ಬದಲಾವಣೆಯೆಂದರೆ
ರೂಪಾಂತರೀ ಕರೋನದ
ಹಾವಳಿ ಕಂಡು
ಮೂಲ ಕರೋನಾಗೆ
ಹಾತೊರೆಯುವುದಲ್ಲ
ಬದಲಾವಣೆಯೆಂದರೆ
ಸಕಲ ವೈರಸ್ಸುಗಳನ್ನು
ಸದೆಬಡೆಯುವ
ಪ್ರತಿರೋಧ ಪಡೆಯುವುದು…
ಬದಲಾವಣೆಯೆಂದರೆ..
ಕಚ್ಚುವ ಹೊಸ ಚಪ್ಪಲಿಯ
ಬದಲಿಗೆ
ಹರಿದ ಹಳೆ ಚಪ್ಪಲಿಗೆ
ಮರಳುವುದಲ್ಲ..
ಬದಲಾವಣೆಯೆಂದರೆ
ಚಪ್ಪಲಿಗೆ ತಕ್ಕ ಪಾದವಲ್ಲ
ಪಾದಕ್ಕೆ ತಕ್ಕ ಪಾದರಕ್ಷೆ ಹೊಲಿಯುವುದು…
ಬದಲಾವಣೆಯೆಂದರೆ..
ಇಂದಿನ ಕತ್ತಲಿಗೆ ಬದಲು
ಮುಂಚಿನ ಮಬ್ಬುಗತ್ತಲಿಗೆ
ಹಂಬಲಿಸುವುದಲ್ಲ..
ಬದಲಾವಣೆಯೆಂದರೆ
ಕತ್ತಲ ಕಾರಾಸ್ಥಾನ ಬೇಧಿಸಿ
ಬೆಳಕ ಪಡೆಯುವುದು..
ಬದಲಾವಣೆಯೆಂದರೆ..
ಏರಿಕೂತ ಮರಕುದುರೆಯ
ಬದಲು
ಕಟ್ಟಿ ಬಂದ
ಕುಂಟುಕುದುರೆಯ
ಅರಸುವುದಲ್ಲ..
ಬದಲಾವಣೆಯೆಂದರೆ…
ಅದಲು ಬದಲಾಗುವುದಲ್ಲ..
ತಳಕುಸಿವಾಗ ಹೊಸಹೆಂಚು
ಹೊಂದಿಸುವುದಲ್ಲ…
ಹರಿದಬಟ್ಟೆಯ ಮೇಲೆ
ಕಡತಂದ ಕೋಟು ಮುಚ್ಚುವುದಲ್ಲ..
ಬದಲಾವಣೆಯೆಂದರೆ
ಪುನರಾವರ್ತನೆಯಲ್ಲ..
ಇಂದು ನಿನ್ನೆಯ ಸುತ್ತ
ಸುತ್ತುಸುತ್ತುವುದಲ್ಲ.
-ಶಿವಸುಂದರ್