Friday, September 20, 2024

ಪ್ರಾಯೋಗಿಕ ಆವೃತ್ತಿ

ಗುರುವಿನಿಂದ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ : ಮೀರಾಶಿವಲಿಂಗಯ್ಯ

ಸಾಹಿತಿ ಸಿದ್ದಯ್ಯ ಪುರಾಣಿಕ ಅವರು ಗುರುಮಾತ್ರ, ಹಳಬರಿಗೆ ಹಳಬ, ಹೊಸಬರಿಗೆ ಹೊಸಬ ಎಂದು ಗುರುವಿನ ಮಹತ್ವದ ಬಗ್ಗೆ ಚಂದದ ಸಾಲುಗಳಲ್ಲಿ ತಿಳಿಸಿದ್ದಾರೆ, ಇವತ್ತಿಗೂ ಎಷ್ಟು ಪ್ರಸ್ತುತವಾಗಿದೆ, ಗುರುವು ಎಲ್ಲವನ್ನು ಕಲಿಸಿ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತಾರೆ ಎಂದು ಎಸ್.ಬಿ.ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಸ್ಮರಿಸಿದರು.

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಗ್ರಾಮಾಂತರ ಪ್ರೌಢಶಾಲೆಯ 1984-85 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಎಂದಿಗೂ ಗುರುಶಿಷ್ಯರ ನಡುವಿನ ಸಂಬಂಧ ಬದಲಾಗುವುದಿಲ್ಲ, ಗುರುಗಳು ಮತ್ತು ಗುರು ತಿಳಿಸಿದ ವಿಚಾರಗಳು ಅಮರ-ಅಜರಾಮರ. ಕಲಿತವರು ತಮ್ಮ ಮಕ್ಕಳಿಗೆ ಕಲಿಸುತ್ತಾರೆ, ಮಕ್ಕಳು ತಮ್ಮ ಪೀಳಿಗೆಗೆ ಕಲಿಸುತ್ತಾರೆ, ಉತ್ತಮ ನಡವಳಿಕೆ ನಮ್ಮ ಬದುಕಿಗೆ ನಾಂದಿಯಾಗುತ್ತದೆ ಎಂದರು.

ಭಾರತದಲ್ಲಿ ಗುರುಪರಂಪರೆಗೆ ತನ್ನದೆ ಆದ ಶ್ರದ್ಧೆ, ಭಕ್ತಿ, ಸಂಯಮವಿದೆ, ಗುರುಸ್ಥಾನಕ್ಕೆ ಗೌರವಿದೆ, ಗುರುಗಳನ್ನು ಸ್ಮರಿಸಿಕೊಳ್ಳುವುದಕ್ಕಾಗಿಯೇ ಅನೇಕರು ಅಪಾರ ಕೊಡುಗೆ ನೀಡಿದ್ದಾರೆ, ಸಮರ್ಪಿಸಿಕೊಂಡಿದ್ದಾರೆ, ಗುರುಗಳ ಸ್ಥಾನದಲ್ಲಿ ಸರ್ವಪಲ್ಲಿ ರಾಧಾಕೃಷ್ಣ, ಡಾ.ಬಿ.ಆರ್.ಅಂಬೇಡ್ಕರ್, ಅಬ್ದಲ್ ಕಲಾಂ, ಕುವೆಂಪು ಸೇರಿದಂತೆ ಅನೇಕರನ್ನು ಸ್ಮರಿಸಿಕೊಳ್ಳಬಹುದು ಎಂದರು.

ಇಂದಿನ ಡಿಜಿಟಲ್ ಯುಗದ ಓದಿನಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ, ಶಿಕ್ಷಕರು, ವಿದ್ಯಾರ್ಥಿಗಳು ಆಧುನಿಕವಾಗಿಯೇ ಕಲಿಗೆಗೆ ಒಗ್ಗಿಕೊಳ್ಳುತ್ತಿದ್ದಾರೆ, ಉದಾಹರಣೆಗೆ ಗೂಗಲ್‌ನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವಿದ್ದರೆ, ಅದಕ್ಕೆ, ನಮ್ಮ ಆಸಕ್ತಿ ತಿಳಿದು ಮುಂದೆ ನಮ್ಮ ಆಸಕ್ತಿಗೆ ತಕ್ಕಂತೆ ಪುಸ್ತಕಗಳನ್ನು ಓದುವಂತೆ ಸಲಹೆ ನೀಡುತ್ತದೆ, ಅಷ್ಟರ ಮಟ್ಟಿಗೆ ತಂತ್ರಜ್ಞಾನ ಅಭಿವೃದ್ದಿ ಹೊಂದಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿರುವ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಜಮಾವಣೆಗೊಂಡ ಗಣ್ಯರು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಮಂಗಳವಾದ್ಯ-ಪುಷ್ಪವೃಷ್ಠಿಯೊಂದಿಗೆ ಪ್ರಮುಖರಸ್ತೆಯಲ್ಲಿ ಮೆರವಣಿಗೆ ನಡೆಸಿ, ವೇದಿಕೆಗೆ ಕರೆತರಲಾಯಿತು.

ಗುರುವಂದನೆಗೆ ಭಾಜನಾದ ನಿವೃತ್ತ ಶಿಕ್ಷಕರಾದ ಕೆ.ಬಿ.ತಿಮ್ಮಯ್ಯ, ಕೆ.ಕೆಂಗೇಗೌಡ, ರಾ.ನಾ.ನ ಮೂರ್ತಿ, ಆರ್.ರಂಗಸ್ವಾಮಿ, ಪಿ.ಎಲ್. ಕೃಷ್ಣೇಗೌಡ, ಕೆ.ಎಂ.ಶಿವಣ್ಣ, ಡಿ.ಶಿವಲಿಂಗಯ್ಯ, ಕಚೇರಿ ಸಹಾಯಕ ಕೆ.ಎಸ್.ಗೋವಿಂದಶೆಟ್ಟಿ,  ವಿಶೇಷ ಸನ್ಮಾನಿತರಾದ ಸಾರಿಗೆ ಬಸ್ ಚಾಲಕ ಎಸ್.ರಾಜೇಶ್ ಅವರನ್ನು ಅಭಿನಂದಿಸಿ ಗೌರವಿಸಿದರು.

ಹಿರಿಯ ಮಹಿಳಾ ವಿದ್ಯಾರ್ಥಿನಿಯರು ಅಭಿನಂಧಿಸಿ ಗುರುಗಳ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಸ್ನೇಹಕೂಟದಿಂದ ಭಾರಿ ಬೋಜನಕೂಟ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮರಿಲಿಂಗನದೊಡ್ಡಿ ಸಿದ್ದಲಿಂಗೇಶ್ವರ ಆಶ್ರಮದ ಶಿವಾನಂದಪುರಿ ಸ್ವಾಮೀಜಿ, ಕೆರಗೋಡು ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್.ಕೃಷ್ಣ, ಮನ್ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಪ್ರಾಂಶುಪಾಲರಾದ ಎಸ್.ಕೆ.ಮಂಜುನಾಥ್, ಕೆ.ಸಿ.ರಾಮಲಿಂಗು, ಹಿರಿಯ ಸಹ ಶಿಕ್ಷಕ ಬಿ.ಎಂ.ಸಿದ್ದರಾಜು, ಕಾರ್ಯಕ್ರಮ ಆಯೋಜಕ ಹಿರಿಯ ವಿದ್ಯಾರ್ಥಿ ಯೋಗೇಶ್ ಮತ್ತು ತಂಡ ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!