ ರೋಹಿತ್ ಚಕ್ರತೀರ್ಥ ಆಗಲೇ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಬಿ ರಿಪೋರ್ಟ್ ಹಾಕಿ ಆ ಪ್ರಕರಣ ಮರೆಯಾಗಿದೆ.ಈಗ ಕೆಲ ಜನರು ವಿನಾಕಾರಣ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇದನ್ನು ವಿವಾದವನ್ನಾಗಿ ಮಾಡುತ್ತಿದ್ದಾರೆ.ಪಠ್ಯಪುಸ್ತಕ ಬಂದ ಮೇಲೆ ಜನರಿಗೆ ಸತ್ಯ ಅರ್ಥವಾಗುತ್ತದೆ ಎಂದು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದೆ,ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ 70 ಜನರು ಘೋಷಣೆ ಕೂಗಿದರೆ ಅದು ಜನಾಕ್ರೋಶವಾಗುತ್ತಾ? ಪೂರ್ವಾಗ್ರಹಪೀಡಿತ ಜನರನ್ನು ನಾವು ಎದುರಿಸುತ್ತೇವೆ.ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಇವರು ಆರೋಪ ಮಾಡುತ್ತಲೇ ಇದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕೆಲವರು, ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವಿದೆ ಎಂದು ಆರೋಪಿಸಿ ಪ್ರಶಸ್ತಿಗಳನ್ನು ವಾಪಸ್‌ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೂಲ್‌ಕಿಟ್‌ ರಾಜಕಾರಣಕ್ಕೆ ಔಷಧಿ ಇಲ್ಲ, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅರಿವು ಇಲ್ಲದವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಕುವೆಂಪು ಅವರ ವಿಚಾರ ಕುರಿತು ಮೊದಲು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದರು, ಅವರಿಗೆ ಈಗ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೊದಲು ಕುವೆಂಪು ಅವರ ಏಳು ಪಾಠಗಳಿದ್ದವು,ಈಗ ಅವುಗಳನ್ನು ಈಗ 10ಕ್ಕೆ ಏರಿಕೆ ಮಾಡಿದ್ದೇವೆ ಎಂಬ ವಿಷಯವನ್ನು ತಿಳಿಸಿದ್ದೇವೆ.ತಮಗೆ ಗೊತ್ತಿರಲಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ ಎಂದರು.

ನಮಗೆ ಅಹಂಭಾವ ಇಲ್ಲ, ತಪ್ಪುಗಳಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ.ಆದರೆ ಕೆಲವರು ಮಾಡುತ್ತಿರುವ ಅಪಪ್ರಚಾರಗಳನ್ನು ನಾವು ಒಪ್ಪುವುದಿಲ್ಲ.ವಾಸ್ತವ ವಿಚಾರಗಳನ್ನು ಜನರ ಮುಂದಿಡುತ್ತೇವೆ.ಕೆಲವರು ಅಪಪ್ರಚಾರ ಮಾಡುವ ಮೂಲಕವೇ ತಾವು ಇನ್ನೂ ಬದುಕಿದ್ದೇವೆ ಎಂದು ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ನಾಲ್ಕು ಕ್ಷೇತ್ರಗಳಲ್ಲಿ ಗೆಲುವು

ಎರಡು ಶಿಕ್ಷಕರ ಹಾಗೆ ಎರಡು ಪದವೀಧರ ಕ್ಷೇತ್ರ ಸೇರಿದಂತೆ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು,ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಕಳೆದ ಬಾರಿ ಅವರು ೧೮೩ ಮತಗಳ ಅಂತರದಿಂದ ಪರಾಭವ ಗೊಂಡಿದ್ದು,ಈ ಬಾರಿ ಅತಿ ಹೆಚ್ಚು ಮತ ಗಳಿಸಿ ಆಯ್ಕೆ ಯಾಗಲಿದ್ದಾರೆಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸಕಾರಾತ್ಮಕ ಬೆಳವಣಿಗೆ ಮಾಡಿದ್ದಾರೆ. ಅಂತ್ಯೋದಯ ಯೋಜನೆಯ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಲಾಭ ತಲುಪುವಂತೆ ಮಾಡಿದ್ದಾರೆ.

84 ಕೋಟಿ ಜನರಿಗೆ ಎರಡೂವರೆ ವರ್ಷ ಉಚಿತವಾಗಿ ರೇಷನ್ ನೀಡಲಾಗುತ್ತಿದೆ.ಜನಧನ್ ಮೂಲಕ 42 ಕೋಟಿ ಜನರನ್ನು ಬ್ಯಾಂಕಿಂಗ್ ಯೋಜನೆಗೆ ಸೇರಿಸಲಾಗಿದೆ. ದೇಶದಲ್ಲಿ 1೧ ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 6.20 ಕೋಟಿ ಜನರ ಮನೆಗಳಿಗೆ ಶುದ್ದ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ.20ಲಕ್ಷ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್,ಮುಖಂಡರಾದ ಡಾ.ಸಿದ್ದರಾಮಯ್ಯ, ಅಶೋಕ್‌ ಜಯರಾಂ,ಚಂದಗಾಲು ಶಿವಣ್ಣ,ಹೆಚ್.ಪಿ.ಮಹೇಶ್,ಮನ್ ಮಲ್ ನಿರ್ದೇಶಕ ಸ್ವಾಮಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!