Friday, September 20, 2024

ಪ್ರಾಯೋಗಿಕ ಆವೃತ್ತಿ

ಪಾದಯಾತ್ರೆ ಮುಗಿದ ಬೆನ್ನಲ್ಲೇ ಬಿಜೆಪಿ ಅತೃಪ್ತರ ಪ್ರತ್ಯೇಕ ಸಭೆ; ವಿಜಯೇಂದ್ರಗೆ ಸೆಡ್ಡು ಹೊಡೆಯಲು ಪ್ಲಾನ್

ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮೂಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್‌‍ ನಾಯಕರು ಪಾದಯಾತ್ರೆ ನಡೆಸಿದ ಬೆನ್ನಲ್ಲೇ, ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿಯ ಹಿರಿಯ ನಾಯಕರು ಭಾನುವಾರ ರಹಸ್ಯ ಸಭೆ ನಡೆಸಿದ್ದಾರೆ.

ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ರಾಜ್ಯ ಬಿಜೆಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ನಗರ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಅತೃಪ್ತರ ಗುಪ್ತ ಸಭೆಯಲ್ಲಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಕೂಡ ಭಾಗವಹಿಸಿದ್ದರು.

ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತ ಹಾಗೂ ಟಿಕೆಟ್ ವಂಚಿತ ಅತೃಪ್ತರನ್ನು ಒಟ್ಟುಗೂಡಿಸುವಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ರಮೇಶ್‌ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಬಿಎಸ್‌‍ವೈ, ಬಿ.ವೈ.ವಿಜಯೇಂದ್ರ ಹಾಗೂ ಅಶೋಕ್‌ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅತೃಪ್ತರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಹಿಂದೆ ಸರಿದಿದ್ದರು. ಬೆಳಗಾವಿ ಜಿಲ್ಲೆಯ ಯಾವ ನಾಯಕರೂ ಸಹ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಬಾಲಚಂದ್ರ ಜಾರಕಿಹೊಳಿ ಸಹ ಅಂತರ ಕಾಯ್ದುಕೊಂಡಿದ್ದಾರೆ.

ಇದೀಗ ಅತೃಪ್ತ ನಾಯಕರು ಸಭೆ ನಡೆಸಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಜಿಎಂ ಸಿದ್ದೇಶ್ವರ ಹಾಗೂ ಪ್ರತಾಪ್ ಸಿಂಹ. ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಬಿಎಸ್‌ವೈ ಮಾಜಿ ಆಪ್ತ ಸಹಾಯಕ ಸಂತೋಷ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಮೂಡಾ ಪಾದಯಾತ್ರೆಗೆ ವಿರುದ್ಧವಾಗಿ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಬಿಎಸ್‌ವೈ ಕುಟುಂಬದ ವಿರುದ್ಧ ಯತ್ನಾಳ್‌ ನೇತೃತ್ವದಲ್ಲಿ ಮತ್ತೊಂದು ತಂಡ ಸಕ್ರಿಯವಾಗುತ್ತಿದೆ ಎನ್ನಲಾಗಿದೆ.

ಹಲವು ವರ್ಷಗಳಿಂದ ಬಿಎಸ್‌ವೈ ಕುಟುಂಬದ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿರುವ ಯತ್ನಾಳ್ ಅವರಿಗೆ ಹಲವರು ಬಿಜೆಪಿ ನಾಯಕರು ಸಾಥ್ ಕೊಟ್ಟಿರುವುದು ಪಕ್ಷದ ಬಲಾಢ್ಯ ನಾಯಕರಿಗೆ ಈ ಗುಂಪಿನ ಕಾರ್ಯಚಟುವಟಿಕೆಗಳು ನುಂಗಲಾರದ ತುತ್ತಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನಾಯಕರು ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರೂ, ಬಹುತೇಕ ನಾಯಕರು ಯತ್ನಾಳ್‌ ಬೆನ್ನ ಹಿಂದೆ ಇರುವುದು ಸ್ಪಷ್ಟವಾಗಿದೆ.

ಲಿಂಬಾವಳಿ ಹೇಳಿದ್ದೇನು?

ಪಕ್ಷದ ಹಿರಿಯ ನಾಯಕರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರವಿಂದ ಲಿಂಬಾವಳಿ ಕೂಡ ಒಬ್ಬರು. ಇದೀಗ ಇವರೂ ಸಹ ಬಿಎಸ್‌ವೈ ಕುಟುಂಬದ ವಿರುದ್ಧ ಬಂಡಾಯ ಸಾರಿದ್ದು, ಅತೃಪ್ತರ ಗುಂಪು ಸೇರಿದ್ದಾರೆ.

ಸಭೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಿಂಬಾವಳಿ, “ಇದು ಅತೃಪ್ತರ ಅಥವಾ ಭಿನ್ನಮತಿಯರ ಸಭೆ ಅಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಆಗದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದೆ. ಬಿಜೆಪಿ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಪಕ್ಷದಲ್ಲಿನ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ” ಎಂದು ಹೇಳಿದರು.

“ಮುಖ್ಯವಾಗಿ ವಾಲ್ಮೀಕಿ ನಿಗಮದ ಹಣ ದುರುಪಯೋಗ ಮತ್ತು ಎಸ್​ಸಿಪಿ, ಟಿಎಸ್​ಪಿ ಮೀಸಲಿಟ್ಟಿರುವ ಹಣವನ್ನು ತಮ್ಮ ಗ್ಯಾರಂಟಿಗಳಿಗೆ ಬಳಸಿರುವ ಬಗ್ಗೆಯೂ ಸುದೀರ್ಘ ಹೋರಾಟ ಕೈಗೆತ್ತಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಎಲ್ಲ ಸಂಗತಿಗಳನ್ನು ಹೈಕಮಾಂಡ್ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸುತ್ತೇವೆ. ಮುಡಾ ಹಗರಣದ ಪಾದಯಾತ್ರೆ ರೀತಿಯಲ್ಲಿ ಇನ್ನು ಹೆಚ್ಚು ಪ್ರಭಾವಿಯಾಗಿ ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಅಂತಿಮ ಸಲಹೆಗಳು ಸಂಜೆ ವೇಳೆಗೆ ಸಿದ್ಧವಾಗಬಹುದು” ಎಂದು ತಿಳಿಸಿದರು.

ಹೈಕಮಾಂಡ್ ಗಮನಕ್ಕೆ ತಂದು ಸಭೆ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಪಕ್ಷದ ಹಿರಿಯ ನಾಯಕ, ಹಾಗಾಗಿ ಪಕ್ಷದ ಪದ್ದತಿ ಗೊತ್ತಿದೆ. ಆ ಪದ್ಧತಿ ಅನುಸಾರ ಸಭೆ ಮಾಡುತ್ತಿದ್ದೇವೆ. ಸಭೆಯಲ್ಲಿ 12 ಜನ ಸೇರಿದ್ದೇವೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!