Friday, September 20, 2024

ಪ್ರಾಯೋಗಿಕ ಆವೃತ್ತಿ

ನಮ್ಮನ್ನು ಮನುಷ್ಯರೆಂದು ಪರಿಗಣಿಸಿ: ಸ್ಲಂ ಜನರ ಕಷ್ಟಕ್ಕೆ ಸ್ಪಂದಿಸಿ

ಸತತ ಮಳೆಗೆ ಸ್ಲಂನಲ್ಲಿ ನೀರು ತುಂಬಿಕೊಂಡರೂ ಕೇಳೋರಿಲ್ಲ… ಮನೆಗೋಡೆ ಕುಸಿದರೂ ಸ್ಪಂದಿಸುವವರಿಲ್ಲ… ಮತ ಹಾಕಲು ಮಾತ್ರ ನಾವಿರೋದಾ.‌‌.. ನಮ್ಮನ್ನು ಮನುಷ್ಯರೆಂದು ಪರಿಗಣಿಸಿ, ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಿ….ಇದು ಮಂಡ್ಯ ನಗರದ ಕಾಳಿಕಾಂಭ ಹಾಗೂ ನ್ಯೂ ತಮಿಳು ಕಾಲೋನಿ ಸ್ಲಂ ನಿವಾಸಿಗಳ ಅಳಲು.

ಮಂಡ್ಯ ನಗರದ ಹಾಲಹಳ್ಳಿ ನ್ಯೂ ತಮಿಳು ಕಾಲೋನಿಯಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಹಲವು ಮನೆಗಳು ಜಲಾವೃತಗೊಂಡು ಮಳೆಯ ನೀರಿಗೆ ಗೋಡೆಗಳು ವಸ್ತಿ ಹಿಡಿದುಕೊಂಡು ಕುಸಿಯುವ ಹಂತದಲ್ಲಿದೆ. ಮಳೆ ನೀರು ಸ್ಲಂ ಸುತ್ತಲೂ ತುಂಬಿಕೊಂಡು ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜಿಲ್ಲಾಡಳಿತ ಬಂದು ನಮ್ಮ ಸಂಕಷ್ಟ ಕೇಳಿಲ್ಲ, ಕೊಳಗೇರಿ ಅಭಿವೃದ್ದಿ ಅಧಿಕಾರಿಗಳು ಬಂದು ನಮ್ಮ ಸಂಕಷ್ಟ ಆಲಿಸಿಲ್ಲ, ಎಂಬುದು ಇಲ್ಲಿಯ ನಿವಾಸಿಗಳ ಗೋಳು.

ಸ್ಲಂ ಜನರಿಗೆ ನಿವೇಶನ, ಹಕ್ಕು ಪತ್ರ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಹತ್ತಾರು ಬಾರಿ ಪ್ರತಿಭಟನೆ ಮಾಡಿದ್ದೇವೆ. ಜಿಲ್ಲಾಡಳಿತ ಮಾತ್ರ ನಮಗೆ ಭರವಸೆ ನೀಡಿಕೊಂಡು ಬಂದಿದೆಯೇ ವಿನಃ ಇದುವರೆಗೂ ಯಾವ ಸೌಲಭ್ಯಗಳನ್ನು ಕೂಡ ಕಲ್ಪಿಸಿಲ್ಲ. ಸುಮಾರು ಮೂರು ತಲೆಮಾರುಗಳಿಂದ ನಾವು ವಾಸ ಮಾಡುತ್ತಿದ್ದೇವೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕಾರಣಿಗಳು ಬಂದು ನಮಗೆ ಮತ ಹಾಕಿ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇದುವರೆಗೆ ನಮಗೆ ಮನೆಯನ್ನಾಗಲೀ, ಹಕ್ಕುಪತ್ರವನ್ನಾಗಲಿ ನೀಡಿಲ್ಲ ಎಂದು ನ್ಯೂ ತಮಿಳು ಕಾಲೋನಿಯ ರತ್ನ ಆರೋಪಿಸಿದರು.

ಕಳೆದ ಒಂದು ವಾರದಿಂದ ಬರುತ್ತಿರುವ ಮಳೆಯಿಂದಾಗಿ ಮೋರಿ ನೀರು ಮನೆಯ ಒಳಗೆ ಹರಿದು ಬಂದಿದೆ. ಅದರೊಂದಿಗೆ ಹಾವುಗಳು ಕೂಡ ಹರಿದು ಬಂದಿದೆ. ಕುಡಿಯುವ ನೀರಿಗೆ ಮಳೆಯ ನೀರು, ಮೋರಿ ನೀರು ಎಲ್ಲವೂ ಸೇರಿ ಕಲುಷಿತವಾಗಿದೆ. ಇದನ್ನೇ ನಾವು ಕುಡಿಯಬೇಕಾದ ದುಸ್ಥಿತಿ ಉಂಟಾಗಿದೆ. ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಮನುಷ್ಯರಾ? ಸ್ಲಂ ಜನರು ಮನುಷ್ಯರಲ್ವಾ ಎಂದು ನೋವಿನಿಂದ ನುಡಿಯುತ್ತಾರೆ.

ಈ ನಗರವನ್ನು ಸ್ವಚ್ಛ ಮಾಡಲು ಸ್ಲಂ ಜನರು ಬೇಕು, ಗಾರೆ ಕೆಲಸ ಸೇರಿದಂತೆ ಹಲವು ಕೂಲಿ ಕೆಲಸಕ್ಕೆ ನಾವು ಬೇಕು. ಆದರೆ ನಮ್ಮ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸ ಬೇಡ್ವಾ. ಮನೆಗೆ ನೀರು ನುಗ್ಗಿ ಹಲವು ದಿನಗಳಿಂದ ಊಟ ನಿದ್ರೆ ಇಲ್ಲದೆ ಕಳೆಯುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ನಮಗೆ ಬಹಳ ಕಷ್ಟವಾಗುತ್ತದೆ. ಯಾಕಾದರೂ ಮಳೆ ಬಂತೋ ಎಂದು ಶಪಿಸುವಂತಾಗಿದೆ ಎಂದು ಕಾಳಿಕಾಂಬ ಸ್ಲಂ ನಿವಾಸಿ ರಾಜು ಗೋಳಾಡುತ್ತಾರೆ.

ಮಳೆ ನೀರು ಸ್ಲಂ ಸುತ್ತಲೂ ನಿಂತಿದ್ದು,ರೋಗ ರುಜಿನಗಳಿಗೆ ಕಾರಣವಾಗಿದೆ.ಮನೆಯೊಳಗೆ ನೀರು ಬಂದು ಇದ್ದಬದ್ದ ಆಹಾರ ಪದಾರ್ಥಗಳು ನೀರಿನಿಂದ ನಾಶವಾಗಿದೆ. ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಬದುಕುವುದೇ ಕಷ್ಟವಾಗಿದೆ. ಜಿಲ್ಲಾಡಳಿತಕ್ಕೆ ನಮ್ಮ ಕಷ್ಟ ಕಾಣಿಸ್ತಿಲ್ವಾ,ನಮ್ಮ ಸಮಸ್ಯೆಗೆ ಪರಿಹಾರ ನೀಡೋದಿಲ್ವಾ ಎಂದು ಕಾಳಿಕಾಂಭ ಸ್ಲಂನ ಅಂಧ ಮಹಿಳೆ ಮುನಿಯಮ್ಮ ಕಣ್ಣೀರು ಹಾಕಿದರು.


ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ಪ್ರವಾಹ : ದ್ವೀಪದಲ್ಲಿ ಸಲುಕಿದ 10 ಮಂದಿ ಕುರಿಗಾಯಿಗಳು -900 ಕುರಿಗಳು


ಒಟ್ಟಾರೆ ಮಳೆ ಬಂದರೆ ಸ್ಲಂ ನಿವಾಸಿಗಳ ಬದುಕು ದಾರುಣವಾಗುತ್ತದೆ.ಮಳೆ ಎಂದರೆ ಬೆಚ್ಚಿ ಬೀಳುವಂತಾಗಿದೆ.ಇನ್ನಾದರೂ ಜಿಲ್ಲಾಡಳಿತ ಸ್ಲಂ (ಶ್ರಮಿಕರ)ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಪರ ಸ್ಪಂದಿಸದಿದ್ದರೆ ಜಿಲ್ಲಾಡಳಿತ ಏಕಿರಬೇಕೋ? ಜಿಲ್ಲಾಧಿಕಾರಿ ಅಶ್ವತಿ ಅವರು ಸ್ಲಂ ಜನರ ಪರ ಇನ್ನಾದರೂ ಸ್ಪಂದಿಸಲಿ ಎಂಬುದು ನುಡಿ‌ ಕರ್ನಾಟಕ.ಕಾಮ್ ಮನವಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!