ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಸುಗಮವಾಗಿ ನಡೆಯುವಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಅಧ್ಯಕ್ಷಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನದ ಕೊಠಡಿಗೆ ಮತದಾರರು ಹೊರತು ಪಡಿಸಿ ಅವರೊಂದಿಗೆ ಬರುವ ಬೇರೆ ವ್ಯಕ್ತಿಗಳಿಗೆ ಪ್ರವೇಶ ನೀಡುವಂತಿಲ್ಲ. ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಮತದಾನದ ಗೌಪ್ಯತೆಯನ್ನು ಕಾಪಾಡಿ ಎಂದರು.
ಜಿಲ್ಲೆಯ ಚುನಾವಣೆಯ ಮತಗಟ್ಟೆಯಲ್ಲಿ ಮುಕ್ತವಾಗಿ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಮತದಾನ ಕಾರ್ಯ ನಡೆಸುವಂತೆ ನೋಡಿಕೊಳ್ಳುವುದು ಪ್ರಿಸೈಡಿಂಗ್ ಆಫೀಸರ್ ರವರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ ಎಂದರು.
ಕರ್ನಾಟಕ ದಕ್ಷಿಣ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ 03,ನಾಗಮಂಗಲ 03, ಪಾಂಡವಪುರ 04, ,ಮಂಡ್ಯ 15, ಮದ್ದೂರು 10, ಶ್ರೀರಂಗಪಟ್ಟಣ 03, ಮಳವಳ್ಳಿ 07 ಒಟ್ಟು 45 ಮತಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕೆ.ಆರ್.ಪೇಟೆ-3326, ನಾಗಮಂಗಲ-2959 ಪಾಂಡವಪುರ- 3705,ಮಂಡ್ಯ 15925, ಮದ್ದೂರು – 10360, ಶ್ರೀರಂಗಪಟ್ಟಣ-3307, ಮಳವಳ್ಳಿ-7720 ಒಟ್ಟು 47,302 ಮತದಾರರು ಮಂಡ್ಯ ಜಿಲ್ಲೆಯಲ್ಲಿ ಇದ್ದಾರೆ ಎಂದರು.
ಚುನಾವಣೆಯ ಮಸ್ಟರಿಂಗ್ ಕೆಲಸಗಳು ಜೂನ್ 12 ರಂದು ಬೆಳಿಗ್ಗೆ 8 ಗಂಟೆಗೆ ಮಂಡ್ಯ ತಾಲ್ಲೂಕು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ತಾಲ್ಲೂಕು ಕಚೇರಿಯಲ್ಲಿ ನಡೆಯಲಿದೆ.
ಮಂಡ್ಯ ತಾಲ್ಲೂಕಿನಲ್ಲಿ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಮತದಾನವು ಜೂನ್ 13 ರಂದು ಬೆಳಿಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಅಧಿಕಾರಿ, ಹಾಗೂ ಮೂವರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ ವರ್, ಒಬ್ಬ ವಿಡಿಯೋಗ್ರಾಫರ್ ನೇಮಕ ಮಾಡಲಾಗಿದೆ.ಮತಗಟ್ಟೆಗಳಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.
ಚುನಾವಣಾ ತರಬೇತುದಾರ ಶ್ರೀನಿವಾಸ್ ಅವರು ಮಾತನಾಡಿ, ಮತದಾನ ದಿನದ ಹಿಂದಿನ ದಿನದಂದು ತಾಲ್ಲೂಕುವಾರು ಈಗಾಗಲೇ ನಿಗದಿಪಡಿಸಲಾದ ಮಸ್ಟರಿಂಗ್ ಸ್ಥಳಕ್ಕೆ ಅಧಿಕಾರಿಗಳು ನಿಗದಿತ ಸಮಯದಲ್ಲಿ ಹಾಜರಾಗಬೇಕು.
ಮತಗಟ್ಟೆಯಲ್ಲಿ ಬಳಸಲಾಗುವ ಮತಗಟ್ಟೆ ಸಾಮಗ್ರಿಗಳನ್ನು ತಂಡದ ಸದಸ್ಯರೊಂದಿಗೆ ಪಡೆದುಕೊಳ್ಳುವುದು, ಚೆಕ್ ಲಿಸ್ಟ್ ಪ್ರಕಾರ ಎಲ್ಲಾ ಮತ ಸಾಮಗ್ರಿಗಳು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.
ಕಾರ್ಯಗಾರದಲ್ಲಿ ಚುನಾವಣಾ ವೀಕ್ಷಕರಾದ ಪೊನ್ನುರಾಜು, ಜಿ.ಪಂ. ಸಿಇಓ ದಿವ್ಯಾಪ್ರಭು,ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ , ಎಲ್ಲಾ ತಾಲ್ಲೂಕಿನ ತಹಶೀಲ್ದಾರ್ ಗಳು,ಉಪವಿಭಾಗಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.