Tuesday, June 25, 2024

ಪ್ರಾಯೋಗಿಕ ಆವೃತ್ತಿ

ವೈಜ್ಞಾನಿಕ ಮನೋಭಾವನೆಯಿಂದ ಪ್ರಗತಿ ಸಾಧ್ಯ

ಇಂದು ವಿಜ್ಞಾನ – ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ.ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡಲ್ಲಿ ಮಾತ್ರ ಮನುಷ್ಯನ ಪ್ರಗತಿ ಸಾಧ್ಯವಾಗುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಡಾ. ಎ.ಎಸ್. ಕಿರಣ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಭಾರತ ಇಂದು ವಿಶ್ವ ಮಟ್ಟದಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಿರುವುದರ ಹಿಂದೆ ಪೂರ್ವಜರ ಶ್ರಮ ಸಾಕಷ್ಟಿದೆ.ಜನತೆ ಕಂದಾಚಾರವನ್ನು ದೂರ ಮಾಡಿ ಜ್ಞಾನದ ಅರಿವನ್ನು ಮೂಡಿಸಿಕೊಳ್ಳಬೇಕು. ವಿಚಾರ, ವಿಮರ್ಶೆ ಮೂಲಕ ಜ್ಞಾನದ ಸಂಪಾದನೆ ಮಾಡಿಕೊಳ್ಳಬೇಕು. ವಿಜ್ಞಾನದ ಸದಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಇಂದು ಮೌಢ್ಯದ ಹೆಸರಿನಲ್ಲಿ ಮಾನವೀಯ ಮೌಲ್ಯಗಳನ್ನು ದೂರ ಮಾಡುವಂತಹ ಕೃತ್ಯಗಳು ನಡೆಯುತ್ತಿವೆ. ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಜನರು ಮುಂದಾಗಬೇಕಿದೆ. ಇಂತಹ ಸಂಸ್ಥೆಗಳಿಂದ ಯುವಜನತೆಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಕೆಲಸ ನಿರಂತರವಾಗಿ ನಡೆಯಬೇಕು. ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಾರ‍್ಯ ಶ್ಲಾಘನೀಯ ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ವಿಜ್ಞಾನವನ್ನು ವಿಕೃತವಾಗಿ ಬಳಸಿಕೊಂಡಲ್ಲಿ ಅಪಾಯ ಕಾದಿದೆ. ಪ್ರತಿಯೊಂದು ಮಗುವಿನಲ್ಲಿಯೂ ವೈಜ್ಞಾನಿಕ ವಿಚಾರಗಳನ್ನು ಧಾರೆ ಎರೆಯುವ ಮೂಲಕ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ವಿಜ್ಞಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ವಿಜ್ಞಾನ ಮತ್ತು ಧರ್ಮವನ್ನು ಬೇರೆ ಮಾಡಬಾರದು.12ನೇ ಶತಮಾನದ ವಚನಗಳಲ್ಲೂ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳು ಪ್ರಬಲವಾಗಿವೆ. ಕುವೆಂಪು ಹಾಗೂ ಅನೇಕ ಚಿಂತಕರು ವೈಜ್ಞಾನಿಕ ಚಿಂತನೆಗಳನ್ನು ಮಂಡಿಸಿರುವುದು ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಿದರು. ಸಮೂಹ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಅನೇಕ ಅಂಶಗಳಿಂದ ಯುವಕರು ದೂರವಾಗಿರಬೇಕಿದೆ ಎಂದರು.

ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಕೆ.ಮಾಯಿಗೌಡ ಅವರ ಮಕ್ಕಳಿಗೇಕೆ ವೈಚಾರಿಕತೆ ಎನ್ನುವ ಕೃತಿ ಬಿಡುಗಡೆ ಮಾಡಿದರು. ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜು ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಪರಿಷತ್ತಿನ ಪ್ರಮುಖರಾದ ಪ್ರಭಾವತಿ, ಸುನಂದಾ ಜಯರಾಂ, ಚಿಕ್ಕಹನುಮಂತೇಗೌಡ, ವಿ.ಟಿ. ಸ್ವಾಮಿ, ಮಂಡ್ಯ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ಮನುಕುಮಾರ್, ಹಿತೇಶ್ ಎನ್., ಸ್ವಪ್ನ ಕೆ.ವಿ., ಕೆಂಪರಾಜು, ವಸಂತ, ವೆಂಕಟಾಚಲಯ್ಯ, ಅಂಬರಹಳ್ಳಿ ಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!