Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯ ಗುಣಗಾನ : ಕಮಲಕ್ಕೆ ಕೈ ಕೊಡ್ತಾರಾ ನಾರಾಯಣಗೌಡ ?

ಬಿಜೆಪಿ ಪಕ್ಷದ ಸಣ್ಣ ಪುಟ್ಟ ನಾಯಕರಿಂದ ಹಿಡಿದು ದೊಡ್ಡ ಮಟ್ಟದ ನಾಯಕರವರೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೈದು ಕೊಂಡು ತಿರುಗುತ್ತಿರುವಾಗ ಸಚಿವ ಕೆ.ಸಿ‌.ನಾರಾಯಣಗೌಡ ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದರೆ,ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕ್ರೀಡಾ ಸಚಿವ ನಾರಾಯಣಗೌಡ ಮಾಡಿದ ಸಿದ್ದರಾಮಯ್ಯ ಗುಣಗಾನ, ಅವರು ಮುಂಬರುವ ಚುನಾವಣೆ ವೇಳೆಗೆ ಕಮಲಕ್ಕೆ ಕೈ ಕೊಟ್ಟು ಹಸ್ತ ಹಿಡಿಯಲಿದ್ದಾರೆ ಎನ್ನುವ ಮಾತಿಗೆ ಪುಷ್ಟಿ ನೀಡಿದೆ‌.

ಜ.29ರಂದು ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಲೋಕಾರ್ಪಣೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಒಂದಾನೊಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಸಮ್ಮುಖದಲ್ಲಿ ಸಿದ್ದರಾಮಯ್ಯ ಅವರನ್ನು ಸಚಿವ ನಾರಾಯಣಗೌಡ ಎರ್ರಾ ಬಿರ್ರಿ ಹೊಗಳಿದ್ದಾರೆ.

ಸಿದ್ದರಾಮಯ್ಯ ಗಣ್ಯ ವ್ಯಕ್ತಿ

ನನಗೆ ಸಿದ್ದರಾಮಯ್ಯ ಅವರ ಮೇಲೆ ಬಹಳ ಗೌರವ ಇದೆ. ಅವರು ದೇಶದ ಒಬ್ಬ ಗಣ್ಯ ವ್ಯಕ್ತಿ. ಕೆ.ಆರ್.ಪೇಟೆ ತಾಲೂಕಿಗೆ ಹೆಚ್ಚಿನ ಕೆಲಸ ಮಾಡಿಕೊಟ್ಟಿದ್ದಾರೆ. ನಾನು ಶಾಸಕನಾಗಿದ್ದಾಗ ತಾಲೂಕಿಗೆ 6 ಮೊರಾರ್ಜಿ ಶಾಲೆ ಕೊಟ್ಟರು. 40 ಕೋಟಿ ರೂ ಅನುದಾನ ಕೊಟ್ಟು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಅನುಮತಿ ನೀಡಿದ್ದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಇರುವ ವೇದಿಕೆಯಲ್ಲೆ ಸಿದ್ದರಾಮಯ್ಯ ಅವರನ್ನು ಹೊಗಳಿದ ಸಚಿವ ನಾರಾಯಣಗೌಡ

ಇಡೀ ರಾಜ್ಯದಲ್ಲಿ ಎರಡು ಕಡೇ ಮಾತ್ರ ಈ ಶಾಲೆ ಇದೆ.ಅದರಲ್ಲಿ ಕೆ.ಆರ್.ಪೇಟೆ ಒಂದು ಅವರ ಬಗ್ಗೆ ಗೌರವವಿದೆ, ಟೀಕೆ ಟಿಪ್ಪಣಿ ಮಾಡಲ್ಲ. ನಾವಿರುವ ಪಕ್ಷದಲ್ಲಿ ಮತ ಕೇಳುವುದು ನಮ್ಮ ಧರ್ಮ ಕೇಳುತ್ತೇವೆ ಎಂದು ಬಣ್ಣಿಸಿದ್ದಾರೆ. ಸಚಿವ ನಾರಾಯಣಗೌಡ ತಮ್ಮದೇ ಪಕ್ಷದ ಮತ್ತೊಬ್ಬ ಸಚಿವ ಭೈರತಿ ಬಸವರಾಜು ಸಮಕ್ಷಮದಲ್ಲಿ ಸಿದ್ದರಾಮಯ್ಯ ಅವರಿಗೆ ಬಹುಪರಾಕ್ ಹಾಕಿರುವುದು ಬಿಜೆಪಿ ನಾಯಕರಿಗೆ ಉರಿ ಹತ್ತಿಸಿದ್ದರೆ, ಅತ್ತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಿ.ಫಾರಂ ಆಕಾಂಕ್ಷಿತರಿಗೆ ಆತಂಕ ತಂದಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಸಣ್ಣ ಪುಟ್ಟ ಬಿಜೆಪಿ ಲೀಡರ್ ಗಳು ಸಿದ್ದರಾಮಯ್ಯ ಅವರನ್ನು ಬಾಯಿಗೆ ಬಂದಂತೆ ತೆಗಳುತ್ತಿರುವಾಗ ಸಚಿವ ನಾರಾಯಣಗೌಡರ ಈ ಹೊಗಳಿಕೆ ಮಾತುಗಳು ಬಿಜೆಪಿಗೆ ಇರಿಸು ಮುರಿಸು ತರಿಸಿರುವುದಲ್ಲದೆ,  ರಾಜಕೀಯ ಮೊಗಸಾಲೆಯಲ್ಲಿ ಪಕ್ಷಾಂತರದ ಚರ್ಚೆಯನ್ನು ಹುಟ್ಟು ಹಾಕಿದೆ.ಅಲ್ಲದೆ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಇರುವಾಗ ಸಚಿವರ ಹೊಗಳಿಕೆ ಮಾತು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹಿಂದೆಯೂ ಕೇಳಿಬಂದಿತ್ತು

ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆನ್ನುವ ವಿಚಾರ ಕೇಳಿಬರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಕೇಳಿ ಬಂದಿತ್ತು. ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೂಕವಳ್ಳಿ ಮಂಜು ಅವರ ಬದಲು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರ ಗೆಲುವಿಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ಸಚಿವರ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಮತ ಬಂದಿರಲಿಲ್ಲ.ಈ ಕಾರಣದಿಂದಲೇ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆರವುಗೊಳಿಸಿ ಶಿವಮೊಗ್ಗ ಉಸ್ತುವಾರಿ ನೀಡಲಾಯಿತು ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿ ಬಂದಿತ್ತು.

ಕುಮಾರಸ್ವಾಮಿ ಬಗ್ಗೆ ಟೀಕೆ

ಇನ್ನು ನಾರಾಯಣಗೌಡ ಕಾಂಗ್ರೆಸ್ ಬಗ್ಗೆ ಅಥವಾ ಆ ಪಕ್ಷದ ನಾಯಕರ ಬಗ್ಗೆ ಟೀಕಿಸಲ್ಲ. ಆದರೆ ಜೆಡಿಎಸ್ ವಿರುದ್ಧ ಅದರಲ್ಲೂ ಕುಮಾರಸ್ವಾಮಿ ಕಟು ಟೀಕೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸಚಿವರಾದರೂ ಕೆ.ಆರ್.ಪೇಟೆಗಷ್ಟೇ ಸೀಮಿತವಾದ ಅವರು ಜಿಲ್ಲೆಯ ಇತರೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿಸುವ ಬಗ್ಗೆ ಅಷ್ಟೇನೂ ಆಸಕ್ತಿ ತೋರುತ್ತಿಲ್ಲ.

ಕೈ ಆಕಾಂಕ್ಷಿಗಳಿಗೆ ಆತಂಕ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಾರಾಯಣಗೌಡರ ಮೆಚ್ಚುಗೆ ಮಾತುಗಳು ಕೆ.ಆರ್.ಪೇಟೆ ಕಾಂಗ್ರೆಸ್‌ನ ಬಿ ಫಾರಂ ಆಕಾಂಕ್ಷಿತರಿಗೆ ಆತಂಕಕ್ಕೆ ಕಾರಣವಾಗಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ವಿಜಯ್ ರಾಮೇಗೌಡ ಸೇರಿದಂತೆ ಇನ್ನಿತರ ಆಕಾಂಕ್ಷಿಗಳಾದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕೃಷ್ಣಮೂರ್ತಿ, ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್ ಅವರಲ್ಲಿ ತಳಮಳ ಉಂಟು ಮಾಡಿದೆ.

ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದಾಗ, ಕೆಲ ದಿನಗಳ ಹಿಂದೆಯಷ್ಟೇ ಕೆ.ಆರ್.ಪೇಟೆಯಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಆರು ಮಂದಿ ಆಕಾಂಕ್ಷಿಗಳಲ್ಲಿ ಯಾರಿಗೆ ಅವಕಾಶ ಕೊಟ್ಟರೂ ಒಮ್ಮತದಿಂದ ಚುನಾವಣೆ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ  ಕೆ.ಸಿ. ನಾರಾಯಣಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ವರಿಷ್ಠರಿಗೆ ಆಗ್ರಹಿಸಿದ್ದರು. ಹಾಗಿದ್ದರೂ ನಾರಾಯಣಗೌಡ ಸಿದ್ದರಾಮಯ್ಯ ಹೊಗಳಿರುವುದು ಆಕಾಂಕ್ಷಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.ಏನೇ ಆಗಲಿ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ನಾವು ಒಪ್ಪಲ್ಲ ಎಂದು ಆರು ಮಂದಿ ಆಕಾಂಕ್ಷಿಗಳು ಸ್ಪಷ್ಟವಾಗಿ ಹೇಳಿರುವುದರಿಂದ ಏನಾಗುವುದೋ ಎಂಬ ಕುತೂಹಲವಂತೂ ಜನರಲ್ಲಿದೆ‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!