Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಾವಲಂಬನೆ ಜೀವನ ನಡೆಸಲು ಕೌಶಲ್ಯ ಅಗತ್ಯ- ಮಂಗಲ ಯೋಗೀಶ್

ಸ್ವಾವಲಂಬನೆ ಜೀವನ ನಡೆಸಲು ಗ್ರಾಮೀಣ ಮಹಿಳೆಯರು ಕೌಶಲ್ಯ ಹೊಂದಬೇಕಾಗಿದೆ ಎಂದು ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ತಿಳಿಸಿದರು.

ಮಂಡ್ಯ  ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳ ನಿಗಮದ ವತಿಯಿಂದ ಎಂಎಸ್‌ಎಂಇ ಅಭಿವೃದ್ಧಿ ಕಚೇರಿ ಮತ್ತು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ನಡೆದ 6 ವಾರಗಳ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತರಬೇತಿ ಶಿಬಿರಗಳು ಹಳ್ಳಿಗಳಲ್ಲೇ ಬಂದು ನೀಡುವಂತಹ ಸಂದರ್ಭದಲ್ಲಿ ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕಿದೆ. ಪ್ರಸ್ತುತ ದಿನಗಳಲ್ಲಿ ನಗರ ಮತ್ತು ಪಟ್ಟಣಗಳಿಗೆ ಹೋಗಿ ತರಬೇತಿ ಪಡೆದು ಕೌಶಲ್ಯ ಜ್ಞಾನವನ್ನು ಹೊಂದಲು ಮುಂದಾಗುತ್ತಿದ್ದಾರೆ. ನಮ್ಮ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕಾರ‌್ಯಕ್ರಮಗಳನ್ನು ಗ್ರಾಮೀಣ ಪ್ರದೇಶಕ್ಕೆ ತಂದು ಅಲ್ಲಿನ ಅಸಂಘಟಿತವಾಗಿರುವ ಮಹಿಳೆಯರಿಗೆ ಕೌಶಲ್ಯ ಜ್ಞಾನವನ್ನು ಬೆಳೆಸಲು ಮುಂದಾಗಿದೆ. ಯಾರೂ ಸಹ ಮಹಿಳೆಯರು ನಿರ್ಲಕ್ಷ್ಯ ಮಾಡದೆ ಬೆಳಗ್ಗೆಯಿಂದ ಸಂಜೆಯವರೆಗೆ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಜ್ಞಾನದ ಅರಿವು ಹೆಚ್ಚಾಗಬೇಕಾಗಿದೆ. ಸಾಮಾಜಿಕ ಜಾಲತಾಣಗಳು, ಅದರಲ್ಲೂ ಮೊಬೈಲ್‌ಗಳಿಂದ ಮಹಿಳೆಯರು ಮತ್ತು ಮಕ್ಕಳು ತುಂಬಾ ಕೆಟ್ಟ ಆಲೋಚನೆಗಳನ್ನು ಹೊಂದುವ ಸ್ಥಿತಿಗೆ ಬಂದಿದೆ. ಸೈಬರ್ ಠಾಣೆಗಳಲ್ಲಿ ಈಗಾಗಲೇ ಹೆಚ್ಚು ದೂರುಗಳು ದಾಖಲಾಗಿದ್ದು, ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ದೂರುಗಳೇ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಉಪ ಕಸುಬುಗಳಾದ ಕಸೂತಿ, ಎಂಬ್ರಾಡಯಿರಿ ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಗ್ರಾಮೀಣ ಮಹಿಳೆಯರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ. ಅರುಣಕುಮಾರಿ ಮಾತನಾಡಿ, ಕಲಿಕೆಯ ವೇಳೆ ಭಾವನಾತ್ಮಕವಾಗಿ ಹಲವಾರು ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಮಾರುಕಟ್ಟೆ ಸಹಿತ ವಿವಿಧ ವಿಷಯ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ. ಮಹಿಳೆಯರಲ್ಲಿ ಸ್ವಸಹಾಯ ಸಂಘಗಳ ಬಲವರ್ಧನೆ ಕಾರ್ಯ ಹೇಗೆ ಸಾಗುತ್ತದೋ ಹಾಗೆಯೇ ಕೌಶಲ್ಯ ಅಭಿವೃದ್ಧಿ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದುವುದು ಅವಶ್ಯಕ. ಕೌಶಲ್ಯ ಸಾಕ್ಷರತಾ ಆಂದೋಲನವನ್ನು ಈ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲು ನಮ್ಮ ಸಂಸ್ಥೆ ಮುಂದಾಗಿದೆ ಎಂದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಗೋವಿಂದರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾದ ಎಂ.ಪಿ. ಅನ್ನಪೂರ್ಣ, ಜ್ಯೋತಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!