Saturday, May 18, 2024

ಪ್ರಾಯೋಗಿಕ ಆವೃತ್ತಿ

ದುಷ್ಟರ ರೀತಿ ನಡೆದುಕೊಂಡಿದ್ದು ಯಾರೆಂದು ಜನತೆಗೆ ಗೊತ್ತಿದೆ: ನರೇಂದ್ರಸ್ವಾಮಿ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ನನ್ನನ್ನು ಟೀಕಿಸುವ ಭರಲ್ಲಿ ದುಷ್ಟ ಶಾಸಕ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಯಾರ ಹೆಸರು ಕೇಳಿ ಬರುತ್ತಿತ್ತು ? ಯಾರು ದುಷ್ಟರ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದು ಜಿಲ್ಲೆಯ ಜನರಿಗೆ ತಿಳಿದಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿರುಗೇಟು ನೀಡಿದರು.

2008ರಲ್ಲಿ ನಾನು ಪಕ್ಷೇತರ ಶಾಸಕನಾಗಿ ಗೆಲ್ಲುವ ಮೂಲಕ ಮಳವಳ್ಳಿ ಕ್ಷೇತ್ರದಲ್ಲಿ ನಿಜವಾದ ಕಾಂಗ್ರೆಸ್ ಏನು ಎಂಬುದನ್ನು ಸಾಭೀತುಪಡಿಸಿದ್ದೆ. ಅದರಂತೆ ಯಡಿಯೂರಪ್ಪ ಅವರು ಬೆಂಬಲ ಕೋರಿದಾಗ 9 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದೆವು. ಆದರೆ, ನೀವು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಯಡಿಯೂರಪ್ಪ ಸರ್ಕಾರ ಕಿತ್ತು ಹಾಕಲು ಏನೇನು ಮಾಡಿದಿರಿ ಎಂಬುದನ್ನು ಮರೆತ್ತಿದ್ದೀರಾ? ಎಂದು ಯಡಿಯೂರಪ್ಪ ಸರ್ಕಾರ ಬೀಳಲು ಕಾರಣರಾದವರ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

ಎಲ್ಲೆಲ್ಲಿ ಸಭೆ ಮಾಡಿದಿರಿ

ನನ್ನ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿರುವ ನಿಮ್ಮನ್ನು ಪುಟ್ಟರಾಜು ಅಲ್ಲ, ಮಹಾ ದೊಡ್ಡರಾಜು ಎಂದು ಕರೆಯಬೇಕು. ಯಡಿಯೂರಪ್ಪ ಸರ್ಕಾರ ಬೀಳಿಸಲು ನೀವು ಎಲ್ಲೆಲ್ಲಿ ಸಭೆ ಮಾಡಿದಿರಿ. ಪ್ರಚೋದನೆ ಮಾಡಿದಿರಿ. ನಿಮ್ಮ ಪಕ್ಷದ ಮುಖಂಡರು ಗೋವಾ, ಬಾಂಬೆ, ಚೆನ್ನೈ, ಕೇರಳಕ್ಕೆ ಕರೆದುಕೊಂಡು ಹೋಗಿ ನಂತರ ಈಗಲ್ಟನ್ ರೆಸಾರ್ಟ್ ಗೆ ಕರೆದುಕೊಂಡು ಬಂದರು. ನಮ್ಮನ್ನು ಕರೆದುಕೊಂಡು ಬಂದ ಪುಟ್ಟಣ್ಣನವರು ಚೆನ್ನೈನಲ್ಲಿ 9 ಮಂದಿ ಸಚಿವರ ರಾಜೀನಾಮೆ ಪಡೆದು ರಾಜ್ಯಪಾಲರಿಗೆ ನೀಡಿದ್ದೆವು. ನಾನು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಎಚ್ಚರಿಸಿದರು.

ನೀವು ನನ್ನೊಬ್ಬನ ಮನೆ ಹಾಳು ಮಾಡಿದ್ದಲ್ಲ, 9 ಮಂದಿ ಸಚಿವರು ರಾಜೀನಾಮೆ ನೀಡಲು ಯಾರು ಕಾರಣ. ಸ್ವಂತ ಶಕ್ತಿಯಿಂದ ವೈಯಕ್ತಿಕವಾಗಿ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದೆವು. ಆದರೆ, ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರ ಮಾಡುತ್ತೇವೆ ಎಂದು ಆಮಿಷವೊಡ್ಡಿದವರು ಯಾರು?, 21 ಮಂದಿ ಶಾಸಕರನ್ನು ಒಗ್ಗೂಡಿಸಿ ಕೊನೆಗೆ 17 ಮಂದಿ ಶಾಸಕರು ಅನೂರ್ಜಿತರಾಗಲು ಕಾರಣ ಯಾರು ಎಂಬುದನ್ನು ನೀವೇ ಹೇಳಬೇಕು ಎಂದು ಮರುಪ್ರಶ್ನೆ ಹಾಕಿದರು.

ರಂಪಾಟಕ್ಕೆ ಕಾರಣರಾದವರೇ ಎಚ್.ಡಿ.ಕುಮಾರಸ್ವಾಮಿ

ಶಾಸಕ ಸ್ಥಾನ ಕಳೆದುಕೊಂಡು ಕಣ್ಣೀರು ಹಾಕುವಾಗ ದೇವೇಗೌಡರು ಕಾಪಾಡಿದರು ಎಂದು ಹೇಳುತ್ತೀರಿ. ಅದಕ್ಕೆ ಕಾರಣ ಯಾರು ಹಾಗೂ ಅದರ ಹಿಂದಿನ ಕಹಿ ಸತ್ಯವನ್ನು ಬಾಯಿ ಬಿಟ್ಟರೆ ಮಹಾನಾಯಕನಿಗೆ ಚ್ಯುತಿ ಬರುತ್ತದೆ ಎಂದು ಮುಚ್ಚಿಟ್ಟು ಮಾತನಾಡುತ್ತಿದ್ದೇನೆ. ನಿಮಗೆ ಎಚ್ಚರಿಕೆ ಇರಲಿ, ನಮ್ಮ ಇಷ್ಟು ಜನರ ರಂಪಾಟಕ್ಕೆ ಕಾರಣರಾದವರೇ ಎಚ್.ಡಿ.ಕುಮಾರಸ್ವಾಮಿ ಎಂಬುದನ್ನು ನೀವು ಮರೆಯಬೇಡಿ. ಯಾಕೆ ಈ ರೀತಿ ತೊಂದರೆ ಕೊಡುತ್ತೀರಿ. ನಿಮಗೆ ಎಲ್ಲರೂ ವಿರೋಧಿಗಳೇ, ಅವರು ಬದುಕಿದ್ದಾಗ ಯಾವ ರೀತಿ ತೊಂದರೆ ಕಿರುಕುಳ ನೀಡಿದಿರಿ. ಅವರ ಮನೆಗೆ ಹೋಗಿದ್ದೀರಿ?. ಈಗ ಅವರು ಸತ್ತ ಮೇಲೆ ಅವರ ಸಮಾಧಿಗೆ ಹೋಗಿ ನಮನ ಅರ್ಪಿಸುತ್ತಿದ್ದೀರಾ? ಎಂದು ಟೀಕಿಸಿದರು.

ನೀವೆಷ್ಟು ಬೆಂಬಲ ನೀಡಿದ್ದೀರಿ

ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಯಾರು ಕಾರಣ? ಆ ಚುನಾವಣೆಯಲ್ಲಿ ನೀವೆಷ್ಟು ಬೆಂಬಲ ನೀಡಿದ್ದೀರಿ. ಈಗ ಕುಮಾರಸ್ವಾಮಿ ಅವರಿಗೂ ನೀವು ಅದೇ ರೀತಿ ಮಾಡುತ್ತಿದ್ದೀರಾ? ಚುನಾವಣೆ ಭಾಷಣಕ್ಕೊಸ್ಕರ ಒಬ್ಬರನ್ನು ಹೀಯಾಳಿಸುವುದನ್ನು ಬಿಡಬೇಕು. ನಾವು ಇದಕ್ಕೆಲ್ಲ ಅಂಜುವುದಿಲ್ಲ. ಅಳುಕುವುದಿಲ್ಲ. ನಾನು ನಮ್ಮ ರಾಜಕಾರಣ ಮಾಡುತ್ತೀದ್ದೇವೆ. ಗಣಿಗಾರಿಕೆ ವಿಚಾರದಲ್ಲಿ ನಿಮ್ಮ ಬಗ್ಗೆ ಮಾತನಾಡಿದವರ ಜೊತೆಯೇ ಸಖ್ಯ ಬೆಳೆಸಿದ್ದೀರಾ? ಆಗ ಅವರೇ ದುಷ್ಟ ಶಾಸಕರು ಯಾರು ಎಂಬುದನ್ನು ಮಾತನಾಡಿದ್ದಾರೆ. ಇದು ಜನರಿಗೆ ಗೊತ್ತಿದೆ. ನೀವು ಸಣ್ಣ ನೀರಾವರಿ ಸಚಿವರಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ನೀವು ಪಾಂಡವಪುರಕ್ಕೆ ತೆಗೆದುಕೊಂಡು ಹೋಗಲಿಲ್ಲವೇ? ನೀವು ಜಿಲ್ಲಾ ಮಂತ್ರಿಯಾಗಿ ಮಾಡಿದ ಸಾಧನೆ ಇದೇ ಅಲ್ಲವೆ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ಸುರೇಶ್‌ ಕಂಠಿ, ಸಿದ್ದರಾಜು, ಸ್ವಾಮಿ, ನಾಗೇಶ್, ಲಿಂಗದೇವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!