Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಯೋಜನಾ ವಿಶ್ವವಿದ್ಯಾಲಯ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವರದಾನ

ಮಂಡ್ಯ ವಿಶ್ವವಿದ್ಯಾಲಯವನ್ನು ಸರ್ಕಾರ ಸಂಯೋಜನಾ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಇರುವಂತಹ ಎಲ್ಲಾ ಕಾಲೇಜುಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವರದಾನವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 35 ಪದವಿ ಕಾಲೇಜುಗಳು, 10 ಶಿಕ್ಷಣ ಇಲಾಖೆಯ ಕಾಲೇಜು ಹಾಗೂ 2 ದೈಹಿಕ ಶಿಕ್ಷಣ ಕಾಲೇಜು ಸೇರಿ ಒಟ್ಟು 47 ಕಾಲೇಜುಗಳಿವೆ. ಸರಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯ ಕಡೆ ತೆರಳುತ್ತಿದ್ದರು. ಈ ರೀತಿಯ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಸರ್ಕಾರ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಮಂಡ್ಯ ಏಕೀಕೃತ ವಿಶ್ವವಿದ್ಯಾನಿಲಯವನ್ನು ಮಂಡ್ಯ ಜಿಲ್ಲಾ ವಿಶ್ವವಿದ್ಯಾನಿಲಯವಾಗಿ ಆಗಸ್ಟ್ 25ರಂದು ಸಚಿವ ಸಂಪುಟ ಪರಿವರ್ತಿಸಿ ಅನುಮೋದಿಸಿದೆ. ಇದರಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸುಮಾರು 47ಕ್ಕೂ ಹೆಚ್ಚಿನ ಪದವಿ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಲಿವೆ ಎಂದು ಹೇಳಿದರು.

ನೂತನ ವಿಶ್ವವಿದ್ಯಾಲಯವು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಿಗೆ ಅಗತ್ಯವಿರುವ ಸಂಶೋಧನಾ ಸೌಲಭ್ಯಗಳನ್ನು ಒದಗಿಸಲಿದೆ. ಪದವಿ ಕಾಲೇಜುಗಳ ಆಧ್ಯಾಪಕರುಗಳಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಅಗತ್ಯವಿರುವ ಅಕಾಡೆಮಿಕ್ ಸ್ಟಾಫ್ ಕಾಲೇಜು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದರು.

ಸಂಶೋಧನ ವಿದ್ಯಾರ್ಥಿಗಳ ಪಿ.ಹೆಚ್ .ಡಿ ಪದವಿಗೆ ಮುಕ್ತ ಅವಕಾಶ ದೊರೆಯಲಿದೆ. ಕೈಗಾರಿಕಾ ಒಡಂಬಡಿಕೆ ಮಾಡಿಕೊಂಡು ಕೈಗಾರಿಕೆಗಳಿಗೆ ಅಗತ್ಯವಿರುವ ಕೋರ್ಸ್ ಗಳನ್ನು ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿ ಮಾಡುವ ಗುರಿಯನ್ನು ವಿಶ್ವವಿದ್ಯಾನಿಲಯವು ಹೊಂದಿದೆ ಎಂದು ತಿಳಿಸಿದರು.

ಈ ಒಂದು ಅವಕಾಶಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದ ಹಾಗೂ ವಿದೇಶದ ವಿದ್ಯಾರ್ಥಿಗಳಿಗೂ ಸಂಶೋಧನೆಗೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮುಕ್ತ ಅವಕಾಶ ಮಾಡಿ ಕೊಡಲಿದೆ ಎಂದರು.

ಸಂಯೋಜನಾ ವಿಶ್ವವಿದ್ಯಾಲಯದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ,
ಪ್ರಾದೇಶಿಕ ಅಸಮತೋಲನ ನಿವಾರಣೆ, ಒಂದು ಕೇಂದ್ರೀಕೃತ ಕಚೇರಿಯಿಂದ ಆಡಳಿತ, ಹೆಚ್ಚಿನ ಹಣದ ಸವಲತ್ತು, ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಅವಕಾಶ, ಸಂಶೋಧನಾ ಕೇಂದ್ರಗಳಿಂದ ಉನ್ನತ ಮಟ್ಟದ ಆವಿಷ್ಕಾರಗಳು ಅನೇಕ ಅನುಕೂಲತೆಗಳಿಗೆ ಕಾರಣವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ನಾಗರಾಜ್ ಜಿ. ಚೊಳ್ಳಿ, ಹಣಕಾಸು ಅಧಿಕಾರಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!