Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಜನತಾದರ್ಶನಕ್ಕೆ ಹರಿದು ಬಂದ ಜನಸಾಗರ| 3,500 ಅರ್ಜಿಗಳನ್ನು ಸ್ವೀಕರಿಸಿದ ಸಿದ್ದರಾಮಯ್ಯ ನೀಡಿದ ಕಡಕ್ ಸೂಚನೆ ಏನು ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಇಂದು ನಡೆಸಿದ ಜನತಾ ದರ್ಶನಕ್ಕೆ ನಾಡಿನ ವಿವಿಧ ಭಾಗಗಳಿಂದ ಭಾರೀ ಜನಸ್ತೋಮವೇ ಹರಿದು ಬಂದಿತ್ತು. ಅವರು ಮೂರೂವರೆ ಸಾವಿರ ಅರ್ಜಿ ಸ್ವೀಕರಿಸಿದರು. ಅವುಗಳನ್ನು ಪರಿಶೀಲಿಸಿ, ಕಾನೂನು ರೀತ್ಯ ಪರಿಹಾರ ನೀಡಬೇಕು. ಸಾಧ್ಯವಾಗದಿದ್ದರೆ ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ನನ್ನ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆಯಿಂದ ನಡೆದ ಜನತಾ ದರ್ಶನದಲ್ಲಿ ಪಾಲ್ಗೊಂಡು, ಜನರ ಅಹವಾಲುಗಳನ್ನು ಆಲಿಸಿ, ಮಾತನಾಡಿದರು. ಇಂದು ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ, ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಇದನ್ನು ಸಹಿಸುವುದಿಲ್ಲ ಸಿಎಂ ಸಿದ್ದರಾಮಯ್ಯ ವರದಿ ಸಲ್ಲಿಸದ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ

ಜನತಾ ಸ್ಪಂದನ- ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗೋದಿಲ್ಲ, ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ. ಇಂದು ಬಂದ ಅರ್ಜಿಗಳಲ್ಲಿ ಬಹುತೇಕವಾಗಿ ಕಂದಾಯ, ಪೊಲೀಸ್‌ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ, ವಸತಿ ಕೊಡಿ, ಉದ್ಯೋಗ ಕೊಡಿಸಿ ಎಂಬ ಮನವಿಗಳು ಬಂದಿವೆ. ವಿಶೇಷವಾಗಿ ಅಂಗವಿಕಲರು ಉದ್ಯೋಗ ಕೊಡಿಸಿ, ತ್ರಿಚಕ್ರ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಾರೆ. 4,000 ತ್ರಿಚಕ್ರ ವಾಹನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೋಡಿ ಮಾಡಲು ನನ್ನ ಬಳಿ ಬರಬೇಕಾ?

ವಿಶೇಷವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಖಾತೆ, ಪಹಣಿ, ಪೋಡಿ ಮಾಡಲು ನನ್ನ ಬಳಿ ಬರಬೇಕಾ? ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಕೆಲಸ ಮಾಡಿದರೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್‌ ಠಾಣೆ, ಹಾಸ್ಟೆಲುಗಳು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆ ಬಗೆಹರಿಸಬೇಕು. ವಿಳಂಬ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕೂಡಲೇ ಜನರಿಗೆ ಸ್ಪಂದಿಸುವಂತಾಗಬೇಕು. ಕಾನೂನು ರೀತ್ಯ ಮಾಡಲು ಸಾಧ್ಯವಾಗದಿದ್ದರೆ, ಹಿಂಬರಹ ನೀಡಬೇಕು. ಇಂದು ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಹದಿನೈದು ದಿನದೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕು. ನಿಯಮಾವಳಿಗಳಡಿ ಅವಕಾಶವಿಲ್ಲದೆ ಇದ್ದರೆ, ಹಿಂಬರಹ ನೀಡಬೇಕು ಎಂದು ಸೂಚನೆ ನೀಡಿದರು.

ಕೆಳಹಂತದ ಅಧಿಕಾರಿಗಳಿಗೆ ನೀವು ಕೂಡಲೇ ಸ್ಪಂದಿಸಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ಜನತಾಸ್ಪಂದನ ಕಾರ್ಯಕ್ರಮ ಮಾಡುತ್ತೇನೆ. ಮುಂದಿನ ಬಾರಿ ಹೆಚ್ಚು ಜನ ಬಂದರೆ, ತಳಹಂತದ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಪರಿಗಣಿಸಲಾಗುವುದು ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!