Thursday, July 25, 2024

ಪ್ರಾಯೋಗಿಕ ಆವೃತ್ತಿ

ರೈತರ ಹತ್ಯೆ ನಡೆಸಿದವರಿಗೆ ಕೃಷಿ ಖಾತೆಯ ಮಂತ್ರಿಗಿರಿ: ರೈತ ಸಂಘಟನೆಗಳ ಪ್ರತಿಭಟನೆ

ಕೃಷಿ ಮತ್ತು ರೈತ ಕಲ್ಯಾಣ ಖಾತೆಯನ್ನು ರೈತರ ನರಮೇಧ ನಡೆಸಿದ ಆರೋಪ ಹೊತ್ತಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಹಂಚಿಕೆ ಮಾಡಿರುವುದನ್ನು ಖಂಡಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ) ಬುಧವಾರ ಪ್ರತಿಭಟಿಸಿದ್ದು, ಜೂನ್‌ 2017ರಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಡೆದ 6 ರೈತರ ಹತ್ಯೆಗೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಹೊಣೆಗಾರರು ಎಂದು ಕಿಡಿಕಾರಿದೆ.

ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ, ಸಾಲ ಮನ್ನಾ ಹಾಗೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ವಿರುದ್ಧ ನಡೆದ ಬೃಹತ್ ಹೋರಾಟದ ಸಂದರ್ಭದಲ್ಲಿ ರೈತರನ್ನು ಹತ್ಯೆ ಮಾಡಲಾಗಿದೆ ಎಂದು ಎಸ್‌ಕೆಎಂ ಆರೋಪಿಸಿದೆ. ಎಸ್‌ಕೆಎಂ ತನ್ನ ಸಾಮಾನ್ಯ ಸಭೆಯನ್ನು ಜುಲೈ 10ರಂದು ದೆಹಲಿಯಲ್ಲಿ ನಡೆಸುವುದಾಗಿ ತೀರ್ಮಾನಿಸಿದ್ದು, ಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳ ರೈತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

2014 ಮತ್ತು 2019ರಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರಕಾರ ನಡೆಸಿದಾಗ ದುರಹಂಕಾರ ಮತ್ತುಉದ್ದಟತನ ಪ್ರದರ್ಶಿಸಿದೆ. ಇದು ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಜನರಲ್ಲಿ ಕೋಪವನ್ನು ಹುಟ್ಟುಹಾಕಿದೆ ಎಂದು ಎಸ್‌ಕೆಎಂ ಹೇಳಿದೆ.

ಜೂನ್ 2017ರಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ರೈತರ ಗುಂಪಿನ ಮೇಲೆ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಗುಂಡು ಹಾರಿಸಿದ ನಂತರ ಆರು ರೈತರು ಸಾವನ್ನಪ್ಪಿದ್ದರು.

ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಕೆಎಂ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತೀವ್ರವಾದ ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಯನ್ನು ಪರಿಹರಿಸಲು ಎನ್‌ಡಿಎ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದು, ಎಂಎಸ್‌ಪಿ ವಿಚಾರದಲ್ಲಿನ ಬಹುಕಾಲದ ಬೇಡಿಕೆಗಳನ್ನು ಪುನರುಚ್ಚರಿಸಿದೆ.

ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ 20,000 ಕೋಟಿ ರೂಪಾಯಿ ಬಾಕಿ ಬಿಡುಗಡೆ ಹೆಸರಿನಲ್ಲಿ ಮಾಡುತ್ತಿರುವ ಪ್ರಚಾರವು ರೈತರ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 500 ರೂಪಾಯಿಗಳ ಅಸಮರ್ಪಕ ಮೊತ್ತವನ್ನು ನೀಡುವ ಅಸ್ತಿತ್ವದಲ್ಲಿರುವ ಯೋಜನೆಯಾಗಿದ್ದು ಅದು ರೈತರನ್ನು ತೃಪ್ತಿಪಡಿಸುವುದಿಲ್ಲ ಎಂದು ಎಸ್‌ಕೆಎಂ ಹೇಳಿಕೊಂಡಿದೆ.

ಕೃಷಿಯ ಕಾರ್ಪೊರೇಟ್ ನೀತಿಗಳಲ್ಲಿ ಬದಲಾವಣೆಯ ಭ್ರಮೆ ರೈತರಲ್ಲಿ ಇಲ್ಲ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಉತ್ಪಾದಕರೊಂದಿಗೆ ಕೈಜೋಡಿಸಿ ಭಾರತದಾದ್ಯಂತ ವಿಸ್ತರಿಸುವ ಮೂಲಕ ಮತ್ತೊಂದು ರೋಮಾಂಚಕ ಮತ್ತು ಬೃಹತ್ ಹೋರಾಟಗಳಿಗೆ ಸಿದ್ಧರಾಗಬೇಕು. ಕಾರ್ಪೊರೇಟ್ ಚಾಲಿತ ನೀತಿಗಳನ್ನು ಬದಲಿಸಲು NDA ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ಮುಂದಿನ ನಡೆಯನ್ನು ಜುಲೈ 10ರ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಎಸ್‌ಕೆಎಂ ಹೇಳಿದೆ.

ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರನ್ನು ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ ಘಟನೆ ಕುರಿತು ಪ್ರತಿಕ್ರಿಯಿಸಿದ ಎಸ್‌ಕೆಎಂ, ಮಹಿಳಾ ಭದ್ರತಾ ಸಿಬ್ಬಂದಿ ಕಂಗನಾ ರಣಾವತ್ ಸಂಸದರಿಗೆ ಕಪಾಳಮೋಕ್ಷ ಮಾಡಿರುವುದನ್ನು ಸಮರ್ಥಿಸದೆ, ಐತಿಹಾಸಿಕ ರೈತರ ಹೋರಾಟದ ವಿರುದ್ಧ ಆಕೆಯ ದುರಹಂಕಾರದ ಮತ್ತು ದುರುದ್ದೇಶಪೂರಿತ ಮಾತುಗಳನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!