Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೊಸಹೊಳಲು ಶಿಲ್ಪಕಲೆಗೆ ಬೆರಗಾದ ಸುಧಾಮೂರ್ತಿ

ಕೆ.ಆರ್.ಪೇಟೆ ತಾಲ್ಲೂಕಿನ ಹೊಯ್ಸಳ ಶಿಲ್ಪಕಲೆಯ ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರು ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ನೀಡಿ ಶಿಲ್ಪಕಲಾ ವೈಭವ ವೀಕ್ಷಣೆ ಮಾಡಿ ಬೆರಗಾದರು.

ಮಲೇಷಿಯಾ ದೇಶದಿಂದ ಆಗಮಿಸಿದ್ದ ಯುನೆಸ್ಕೋ ತಂಡದ 15 ಮಂದಿ ಸದಸ್ಯರ ತಂಡವನ್ನು ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಅವರನ್ನು ತಹಶೀಲ್ದಾರ್ ಎಂ.ವಿ.ರೂಪ ಆತ್ಮೀಯವಾಗಿ ಬರಮಾಡಿಕೊಂಡರು.

ದೇವಾಲಯದ ವಿಶೇಷವಾದ ಹೆಬ್ಬೆರಳು ಗಾತ್ರದ ಆಂಜನೇಯನು ಎಳನೀರು ಕುಡಿಯುತ್ತಿರುವ ಭಂಗಿಯನ್ನು ಕಣ್ತುಂಬಿಕೊಂಡು ರೋಮಾಂಚನಗೊಂಡ ಸುಧಾಮೂರ್ತಿ ಸಂತಸ ವ್ಯಕ್ತಪಡಿಸಿದರು.

ಸುಧಾಮೂರ್ತಿ ಅವರು ಮಾತನಾಡಿ, ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಶಿಲ್ಪಕಲೆಯ ವೈಭವ ಅದ್ಭುತವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳನ್ನು ಸಂರಕ್ಷಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಜನರು ಜೀವಂತ ಸ್ಮಾರಕವಾದ ದೇವಾಲಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಸುಧಾಮೂರ್ತಿ ಮನವಿ ಮಾಡಿದರು.

ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಸುತ್ತಲೂ ಒಂದು ಸುತ್ತು ಸಂಚರಿಸಿ ಅಪರೂಪದ ಶಿಲ್ಪಗಳು ಹಾಗೂ ರಾಮಾಯಣ, ಮಹಾಭಾರತ ಕುರಿತು ಶಿಲೆಯಲ್ಲಿ ಕೆತ್ತಿರುವ ದೃಶ್ಯಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಂಡರು.

ದೇವಾಲಯದ ಒಳಭಾಗದ ತ್ರಿಕೂಟಾಚಲದಲ್ಲಿ ಪ್ರಧಾನ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ನಂಬಿ ನಾರಾಯಣಸ್ವಾಮಿ, ಎಡಭಾಗದ ಗುಡಿಯಲ್ಲಿರುವ ಶ್ರೀ ಕೊಳಲುಗೋಪಾಲಸ್ವಾಮಿ ಹಾಗೂ ಬಲಭಾಗದ ಗರ್ಭಗುಡಿಯಲ್ಲಿ ಪ್ರಹ್ಲಾದನ ಸಮೇತವಾಗಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.

ರಾಜ್ಯ ಪುರಾತತ್ವ ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕ ಡಾ‌.ದೇವರಾಜು, ಮುಜರಾಯಿ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ತಹಶೀಲ್ದಾರ್ ರೂಪ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಮಂಡ್ಯ ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಪುರಸಭಾ ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಪಟ್ಟಣ ಠಾಣೆಯ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಹೊಸಹೊಳಲು ಗ್ರಾಮದ ಮುಖಂಡರಾದ ಡಾ.ಶ್ರೀನಿವಾಸಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!