Thursday, September 19, 2024

ಪ್ರಾಯೋಗಿಕ ಆವೃತ್ತಿ

ಕವಲುದಾರಿಯಲ್ಲಿ ಕರ್ನಾಟಕದ ಜಾತ್ಯಾತೀತ ಜನತಾದಳ…….

✍️ ವಿವೇಕಾನಂದ ಎಚ್ ಕೆ

ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಮುಲಯಾಂಸಿಂಗ್ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಒರಿಸ್ಸಾದ ಬಿಜು ಪಾಟ್ನಾಯಕ್ ಕುಟುಂಬ, ಕಾಶ್ಮೀರದ ಷೇಕ್ ಅಬ್ದುಲ್ಲಾ ಕುಟುಂಬ, ಮುಪ್ತಿ ಮಹಮದ್ ಸಯೀದ್ ಕುಟುಂಬ, ಆಂಧ್ರ ಪ್ರದೇಶದ ರಾಜಶೇಖರ್ ರೆಡ್ಡಿ ಕುಟುಂಬ, ಮಹಾರಾಷ್ಟ್ರದ ಬಾಳಾ ಠಾಕ್ರೆ ಕುಟುಂಬ, ಜಾರ್ಖಂಡ್ ನ ಶಿಬು ಸೊರೇನ್ ಕುಟುಂಬ, ಪಂಜಾಬ್ ನ ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಹರಿಯಾಣದ ಚೌಧರಿ ದೇವಿ ಲಾಲ್ ಚೌತಾಲ ಕುಟುಂಬ, ತೆಲಂಗಾಣದ ಚಂದ್ರಶೇಖರ್ ರಾವ್ ಕುಟುಂಬ ಹೀಗೆ ಕೆಲವು ಪ್ರಬಲ ಕುಟುಂಬಗಳು, ಒಂದಷ್ಟು ಜಾತಿಯ ಪ್ರಭಾವದಿಂದಾಗಿ ಭಾರತದ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಪ್ರಾದೇಶಿಕ ಪಕ್ಷಗಳಾಗಿ ಬೆಳವಣಿಗೆ ಹೊಂದಿವೆ……

ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಯ ಜನತಾ ಪಕ್ಷದ ಮೂಲವನ್ನೇ ಹೊಂದಿರುವ ದೇವೇಗೌಡರ ನೇತೃತ್ವದ ಈಗಿನ ಜಾತ್ಯಾತೀತ ಜನತಾದಳ ಕರ್ನಾಟಕದ ಪ್ರಬಲ ಮೂರನೆಯ ರಾಜಕೀಯ ಶಕ್ತಿ…….

ಕಾಂಗ್ರೇಸ್ ಪಕ್ಷವನ್ನು ವಿರೋಧಿಸುತ್ತಿದ್ದ ಬಹಳಷ್ಟು ಸಮಾಜವಾದಿ ಹಿನ್ನಲೆಯ ನಾಯಕರು ರಾಜಕೀಯ ಪ್ರಯೋಗಗಳಿಂದ ಬೆಳಕಿಗೆ ಬರಲು ವೇದಿಕೆಯಾದ ಪಕ್ಷವಿದು. ರೈತರ ಪರವಾದ ಪಕ್ಷ ಎಂಬ ಹೆಮ್ಮೆಯ ಜೊತೆಗೆ ಹೆಚ್ಚು ಒಕ್ಕಲಿಗ ಜಾತಿಯ ಬೆಂಬಲದ ಪಕ್ಷ ಎಂಬ ಹಣೆಪಟ್ಟಿಯನ್ನು ಹೊಂದಿದೆ…..

20/20 ಕ್ರಿಕೆಟ್ ನಲ್ಲಿ ಭರ್ಜರಿ ಯಶಸ್ವಿಯಾದ ಜನತಾದಳ ಟೆಸ್ಟ್ ಕ್ರಿಕೆಟ್ನಲ್ಲಿ ವಿಫಲವಾಯಿತು. ಅದಕ್ಕೆ ಕಾರಣ……..ಎಚ್ ಡಿ ಕುಮಾರಸ್ವಾಮಿ…

ರಾಜಕಾರಣಿಗಳಲ್ಲಿ ಅಪರೂಪದ ಬ್ರದರ್ ಸಂಸ್ಕೃತಿಯ ತಾಯ್ಮನದ ವ್ಯಕ್ತಿ ಕುಮಾರಸ್ವಾಮಿ. ಇವರು ಪಕ್ಷದಲ್ಲಿ ಮುನ್ನಲೆಗೆ ಬಂದ ನಂತರ ಪಕ್ಷದ ಕವಲುದಾರಿಯ ಹಾದಿ ಮುಕ್ತವಾಯಿತು….

ಪರಿಸ್ಥಿತಿಯ ಶಿಶುವೋ, ಅಧಿಕಾರ ದಾಹವೋ, ಹುಡುಗಾಟವೋ, ಕುತಂತ್ರದ ಭಾಗವೋ ಒಟ್ಟಿನಲ್ಲಿ ಪಕ್ಷದ ಮೂಲ ಸೈದ್ದಾಂತಿಕ ನಿಷ್ಠೆ ಅಪಮೌಲ್ಯಗೊಂಡು ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾದರು…..

ಅಲ್ಲಿಂದ ಇಲ್ಲಿಯವರೆಗೆ ಜಾತ್ಯಾತೀತ ಜನತಾದಳ ತೂಗುಯ್ಯಾಲೆಯಲ್ಲಿ ಮುನ್ನಡೆಯುತ್ತಿದೆ. ಅವಕಾಶವಾದಿ ರಾಜಕಾರಣದ ಆರೋಪಕ್ಕೆ ಗುರಿಯಾಗಿದೆ. ತನ್ನ ಗತಕಾಲದ ವೈಭವ ಪಡೆಯಲು ಯತ್ನಿಸುತ್ತಿರುವ ಸಮಯದಲ್ಲಿ ಅಸ್ತಿತ್ವಕ್ಕಾಗಿಯೂ ಹೋರಾಡಬೇಕಾಗಿದೆ…..

ಟೆಸ್ಟ್ ಕ್ರಿಕೆಟ್ ರೀತಿಯಲ್ಲಿ ದೀರ್ಘಕಾಲದ ರಾಜಕೀಯದಲ್ಲಿ ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಚಾಣಾಕ್ಷ ರಾಜಕಾರಣಿಯಾದ ದೇವೇಗೌಡರು 20/20 ಮಾದರಿ ಜನಪ್ರಿಯವಾದಾಗ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದ್ದಾರೆ. ಹೊಡಿಬಡಿ ಚುಟುಕು ಆಟದಲ್ಲಿ ಸಾಮಾನ್ಯ ಆಟಗಾರ ಸಹ ಯಶಸ್ವಿಯಾಗಬಹುದು, ನುರಿತ ಆಟಗಾರ ವಿಫಲವಾಗಬಹುದು ಹಾಗೆಯೇ ಅದು ತಾತ್ಕಾಲಿಕವೂ ಆಗಬಹುದು. ಪ್ರತಿಭೆಗಿಂತ ಅದೃಷ್ಟದ ಆಟ, ತಂತ್ರಗಾರಿಕೆಯೇ ಇಲ್ಲಿ ಮುಖ್ಯವಾಗುತ್ತದೆ…..

ಈ 20/20 ಆಟದ ಪ್ರವೀಣ ಕುಮಾರಸ್ವಾಮಿಯವರು ಪ್ರಾರಂಭದಲ್ಲಿ ಯಶಸ್ವಿಯಾದರು. ಆದರೆ ಆಟ ಟೆಸ್ಟ್ ಮಾದರಿಗೆ ಪರಿವರ್ತನೆಯಾದಾಗ ಬೇಗ ಸುಸ್ತಾಗಿ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಕಳೆದುಕೊಂಡರು. ದೀರ್ಘಕಾಲದಲ್ಲಿ ಅದು ಈಗ ದುಷ್ಪರಿಣಾಮ ಬೀರುತ್ತಿದೆ. ಪಕ್ಷದ ಶಕ್ತಿಯೂ ಕುಂದುತ್ತಿದೆ. ಆತ್ಮೀಯರು ದೂರ ಸರಿಯುತ್ತಿದ್ದಾರೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ……

ಹೀಗೆ ಪ್ರತಿ ಚುನಾವಣೆಯಲ್ಲಿ ಮತ್ತು ಫಲಿತಾಂಶದ ನಂತರ ನಿಲುವುಗಳನ್ನು ತಮ್ಮ ಮನಸ್ಸಿಗೆ ತೋಚಿದಂತೆ ಬದಲಾಯಿಸುತ್ತಾ ಹೋದರೆ, ಮಾಧ್ಯಮಗಳ ಮುಂದೆ ನಿಯಂತ್ರಣ ಮೀರಿ ಆಗೊಂದು ಹೀಗೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಸಾಮಾನ್ಯ ಜನರಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತದೆ. ಪಕ್ಷದ ಸಂಘಟನಾ ಸಾಮರ್ಥ್ಯ ಬಲವಾಗಿದ್ದರೆ ಮಾತ್ರ ರಾಷ್ಟ್ರೀಯ ಪಕ್ಷಗಳು ಮಾತುಕತೆ ಅಥವಾ ಹೊಂದಾಣಿಕೆಗೆ ಮುಂದಾಗುತ್ತವೆ. ಪಕ್ಷವೇ ದುರ್ಬಲವಾದರೆ ತುಂಬಾ ಕಷ್ಟವಾಗುತ್ತದೆ……

ಕರ್ನಾಟಕದ ಜಾತ್ಯಾತೀತ ಜನತಾದಳಕ್ಕೆ ಅತ್ಯಂತ ತುರ್ತಾಗಿ ಒಂದು ” ಚಿಂತಕರ ಚಾವಡಿ ” ( Think Tank ) ಯ ಅವಶ್ಯಕತೆ ಇದೆ. ಅದರಲ್ಲಿ ರಾಜಕೀಯ ದುರೀಣರ ಜೊತೆಗೆ, ಹಿರಿಯ ಪತ್ರಕರ್ತರು, ರೈತ ಮುಖಂಡರು, ಹೋರಾಟಗಾರರು, ಚಿಂತಕರು, ನಿವೃತ್ತ ಹಿರಿಯ ಅಧಿಕಾರಿಗಳು, ರಾಜಕೀಯ ವಿಶ್ಲೇಷಕರು, ಧಾರ್ಮಿಕ ಮುಖಂಡರು, ಮಹಿಳಾ ನಾಯಕಿಯರು ಹೀಗೆ ಒಂದಷ್ಟು ವಿಷಯ ತಜ್ಞರು ಸಲಹಾ ಸಮಿತಿ ಬಹಳ ಮುಖ್ಯವಾಗುತ್ತದೆ….

ಆ ಮೂಲಕ ಹೊಸ ರಕ್ತದ, ಹೊಸ ನಾಯಕತ್ವ, ದೃಢ ರಾಜಕೀಯ ನಿರ್ಧಾರಗಳು ಸೃಷ್ಟಿಯಾಗುತ್ತದೆ. ನಿಧಾನವಾಗಿ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಮಾಧ್ಯಮಗಳ ಅಥವಾ ಸಾಮಾಜಿಕ ಜಾಲತಾಣಗಳ ಹೀರೋ ಆಗುವ ಚಟವನ್ನು ಬಿಡಬೇಕು. ಜನಪ್ರಿಯತೆ ಆಳವಾಗಿ ಜನರ ಮನಸ್ಸುಗಳಲ್ಲಿ ಮೂಡಬೇಕೆ ಹೊರತು ಮಾಧ್ಯಮಗಳಲ್ಲಿಯಲ್ಲ……

ಮಾಧ್ಯಮಗಳಲ್ಲಿ ಆಕ್ರಮಣಕಾರಿ ಟೀಕೆಗಳಿಂದ ಅವರ ವ್ಯಕ್ತಿತ್ವ ಕುಗ್ಗುತ್ತದೆ. ಮುಕ್ತ ಮಾತುಗಳಿಂದ ಅನವಶ್ಯಕವಾಗಿ ದ್ವೇಷ ಅಸೂಯೆ ಹೊರಬರುತ್ತದೆ. ರಾಜಕೀಯವಾಗಿ ಇದು ಉತ್ತಮ ನಡೆಯಲ್ಲ…

ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಅಸ್ತಿತ್ವದಲ್ಲಿದ್ದರೆ ರಾಜ್ಯದ ಹಿತಾಸಕ್ತಿಗೆ ಅತ್ಯಂತ ಪೂರಕವಾಗಿ ಕೆಲಸ ಮಾಡಬಹುದು. ಅವುಗಳನ್ನು ಸದಾ ಜಾಗೃತಾವಸ್ಥೆಯಲ್ಲಿ ಇಡಬಹುದು. ನೆಲ ಜಲ‌ ಭಾಷೆ ಸಂಸ್ಕೃತಿಯನ್ನು ಕಾಪಾಡಬಹುದು……

ಕುಮಾರ ಸ್ವಾಮಿಯವರು ಈ ನಿಟ್ಟಿನಲ್ಲಿ ಯೋಚಿಸಬೇಕು. ವೈಯಕ್ತಿಕ ರಾಗ ದ್ವೇಷವನ್ನು ನಿಯಂತ್ರಿಸಿಕೊಳ್ಳಬೇಕು. ದೇವೇಗೌಡರ ಅಪಾರ ತಾಳ್ಮೆ, ಅವಕಾಶಕ್ಕಾಗಿ ಕಾಯುವಿಕೆ, ಸಮಯ ಪ್ರಜ್ಞೆ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು. ಮೈತ್ರಿ ನಿರ್ಧಾರಗಳು ಯಾರ ಜೊತೆಯೇ ಆಗಲಿ ಪಕ್ಷದ ಹಿತದೃಷ್ಟಿಯಿಂದ ಇರಬೇಕೇ ಹೊರತು ವೈಯಕ್ತಿಕ ಕೋಪವನ್ನು ಮೀರಬೇಕು….‌‌..

ಕರ್ನಾಟಕದ ಸಾಮಾನ್ಯ ಜನರ ಮನಸ್ಸಿನಲ್ಲಿ ಹೆಣೃದಯದ ಮುಖ್ಯಮಂತ್ರಿ ಎಂದು ಹೆಸರು ಗಳಿಸಿ ಬಡವರ ಕಷ್ಟಕ್ಕೆ ಸ್ಪಂದಿಸುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯದ ನಡುವೆಯೂ ಚಟುವಟಿಕೆಯ ರಾಜಕೀಯ ಮಾಡುತ್ತಿದ್ದಾರೆ. ಅವರ ಮುಂದಿನ ನಡೆಗಳು ಹೆಚ್ಚು ಪ್ರಬುದ್ದವಾಗಿರಲಿ, ಕನ್ನಡ ನಾಡಿನ ಜನತೆಯ ಪರವಾಗಿರಲಿ ಎಂದು ಆಶಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!