Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ- ಮೈಸೂರು ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಕ್ರಮ: ಸತೀಶ್ ಜಾರಕಿಹೊಳಿ

ಮಳವಳ್ಳಿ- ಮೈಸೂರುನಿಂದ ಬಾವಲಿಯವರೆಗೆ ಚತುಷ್ಪಥ ರಸ್ತೆ ನಿರ್ಮಿಸಲು ಮುಂದಿನ ಆಯವ್ಯಯದಲ್ಲಿ ಅನುದಾನ ನೀಡಿ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮಳವಳ್ಳಿಯಲ್ಲಿ ನಡೆದ ಬೃಹತ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಪ್ರಯತ್ನದಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಇಂದು ಕುಡಿಯುವ ನೀರಿನ ಯೋಜನೆ, ವಿಶ್ವೇಶ್ವರಯ್ಯ ನಾಲೆ, ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ವಿವಿಧ ಅನುದಾನದಡಿ ರಸ್ತೆ ಅಭಿವೃದ್ಧಿಗೆ 26 ಕೋಟಿ ರೂ ಅನುದಾನ ನೀಡಲಾಗುವುದು. ಇಲಾಖೆಯಿಂದ ಗುತ್ತಿಗೆದಾರರ ಬಿಲ್ ಪಾವತಿಸಲು 50 ಕೋಟಿ ರೂ ಅನುದಾನ ನೀಡಲಾಗಿದೆ ವಿವರಿಸಿದರು.

ಮಳವಳ್ಳಿ ತಾಲ್ಲೂಕಿಗೆ ಅನುದಾನದ ಕೊರತೆಯ ಬಗ್ಗೆ ಮಳವಳ್ಳಿ ಶಾಸಕರಾದ ನರೇಂದ್ರಸ್ವಾಮಿ ಅವರು ನನಗೆ ಮನವಿ ಮಾಡಿದ್ದಾರೆ, ಸದ್ಯದಲ್ಲೇ ಅವರ ಮನವಿಯನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಕರ್ನಾಟಕದ ಅಭಿವೃದ್ಧಿ

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 9 ತಿಂಗಳಲ್ಲಿ 60 ಸಾವಿರ ಕೋಟಿ ವೆಚ್ಚದಲ್ಲಿ 5 ಗ್ಯಾರಂಟಿ ಗಳನ್ನು ಅನುಷ್ಠಾನಕ್ಕೆ ತಂದು ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್  ಹೇಳಿದರು.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈಗಾಗಲೇ ಸುಮಾರು 70 ಕೋಟಿ ರೂ ವೆಚ್ಚದಲ್ಲಿ ಮಳವಳ್ಳಿ ಟೌನ್ ಗೆ ಕುಡಿಯುವ ನೀರಿನ ಸೌಲಭ್ಯ ಮಾಡಿದ್ದೇವೆ. ಮಳವಳ್ಳಿ ನಗರದ ಯುಜಿಡಿಗೆ 10 ಕೋಟಿ ರೂ ಕೇಳಿದ್ದಾರೆ ಈ ವೇದಿಕೆಯ ಮುಖಾಂತರ 10 ಕೋಟಿ ರೂ ಅನುದಾನ ನೀಡಲು ಆದೇಶ ನೀಡುತ್ತಿದ್ದೇನೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸುಮಾರು 280 ಕೋಟಿ ರೂ. ಕೆಲಸ ನಡೆಯುತ್ತಿದೆ, ನಗರಾಭಿವೃದ್ಧಿ ಇಲಾಖೆಯಿಂದ ಹೊಸದಾಗಿ ಕುಡಿಯುವ ನೀರಿನ ಯೋಜನೆಗೆ 127 ಕೋಟಿ ಹಣವನ್ನು ನೀಡಿ ಒಂದೂವರೆ ತಿಂಗಳಲ್ಲಿ ಕಾಮಗಾರಿ ಕೆಲಸಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.

ಶ್ರೀರಂಗಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ 25 ಕೋಟಿ ನೀಡಲಾಗುವುದು, ಜನರ ನಿರೀಕ್ಷೆಗೆ ತಕ್ಕ ಹಾಗೆೇ ಕೆಲಸ ಮಾಡುತ್ತೇವೆ, ಎಲ್ಲಾ ಸಮಾಜದವರು ಒಪ್ಪುವ ಏಕೈಕ ನಾಯಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಎಂದು ಹೇಳಿದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಮಾತನಾಡಿ, ಅನ್ನಭಾಗ್ಯದ ಮೂಲಕ ಹಸಿವು ನೀಗಿಸಿ, ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ, ಗೃಹ ಜ್ಯೋತಿ ಮೂಲಕ ಮನೆಯನ್ನು ಬೆಳಗಿಸಿರುವ ಪಂಚ ಗ್ಯಾರಂಟಿಗಳ ಸಮಾವೇಶ ಮಳವಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ಆಯವ್ಯಯದಲ್ಲಿ ಬಡವರಿಗೆ 3 ಲಕ್ಷ ಮನೆಗಳನ್ನು ನೀಡಲು ಅನುದಾನ ಮೀಸಲಿಡಲಾಗಿದೆ‌. ಮಳವಳ್ಳಿ ತಾಲ್ಲೂಕಿನಲ್ಲಿ ಬೆಳಕವಾಡಿ, ಕಿರುಗಾವಲು, ಮುಂತಾದ ಸ್ಥಳಗಳಲ್ಲಿರುವ ಅಲ್ಪಸಂಖ್ಯಾತರ ಬಡಾವಣೆಗಳ ಅಭಿವೃದ್ಧಿಗೆ ಅನುದಾನವನ್ನು ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್ ನಾಗರಾಜು ಅವರು ಸಾರ್ವಜನಿಕರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಸ್ತಬ್ಧಚಿತ್ರವನ್ನು ವೀಕ್ಷಿಸಿದರು.

ಮಂಡ್ಯದ ಮಳವಳ್ಳಿ ಘಟಕಕ್ಕೆ ಖರೀದಿಸಿರುವ ಅಶ್ವಮೇಧ ಕ್ಲಾಸಿಕ್ ನ 10 ಬಸ್ ಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಎ. ಬಿ. ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ವಿಧಾನಸಭಾ ಶಾಸಕರಾದ ಪಿ. ರವಿಕುಮಾರ್, ಕೆ. ಎಂ. ಉದಯ, ಡಿ. ಸಿ. ಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಉಪವಿಭಾಗಾಧಿಕಾರಿ ಎಂ. ಶಿವಮೂರ್ತಿ, ತಹಶೀಲ್ದಾರ್ ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!