ಝೆನ್ ಝೀ, ಝೆನ್ ಅಲ್ಫಾ ಝೆನ್ ಬೀಟಾ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳೇ ಇಲ್ಲದ ದಿನಗಳಲ್ಲಿ ಶ್ರೀಬಾಲಗಂಗಾಧರನಾಥ ಗುರುಗಳು ಜಾನಪದ ಉತ್ಸವವನ್ನು ಆಯೋಜಿಸಿದ್ದರು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ. ಮಹಾ ಗುರುಗಳ ಆಶಯದಂತೆ ಈಗ ವಿಜ್ಞಾತಂ ಉತ್ಸವವಾಗಿ ರೂಪುಗೊಂಡಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ವಿಜ್ಞಾತಂ ಉತ್ಸವ-2026’ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಜ್ಞಾನ ತಂತ್ರಜ್ಞಾನ ಧರ್ಮ ಆಧ್ಯಾತ್ಮ ಇವುಗಳಿಗೆ ಅವಿನಾಭಾವ ಸಂಬಂಧವಿದೆ ಎಂಬುದನ್ನು ಶ್ರೇಷ್ಠ ವಿಜ್ಞಾನಿ ಐನ್ಸ್ಟೈನ್ ನಿರೂಪಿಸಿದಂತೆ ವಿಶ್ಲೇಷಿಸಿ ವಿವರಿಸಿದರು. ಈ ಜ್ಞಾನ ವಿಜ್ಞಾನ ತಂತ್ರಜ್ಞಾನ ಉತ್ಸವದಲ್ಲಿ ಪಾಲ್ಗೊಂಡಿರುವ 200ಕ್ಕೂ ಹೆಚ್ಚು ವಸ್ತು ಪ್ರದರ್ಶನದಲ್ಲಿ 20 ಆದರೂ ಸ್ಟಾರ್ಟ್ ಅಪ್ ಆಗಿ ಬೆಳವಣಿಗೆ ಹೊಂದಿದರೆ ಮುಂದೆ ನೂತನ ಆವಿಷ್ಕಾರಕ್ಕೆ ಮೊದಲಾಗುತ್ತದೆ ಎಂದರು. ಕೃತಕ ಬುದ್ಧಿಮತ್ತೆಯ ರೋಬೋಟ್ಗಳು ಹೀಗೆ ಸಾಗಿದರೆ ಮುಂದೆ ಮಾನವ ಶಕ್ತಿಗೆ ಹೊಡೆತ ಬೀಳುತ್ತದೆ ಆದ್ದರಿಂದ ಮೂಲ ವಿಜ್ಞಾನಕ್ಕೆ ಪ್ರಾಧಾನ್ಯತೆ ನೀಡಿ ಮಾನವ ಶಕ್ತಿಯನ್ನು ಹೆಚ್ಚಿಸಬೇಕಿದೆ. ಈ ಮಾರ್ಗದಲ್ಲಿ ಪ್ರಬುದ್ಧತೆಯನ್ನು ಪಡೆದು ಪ್ರತಿಯೊಬ್ಬರಲ್ಲೂ ಇರುವ ಬುದ್ಧನನ್ನು ಎಚ್ಚರಗೊಳಿಸೋಣ ಎಂದರು.
ಧಾರ್ಮಿಕ ನಾಯಕತ್ವದೊಂದಿಗೆ ವಿಶಿಷ್ಟ ಸಂಕಲ್ಪಶಕ್ತಿ
ಬಿಡದಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ಧಾರ್ಮಿಕ ನಾಯಕತ್ವದೊಂದಿಗೆ ವಿಶಿಷ್ಟ ಸಂಕಲ್ಪಶಕ್ತಿಯಾಗಿ ನಾಡಿಗೆ ಹೊಸ ಆಲೋಚನೆಗಳನ್ನು ಬಿತ್ತಿ ಲಕ್ಷಾಂತರ ಜನರ ಮನಸ್ಸಿನಲ್ಲಿ ಆಧ್ಯಾತ್ಮ ಶಕ್ತಿಯೊಂದಿಗೆ ಜ್ಞಾನ ದಾಸೋಹವನ್ನು ನೀಡುತ್ತಿರುವ ಮಹಾ ಕ್ಷೇತ್ರ ಶ್ರೀ ಆದಿಚುಂಚನಗಿರಿ. ರೈತ ಬಂಧುಗಳ ಮಹಾನ್ ಬೆಂಬಲ ಶಕ್ತಿಯಾಗಿ ನಿಂತವರು ಮಹಾ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ. ದೀರ್ಘ ಹಸಿವಿನ ಕಾಲದಲ್ಲಿ ಅನ್ನ ಹಾಕಿ ಸಲಹುತ್ತ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟಲ್ ಗಳನ್ನು ಸ್ಥಾಪಿಸಿ ಸುವರ್ಣ ಮಾರ್ಗವನ್ನು ತೋರಿದ ಜ್ಞಾನಿ ಇವರು. ಭಕ್ತಿ ಮಾರ್ಗದಲ್ಲಿ ವಿಜ್ಞಾನದ ಹಾದಿಯನ್ನು ತೋರಿದ ಯತಿವರ್ಯರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರಾಜಮಾನರಾಗಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರ ಪ್ರಯತ್ನವೇ ಪರಮೇಶ ಎನ್ನುವ ತತ್ವಾನುಸಾರ ಪ್ರಾರ್ಥನೆ ಮತ್ತು ಪ್ರಯತ್ನದ ಮೂಲಕ ಜನಸಾಮಾನ್ಯರಿಗೆ ಎಲ್ಲ ಅಗತ್ಯಗಳನ್ನು ನೀಡಿದವರು. ಮೂಲ ವಿಜ್ಞಾನವನ್ನು ಮರೆತವರು ವಿಜ್ಞಾನಿಗಳಾಗಿ ಸಂಶೋಧನೆ ಮಾಡಲು ಸಾಧ್ಯವಿಲ್ಲ ಎಂದು ಪರಿಭಾವಿಸಿ ಮೂಲ ವಿಜ್ಞಾನಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಇಂದು ಇಂತಹ ಮಹಾನ್ ವಿಜ್ಞಾನೋತ್ಸವಕ್ಕೆ ಸಂಕಲ್ಪ ಶಕ್ತಿ ನಮ್ಮ ಶ್ರೀಗುರುಗಳು. ಧರ್ಮ ಮತ್ತು ವಿಜ್ಞಾನ ಎಂದಿಗೂ ಕಟ್ಟುವ ಕೆಲಸವಾಗಬೇಕು, ಯುವಕರು ಜಗತ್ತನ್ನು ಉತ್ತಮತೆಗೆ ಕೊಂಡೊಯ್ಯಲು ಬೇಕಾದ ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಯತ್ನಿಸಿ ಸಫಲರಾಗಿ ಎಂದು ಆಶೀರ್ವದಿಸಿದರು.
ಸಾಲೂರು ಬೃಹನ್ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಭಾರತ ಅನೇಕ ದಾರ್ಶನಿಕರು ಸತ್ಪುರುಷರು ಹಾಗೂ ಮಹಾತ್ಮರನ್ನು ಕಂಡಿದೆ. ಶತಮಾನಕ್ಕೊಬ್ಬ ಶತಪುರುಷ ಎಂಬ ಅಭಿದಾನದಿಂದ ಖ್ಯಾತರಾದವರು ನಮ್ಮ ಶ್ರೀಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರು. 20ನೇ ಶತಮಾನದ ಶತಪುರುಷರಾಗಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ದಾರ್ಶನಿಕರು ಎಂದರು.
ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ ಆದಿಚುಂಚನಗಿರಿಯು ಆಸ್ತಿಕರ ಪವಿತ್ರ ನೆಲ, ಜ್ಞಾನಕಾಶಿ, ಶಿಕ್ಷಣಧಾಮ, ಸಾಂತ್ವನ ಕೇಂದ್ರ, ನಿತ್ಯ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಾ ನಾಡಿನ ಜನತೆಗೆ ಹಿತವನ್ನು ಬಯಸುತ್ತಿರುವ ಶಕ್ತಿ ಕೇಂದ್ರವಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿಯವರ ಕರಕಮಲ ಸಂಜಾತರು ಆಧ್ಯಾತ್ಮಿಕ ಸೇವಾ ದೀಕ್ಷೆಯನ್ನು ಪಡೆದು 13 ವರ್ಷಗಳ ಸಾರ್ಥಕ ಹಾದಿಯಲ್ಲಿ ಸಾಗುತ್ತಿದ್ದು, ಶ್ರೀ ಗುರುಗಳು ಸಮಾಜದ ಆಸ್ತಿಯಾಗಿದ್ದಾರೆ ಎಂದರು.
180 ಕ್ಕೂ ಹೆಚ್ಚು ವಿಜ್ಞಾನ ವಸ್ತು ಪ್ರದರ್ಶನಗಳ ಆಯೋಜಿಸಲು ಅಪಾರಜ್ಞಾನ ಹಾಗೂ ಪರಿಣತಿಯೇ ಬಹುದೊಡ್ಡ ಸಂಪತ್ತು, ಈ ಮಠದ ಸಂಪರ್ಕದಲ್ಲಿರುವ ನಾವೆಲ್ಲ ಧನ್ಯರು. ಸನಾತನ ಸಂಸ್ಕೃತಿಯನ್ನು ಮುಂದುವರಿದ ಭಾಗವಾಗಿ ಮಾನವ ಜೀವನಕ್ಕೆವಿಜ್ಞಾನವೂ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ ಪಡೆಯುತ್ತಿರುವ ನಾವು ಪ್ರಶ್ನೆ ಮೂಲಕ ಒಪ್ಪಿಕೊಳ್ಳುವುದೇ ವಿಜ್ಞಾನ. ಇಂದು ಶಿಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲೂ ಪಡೆಯಬಹುದು, ಆದರೆ ಮೂಲ ವಿಜ್ಞಾನವನ್ನು ಪ್ರಯೋಗಾತ್ಮಕವಾಗಿ ಪ್ರಶ್ನೆಯ ಮೂಲಕವೇ ಒಪ್ಪಿಕೊಳ್ಳಬೇಕಿದೆ. ಆದ್ದರಿಂದ ವಿಜ್ಞಾನದ ಮೂಲಕ ನಿತ್ಯ ಹೊಸ ದಾರಿಯನ್ನು ಹುಡುಕುತ್ತ ಸಂಸ್ಥಾನದ ಸಂಪರ್ಕದಲ್ಲಿ ಮುಂದುವರೆದರೆ ವಿಶಿಷ್ಟವಾದುದನ್ನು ಸಾಧಿಸಬಹುದು. ಶುಭವಾಗಲಿ ಎಂದರು.
ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್ ಎಸ್ ರಾಮೇಗೌಡ ಪ್ರಾಸ್ತಾವಿಕ ನುಡಿಯನ್ನಾಡಿದರು. ವಿಜ್ಞಾತಂ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಕೆ ಮುನಿಯಪ್ಪ, ನಾಗಮಂಗಲ ಮಾಜಿ ಶಾಸಕ ಕೆ ಸುರೇಶ್ ಗೌಡ, ರಕ್ಷಣೆ ಮತ್ತು ಏರೋ ಸ್ಪೇಸ್ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುದರ್ಶನ್, ಡಾ. ಜಯರಾಮ್, ಡಾ. ಟಿ ಎನ್ ಬಾಲಕೃಷ್ಣೇಗೌಡ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ಎನ್ ಶ್ರೀಧರ, ವೈದ್ಯಕೀಯ ವಿಭಾಗದ ಡೀನ್ ಡಾ. ಎಂ ಜಿ ಶಿವರಾಂ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ ಎ ಟಿ ಶಿವರಾಮು, ಪ್ರಾಂಶುಪಾಲರು, ಅಧಿಕಾರಿಗಳು ಹಾಗೂ ಇತರರಿದ್ದರು.




