Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ದಾಂಧಲೆ : ಮುಸ್ಲಿಂ ಒಕ್ಕೂಟ ಆರೋಪ

ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ಹನುಮ ಜಯಂತಿಯ ಅಂಗವಾಗಿ ಸಂಕೀರ್ತನಾ ಯಾತ್ರೆಯ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಗಂಜಾಂ-ಕರಿಘಟ್ಟ ಮುಖ್ಯ ರಸ್ತೆಯಲ್ಲಿ ಸಂಕೀರ್ತನಾ ಯಾತ್ರೆಯ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಮತೀಯ ಭಾವನೆಗಳನ್ನು ಹಾಳು ಮಾಡುವ ಉದ್ದೇಶದಿಂದ ದಾಂಧಲೆ ನಡೆಸಿದ್ದಾರೆಂದು ಮುಸ್ಲಿಂ ಒಕ್ಕೂಟದ ವಕೀಲ ನದೀಂ ಅಹ್ಮದ್‌ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತವಾಗಿರುವ ಶ್ರೀರಂಗಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡುವ ಏಕೈಕ ಉದ್ದೇಶದಿಂದ ಆ ರಸ್ತೆಯಲ್ಲಿ ತರಕಾರಿ ಮಾರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ಮನೆಯ ಮೇಲೆ ಅಕ್ರಮವಾಗಿ ಹತ್ತಿ, ಅಲ್ಲಿ ಹಾರಾಡುತ್ತಿದ್ದ ಹಸಿರು ಬಾವುಟವನ್ನು ತೆರವುಗೊಳಿಸಿ ಆ ಜಾಗದಲ್ಲಿ ಹನುಮ ಬಾವುಟವನ್ನು ಅಕ್ರಮವಾಗಿ ಹಾಕಿದ್ದಾರೆ ಈ ಸಂದರ್ಭದಲ್ಲಿ ಮನೆ ಹೆಂಚುಗಳನ್ನು ಒಡೆದು ಹಾಕಿದ್ದಾರೆಂದು ದೂರಿದರು.

ಮನೆಯ ಮೇಲೆ ಹತ್ತುತ್ತಿದ್ದ ಸಂದರ್ಭದಲ್ಲಿ ಆ ಮನೆಯ ಇಬ್ಬರು ಹೆಂಗಸರು ಮನೆಯ ಮೇಲೆ ಹತ್ತುತ್ತಿದ್ದುದನ್ನು ವಿರೋಧಿಸಿದಾಗ, ನಿಮಗೆ ಗುಜರಾತಿನಲ್ಲಿ ಮಾಡಿದಂತಹ ಸ್ಥಿತಿಯನ್ನು ನಾವು ಮಾಡಿ ತೋರಿಸುತ್ತೇವೆ ಹಾಗೂ ಗುಜರಾತಿನಲ್ಲಿ ಹೆಂಗಸರ ಮೇಲೆ ನಡೆಸಿದಂತಹ ಅತ್ಯಾಚಾರಗಳನ್ನು ನೀವು ಎದುರಿಸಬೇಕಾಗುತ್ತದೆ ಕೆಲವು ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆಂದು ದೂರಿದರು. ಈ ದುಷ್ಕರ್ಮಿಗಳು ಹನುಮ ಮಾಲಾಧಾರಿ ವೇಷದಲ್ಲಿದ್ದು, ಕೋಮು ದ್ವೇಷ ಹರಡಲು ಪ್ರಯತ್ನಿಸಿದರು. ಅದೃಷ್ಟವಶಾತ್ ಅಲ್ಲಿಯೇ ಇದ್ದಂತಹ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದು ಆಗಬಹುದಾಗಿದ್ದ ಒಂದು ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದರು.

ಆರೋಪಿ ಬಂಧಿಸುವಲ್ಲಿ ಜಿಲ್ಲಾಡಳಿತ ವಿಫಲ 

ಮನೆಯ ಮೇಲೆ ಹತ್ತಿ ಮುಸ್ಲಿಂರ ಹಸಿರು ಧ್ವಜವನ್ನು ಕತ್ತಿಹಾಕಿ ದಾಂಧಲೆ ನಡೆಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಪೊಲೀಸರು ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು  ಆರೋಪಿಸಿದ ಅವರು, ಇಂತಹ ಘಟನೆ ಶ್ರೀರಂಗಪಟ್ಟಣದ ಬಂದೀಗೌಡ ಸರ್ಕಲ್‌ನಲ್ಲಿ ಜಾಮಿಯಾ ಮಸೀದಿಯ ಹತ್ತಿರ ಹನುಮ ಮಾಲಾಧಾರಿಗಳ ವೇಷದಲ್ಲಿದ್ದ ದುಷ್ಕರ್ಮಿಗಳು ಮಸೀದಿಯ ಮೇಲೆ ಬಿಲ್ಲು ಬಾಣಗಳಿಂದ ದಾಳಿ ಮಾಡಿದ್ದು, ಹಾಗೂ ಕಲ್ಲುಗಳನ್ನು ಮಸೀದಿಯ ಮೇಲೆ ಎಸೆದಿದ್ದಾರೆ.

ನಾಲ್ಕು-ಐದು ಜನರ ತಂಡ ಮಸೀದಿಗೆ ನುಗ್ಗಲು ಪ್ರಯತ್ನಿಸಿದ್ದು, ಮತ್ತು ಟಿಪ್ಪುವಿನ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಅಸಹನೀಯ ಮಾತುಗಳಿಂದ ನಿಂದಿಸಿರುವುದೂ ಸಹ ನಡೆದಿದೆ. ಇದು ಪೊಲೀಸರ ಮತ್ತು ಜಿಲ್ಲಾಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇದುವರೆಗೂ ದುಷ್ಕರ್ಮಿಗಳನ್ನು ಹಾಗೂ ಈ ಕಾರ್ಯಕ್ರಮ ಆಯೋಜಿಸಿದ ಬಜರಂಗದಳ ಮತ್ತು ಹಿಂದೂ ಜಾಗರಣಾ ವೇದಿಕೆಯವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ವಿಷಾದನೀಯವಾಗಿದೆ ಎಂದರು.

ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತಾಹೇರ್, ಅತೀಕ್ ಅಹಮದ್‌, ಏಜಾಜ್ ಅಹಮದ್‌, ಅಪ್ರೋಜ್ ಪಾ‍ಷ, ಅಬ್ಮೆತ್ ಖಾನ್, ಹಾಮಿದುಲ್ ಹಸನ್, ಮೀರ್ ಹನೀಫ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!