Tuesday, May 21, 2024

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರ ಆರೋಪಿಗಳಿಗೆ ತ್ವರಿತ ಶಿಕ್ಷೆಯಾಗಲಿ : ಅತ್ಯಾಚಾರ ವಿರೋಧಿ ಆಂದೋಲನದ ”ಹಕ್ಕೊತ್ತಾಯ”

ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯಾದಾದ್ಯಂತ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಸೇರಿದಂತೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಶೀಘ್ರವಾಗಿ ಶಿಕ್ಷೆ ವಿಧಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಅತ್ಯಾಚಾರ ವಿರೋಧಿ ಆಂದೋಲನವು ಶನಿವಾರ ಮಂಡ್ಯ ಜಿಲ್ಲಾಡಳಿತಕ್ಕೆ ತಮ್ಮ ‘ಹಕ್ಕೊತ್ತಾಯ’ವನ್ನು ಸಲ್ಲಿಸಿತು.

ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರಗಳ ವಿರುದ್ಧ 15 ದಿನಗಳ ‘ಆಗ್ರಹ ಅಭಿಯಾನ’ ನಡೆಸಿದ ವಿವಿಧ ಮಹಿಳಾ ಪರ ಸಂಘಟನೆಗಳ ಮುಖಂಡರು ಇಂದು ಜಿಲ್ಲಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ಅವರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.

ಮಳವಳ್ಳಿ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿ ಶೀಘ್ರವಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಕಳೆದ ವರ್ಷಗಳಲ್ಲಿ ನಡೆದ ಕೆ.ಆರ್.ಪೇಟೆಯ ಪೌರಕಾರ್ಮಿಕ ಕುಟುಂಬದ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತು ಮದ್ದೂರು ತಾಲೂಕಿನ ಹುರುಗಲವಾಡಿಯಲ್ಲಿ ನಡೆದಿದ್ದ ವಲಸೆ ಕಾರ್ಮಿಕರ ಕುಟುಂಬದ ಬಾಲಕಿಯ ಘಟನೆಗಳಲ್ಲೂ ಶೀಘ್ರ ನ್ಯಾಯದಾನವಾಗಬೇಕು.

ನ್ಯಾಯದಾನ ಪ್ರಕ್ರಿಯೆಯನ್ನು ಬಿಗಿಗೊಳಿಸುವುದರಿಂದ ಅತ್ಯಾಚಾರದ ಮನಸ್ಥಿತಿ ಇರುವವರಲ್ಲಿ ಭಯ ಹುಟ್ಟಿಸಬಹುದು ಮತ್ತು ಘಟನೆಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ಪ್ರಕರಣಗಳ ತನಿಖೆ, ಸಾಕ್ಷಿ ಸಂಗ್ರಹ ಮತ್ತು ವಿಚಾರಣೆಯ ಪ್ರತಿ ಹಂತವನ್ನೂ ಅತ್ಯಂತ ಗಂಭೀರತೆಯಿಂದ, ಸಂತ್ರಸ್ತ ಮಹಿಳೆಯ ಪರವಾದ ಸಹಾನುಭೂತಿಯಿಂದ ನಡೆಸಬೇಕು ಎಂದು ಆಗ್ರಹಿಸಿದರು.

ಅತ್ಯಾಚಾರ ಸಂತ್ರಸ್ತರಿಗೆ ಎಲ್ಲ ಬಗೆಯ ನೆರವನ್ನೂ ಒಂದೇ ಛಾವಣಿಯಡಿ ಒದಗಿಸುವ ‘ಏಕಗವಾಕ್ಷಿ’ ಕೇಂದ್ರವನ್ನು ಆರಂಭಿಸಬೇಕು ಮತ್ತು ವ್ಯವಸ್ಥಿತವಾಗಿ ನಡೆಯುವುದನ್ನು ಖಾತ್ರಿಪಡಿಸಬೇಕು.
ಪುಟ್ಟ ಮಕ್ಕಳ ಅತ್ಯಾಚಾರ ಮತ್ತು ಕೊಲೆಯಂತಹ ಘೋರವಾದ ಪ್ರಕರಣಗಳು ಮುಂದಕ್ಕೆ ನಡೆಯುವುದನ್ನು ನಿಯಂತ್ರಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ನೀಡುವ ಹೋರ್ಡಿಂಗ್‌ಗಳನ್ನು ಅಳವಡಿಸುವುದು, ಪೋಸ್ಟರ್‌ಗಳನ್ನು ಅಂಟಿಸುವುದು, ಮಾಧ್ಯಮಗಳ ಮೂಲಕ ಅರಿವು ಮೂಡಿಸುವುದು ಮತ್ತು ಶಾಲಾ-ಕಾಲೇಜುಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಮುಂತಾದೆಡೆ ಜಾಗೃತಿ ಮೂಡಿಸುವುದನ್ನು ನಿರಂತರವಾಗಿ ನಡೆಸಬೇಕು.

ಮಕ್ಕಳನ್ನು ತಪ್ಪು ದಾರಿಗೆಳೆಯುವ ಜಾಲತಾಣಗಳನ್ನು ನಿರ್ಬಂಧಿಸಿ

nudikarnataka.com

ಈ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಮಹಿಳಾ ಸಂಘಟನೆಗಳು-ಸ್ವಯಂ ಸೇವಾ ಸಂಸ್ಥೆಗಳನ್ನೊಳಗೊಂಡ ಟಾಸ್ಕ್ ಫೋರ್ಸ್ಗಳನ್ನು ತುರ್ತಾಗಿ ರಚಿಸಬೇಕು. ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಾ ಹದಿವಯಸ್ಸಿನ ಗೊಂದಲದಲ್ಲಿರುವ ಮಕ್ಕಳನ್ನು ತಪ್ಪು ದಾರಿಗೆಳೆಯುವ ಜಾಲತಾಣಗಳನ್ನೂ, ಸಿನೆಮಾಗಳನ್ನೂ, ಜಾಹೀರಾತುಗಳನ್ನೂ ನಿರ್ಬಂಧಿಸಬೇಕೆಂದು ಒತ್ತಾಯಿಸಿದರು.

ಅಸಂಬದ್ಧ ಹೇಳಿಕೆ ನೀಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

ಅತ್ಯಾಚಾರದ ಘಟನೆಗಳು ನಡೆದ ಸಂದರ್ಭಗಳಲ್ಲಿ ತಮ್ಮ ಕರ್ತವ್ಯ ನಿಭಾಯಿಸುವುದನ್ನು ಬಿಟ್ಟು ಅಸಂಬದ್ಧವಾದ, ಉನ್ಮಾದವನ್ನು ತುಂಬುವ ಯಾವುದೋ ಒಂದು ಸಮುದಾಯವನ್ನು ಗುರಿಮಾಡುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ ಜರುಗಿಸಬೇಕು.

ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಮಾನತೆಯ ಪಾಠ ಕಲಿಸುವ ಅಗತ್ಯವಿದೆ

ಅತ್ಯಾಚಾರಗಳು ಕೇವಲ ಲೈಂಗಿಕ ವಾಂಛೆಯಿಂದ ನಡೆಯುವುದಿಲ್ಲ. ಹಿಂಸೆಯನ್ನು ಸಣ್ಣ ವಯಸ್ಸಿನಿಂದ ನೋಡಿ ಬೆಳೆದ ಅಥವಾ ಅನುಭವಿಸಿದ ಮಕ್ಕಳು ದೊಡ್ಡವರಾದಾಗ ಹಿಂಸೆಯ ಪ್ರವರ್ತಕರಾಗುವುದು ಶೇ.70ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಂಡಿರುವ ಸಂಗತಿ. ಮಹಿಳೆಯನ್ನು ದಮನಿಸಬಹುದು, ಅವಮಾನಿಸಬಹುದು, ಹಿಂಸಿಸಬಹುದು ಮತ್ತು ಕೊಲ್ಲಬಹುದು ಎಂಬ ಪರವಾನಿಗೆಯನ್ನು ಗಂಡಸರಿಗೆ ಧಾರಾಳವಾಗಿ ನೀಡುವ ಸಾಂಸ್ಕೃತಿಕ ಮೌಲ್ಯ ಇರುವ ತನಕ ಹಿಂಸೆಗಳು ನಡೆಯುತ್ತವೆ. ಇದನ್ನು ಬದಲಾಯಿಸಲು, ಹಿರಿಯರು ನಡೆಸುವ ಹಿಂಸೆಗಳನ್ನು ನಿಲ್ಲಿಸುವ ಮತ್ತು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಮಾನತೆಯ ಪಾಠವನ್ನು ಆಳವಾಗಿ ಕಲಿಸಬೇಕಾದ ಅಗತ್ಯವಿದೆ ಎಂದು ಒತ್ತಾಯಿಸಿದರು.

ಸಮಾನತೆಯ ಮನಸ್ಥಿತಿ ಬೆಳೆಸುವಂತಹ ಪಠ್ಯಕ್ರಮವಿರಲಿ 

ತಾರತಮ್ಯಗಳನ್ನು ನಿರಾಕರಿಸುವ, ಸಮಾನತೆಯ ಮನಸ್ಥಿತಿಯನ್ನು ಬೆಳೆಸುವಂತಹ ಪಠ್ಯಕ್ರಮವನ್ನು ಸರ್ಕಾರಗಳು ಶಾಲಾ ಶಿಕ್ಷಣದಲ್ಲಿಯೇ ಒಳಗೊಳ್ಳಬೇಕು. ಮನೆಮನೆಗಳಲ್ಲಿ ಆರೋಗ್ಯಕರ ಮನಸ್ಥಿತಿ ರೂಪಿಸಲು ಬೇಕಾದ ರೀತಿಯಲ್ಲಿ ಸಮಾಜದಲ್ಲಿ ಅರಿವಿನ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಸರ್ಕಾರವು ಸೂಕ್ತ ಹೆಜ್ಜೆಗಳನ್ನಿಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ತಲುಪಿಸುವುದಕ್ಕೂ ತಾವು ಮುಂದಾಗಬೇಕೆಂದು ಹಕ್ಕೊತ್ತಾಯ ಮಾಡಿದರು.

ವಿಶೇಷ  ಮಕ್ಕಳ ಪೊಲೀಸ್  ಘಟಕ ಸಕ್ರಿಯಗೊಳಿಸಿ

ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಮಕ್ಕಳ ಪೊಲೀಸ್ ಘಟಕ ಸ್ಥಾಪಿಸಿ, ಮಕ್ಕಳ ಮೇಲೆ ಹೆಚ್ಚು ನಿಗಾವಹಿಸಬೇಕು ವಹಿಸಬೇಕು. ಅತ್ಯಾಚಾರ ಸಂತ್ರಸ್ಥರು ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸುವ ಸಂದರ್ಭದಲ್ಲಿ ಅವರೊಂದಿಗೆ ಸಂವೇದನೆಯಿಂದ ವರ್ತಿಸಲು ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಬೇಕು. ಅಲ್ಲದೇ ಪ್ರತಿ ಹಳ್ಳಿ ಮತ್ತು ಗ್ರಾ.ಪಂ.ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸಬೇಕೆಂದರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಈಗಾಗಲೇ ಜಿಲ್ಲೆಯಲ್ಲಿ 24 ಶಾಲಾ-ಕಾಲೇಜುಗಳಲ್ಲಿ ಸ್ಪೆ‍‍ಷೆಲ್ ಪೊಲೀಸ್ ಕೆಡೆಟ್ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಹಿರಿಯ ಬರಹಗಾರ್ತಿ ಹಾಗೂ ಹಿರಿಯ ಸಾಹಿತಿ ಡಾ.ವಿಜಯಾ , ಡಾ.ವೆಂ.ವನಜಾ, ಸ್ತ್ರೀವಾದಿ, ಬರಹಗಾರ್ತಿ ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಗೌರಿ, ನಿವೃತ್ತ ಉಪನ್ಯಾಸಕ ಮಳವಳ್ಳಿಯ ಎಂ.ವಿ.ಕೃಷ್ಣ, ವಕೀಲ ಬಿ.ಟಿ.ವಿಶ್ವನಾಥ್, ಮಹಿಳಾ ಮುನ್ನಡೆಯ ಸುಷ್ಮಾ ಬೆಂಗಳೂರು, ಸಿಐಟಿಯು ಸಂಘಟನೆಯ ಸಿ.ಕುಮಾರಿ, ನೆಲದನಿ ಬಳಗದ ಲಂಕೇಶ್, ರಾಧಾ ವಿಕಸನ, ಕರ್ನಾಟಕ ಜನಶಕ್ತಿಯ  ಸಿದ್ದರಾಜು, ಅರುಣೋದಯ ಕಲಾ ಬಳಗದ ಮಂಜುಳ, ಸಮತಾ ವೇದಿಕೆಯ ಸುಶೀಲಾ ಮೈಸೂರು, ಸಮರ್ಥನ ಬಳಗದ ನಾಗರೇವಕ್ಕ, ನಿವೃತ್ತ ಪ್ರಾಧ್ಯಾಪಕ ಡಾ.ಕಾಳಚನ್ನೇಗೌಡ, ಬೆಂಗಳೂರು ಮಾನಸ ಬಳಗದ ಪುಷ್ಪ, ಮಳವಳ್ಳಿಯ ಶಿಕ್ಷಕಿ ಕಿರಣ, ಮಹಿಳಾ ಮುನ್ನಡೆಯ ಶಿಲ್ಪ ,ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!