Wednesday, July 24, 2024

ಪ್ರಾಯೋಗಿಕ ಆವೃತ್ತಿ

ಅರಕೆರೆ ಶಾಲಾ ಕಾಂಪೌಂಡ್ ವಿವಾದಕ್ಕೆ ಇತಿಶ್ರೀ ಹಾಡಿದ ನ್ಯಾಯಾಲಯ

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿನ ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ತಡೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಜೆಎಂಎಫ್‌ಸಿ ನ್ಯಾಯಾಲಯ ಇಂದು ವಜಾಗೊಳಿಸಿ ಅರ್ಜಿದಾರರಿಗೆ ದಂಡ ವಿಧಿಸಿ ಆದೇಶ ನೀಡಿದೆ.

ಈ ತೀರ್ಪಿನಿಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರಿಗೆ ತೀವ್ರ ಮುಜುಗರ ಉಂಟಾಗಿದ್ದು, ಅರಕೆರೆ ಶಾಲೆಯ ಕಾಂಪೌಂಡ್ ವಿವಾದಕ್ಕೆ ನ್ಯಾಯಾಲಯ ಇತಿಶ್ರೀ ಹಾಡಿದೆ.

ಶ್ರೀರಂಗಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ಅವರು ಇಂದು ತೀರ್ಪು ನೀಡಿದ್ದು, ಪ್ರತಿವಾದಿಗಳು ಹಾಗೂ ಸರ್ಕಾರಕ್ಕೆ ಈವರೆಗೆ ತಗುಲಿರುವ ಖರ್ಚಿನ ಹಣ ಪಾವತಿಸುವಂತೆ ಅರ್ಜಿದಾರರಿಗೆ ಆದೇಶ ನೀಡಿದ್ದಾರೆ.

ವಿವಾದದ ಸುತ್ತ

ಅರಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಶಾಲೆ ಪಕ್ಕದ ರಸ್ತೆ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಗ್ಯಾಸ್ ಗೋಡೌನಿಗೆ ಸಂಪರ್ಕ ಕಲ್ಲಿಸಲು ಬೇಕೆಂದು ಪಟ್ಟು ಹಿಡಿದಿದ್ದರಿಂದ ವಿವಾದ ತಾರಕಕ್ಕೇರಿತ್ತು. ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಕದನ ಕಣವಾಗಿ ಶಾಲಾ ಕಾಂಪೌಂಡ್ ಕಾಮಗಾರಿ ಮಾರ್ಪಟ್ಟಿತ್ತು.

ಶಾಲೆಗೆ ಕಾಂಪೌಂಡ್ ನಿರ್ಮಿಸಿ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಬೆಂಬಲಿಗರು ಮುಂದಾದರೂ, ಮಾಜಿ ಶಾಸಕ ರಮೇಶ್ ಬಾಬು ಸೇರಿದಂತೆ ಅವರ ಬೆಂಬಲಿಗರು ಹಲವಾರು ಬಾರಿ ಕಾಮಗಾರಿಗೆ ತಡೆಯೊಡ್ಡಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸರ್ಕಾರಕ್ಕೆ ಅನುದಾನ ವಾಪಸ್ ಹೋಗಲಿದೆ ಎನ್ನುವ ಕಾರಣದಿಂದ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದ ವೇಳೆ ಎರಡು ಗುಂಪಿನ ನಡುವೆ ಗಲಾಟೆ ನಡೆದು,ಕೈ ಕೈ ಮಿಲಾಯಿಸುವ ಹಂತ ಮುಟ್ಟಿತ್ತು. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇನ್ನು ವಿಚಾರಣೆ ವೇಳೆ ಅರ್ಜಿದಾರರು ನ್ಯಾಯಾಲಯಕ್ಕೆ ಸರಿಯಾದ ಸಾಕ್ಷ್ಯಧಾರಗಳನ್ನು ಒದಗಿಸಲು ವಿಫಲರಾಗಿದ್ದರಿಂದ ನ್ಯಾಯಾಧೀಶರು, ಕಾಮಗಾರಿ ನಿಲ್ಲಿಸಲು ಕೋರಿದ್ದ ಅರ್ಜಿಯನ್ನು ದಂಡ ಸಹಿತ ವಜಾಗೊಳಿಸಿದ್ದಾರೆ. ಇದರೊಂದಿಗೆ ಕಾಮಗಾರಿ ಮುಂದುವರೆಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದ್ದು, ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ.

ಕಾಮಗಾರಿ ಆರಂಭವಾಗಲಿದೆ

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಶಾಲಾ ಆವರಣದ ಮೂಲ ನಕ್ಷೆಯಲ್ಲಿ ಯಾವುದೇ ರಸ್ತೆ ಇಲ್ಲದಿದ್ದರೂ, ಅವರ ಒಡೆತನದ ಗ್ಯಾಸ್ ಗೋಡೌನ್ ಹಾಗೂ ಅವರ ಮನೆಗೆ ತೆರಳಲು ಶಾಲಾ ಆವರಣದಲ್ಲಿ ಅನಧಿಕೃತವಾಗಿ ರಸ್ತೆ ಮಾಡಿಕೊಂಡಿದ್ದರು.ಇದೀಗ ಶಾಲಾ ಕಾಂಪೌಂಡ್ ನಿರ್ಮಾಣ ಮಾಡದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದ ಅವರಿಗೆ ತಕ್ಕ ಉತ್ತರ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮರೀಗೌಡ ತಿಳಿಸಿದರು.

ಶೀಘ್ರ ಕಾಮಗಾರಿ ನಡೆಸಲಿ

ಈವರೆಗೆ ವಿವಾದ ನ್ಯಾಯಾಲಯದಲ್ಲಿದೆ ಎನ್ನುವ ಕಾರಣ ಹೇಳಿ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಡಳಿತ ಮುಂದೂಡುತ್ತಾ ಬಂದಿತ್ತು. ಜೊತೆಗೆ ಪೊಲೀಸ್ ಇಲಾಖೆ ಸಹ ಭದ್ರತೆ ಕೊಡಲು ಹಿಂದೇಟು ಹಾಕಿತ್ತು. ಇದೀಗ ನ್ಯಾಯಾಲಯವೇ ತಡೆ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಜಿಲ್ಲಾಡಳಿತ ತಕ್ಷಣ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!