Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯನವರ ಆ ನೋಟವೂ, ಪೆರೋ-ಸೈಮನ್‌ರ ಚಿತ್ರಕಥನವೂ…

✍️ ಗಿರೀಶ್ ತಾಳಿಕಟ್ಟೆ

ಇದ್ಯಾವುದೂ ಕಾಕತಾಳೀಯವಲ್ಲ. ಮೂರ‍್ನಾಲ್ಕು ತಿಂಗಳ ಅಂತರದಲ್ಲಿ ಎಲೆಕ್ಷನ್ ಎದುರಿಟ್ಟುಕೊಂಡಿರುವ ಕರ್ನಾಟಕದಲ್ಲಿ ನಡೆಯುವ ‘ಪ್ರಮುಖ’ ಎನ್ನಿಸಬಹುದಾದ ಪ್ರತಿಯೊಂದು ವಿದ್ಯಮಾನದ ಹಿಂದೆ ಒಂದು ಸ್ಪಷ್ಟ ರಾಜಕೀಯ ತಂತ್ರಗಾರಿಕೆ ಇದ್ದೇ ಇರುತ್ತೆ. ಮೊನ್ನೆ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ನಾ ನಾಯಕಿ ಕಾರ್ಯಕ್ರಮದ ವೇದಿಕೆಯಲ್ಲಿ ನಿರೂಪಕಿಯನ್ನು ಸಿದ್ದರಾಮಯ್ಯನವರು ನೋಡುತ್ತಾ ಸಾಗಿದ ದೃಶ್ಯವೊಂದು ನಕಾರಾತ್ಮಕವಾಗಿ ಟ್ರೋಲ್ ಆದದ್ದು ಕೂಡಾ ಇದೇ ತಂತ್ರಗಾರಿಕೆಯ ಭಾಗವಾಗಿ. ಖುದ್ದು ಅಮಿತ್ ಶಾ ಅವರೇ ರಾಜ್ಯ ಬಿಜೆಪಿ ನಾಯಕರಿಗೆ “ನೀವು ಸಿದ್ದರಾಮಯ್ಯ ಒಬ್ಬರನ್ನು ನೋಡಿಕೊಳ್ಳಿ, ಮಿಕ್ಕಿದ್ದನ್ನು ನಾವು ನೋಡಿಕೊಳ್ತೀವಿ” ಅಂತ ತಾಕೀತು ಮಾಡಿರುವುದಾಗಿ ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇವತ್ತು ಬಿಜೆಪಿ ಅಂತಂದರೆ, ಕೇವಲ ಬಿಜೆಪಿಯಷ್ಟೇ ಅಲ್ಲ; ಮೀಡಿಯಾಗಳೂ ಬಿಜೆಪಿಯ ಭಾಗವೇ ಆಗಿರೋದ್ರಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಕಾರ್ಯಾಚರಣೆ ಅಧಿಕೃತವಾಗಿ ಶುರುವಾದಂತಿದೆ. ಇನ್ಮುಂದೆ ಇದಕ್ಕಿಂತಲೂ ಕೆಟ್ಟ ರೀತಿಯ ಟ್ರೋಲ್‌ಗಳೂ ಉತ್ಪತ್ತಿಯಾಗಬಹುದು, ಅಚ್ಚರಿಯಿಲ್ಲ.

ರಾಜಕಾರಣದ ಇಂತಹ ಕೀಳುತನಗಳನ್ನು ಹೊರಗಿಟ್ಟು ಸಿದ್ದರಾಮಯ್ಯನವರ ಆ ದೃಶ್ಯವನ್ನು ನೋಡಿದಾಗ, ಮೆಚ್ಚುಗೆ-ಕೌತುಕಗಳು ಹಾಗೂ ’ಓಹ್ ಈಕೆಯೇನಾ?’ ಅನ್ನೋ ಆತ್ಮೀಯತೆಗಳು ಸ್ಪಷ್ಟವಾಗಿ ಅವರ ಭಾವನೆಯಲ್ಲಿ ಗೋಚರಿಸುತ್ತವೆ; ಆರೋಗ್ಯವಂತ ಮನಸ್ಸುಗಳಿಗೆ ಮಾತ್ರ!

ಆ ಮಹಿಳಾ ನಿರೂಪಕಿ, ಟ್ರೋಲ್‌ನ ಕುರಿತು ಸ್ಪಷ್ಟನೆ ಕೊಡುವಾಗಲೂ ಇದೇ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿದುಹೋಗಬೇಕಿತ್ತು. ಆದರೆ ಇದು ಮುಗಿದು ಹೋಗುವಂತದ್ದಲ್ಲ! ಯಾಕೆಂದರೆ, ಆ ದೃಶ್ಯ ಇಟ್ಟುಕೊಂಡು ಯಾರೆಲ್ಲ ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೋ, ಅವರು ಟ್ರೋಲ್ ಮಾಡುತ್ತಿರೋದು ಸಿದ್ದರಾಮಯ್ಯನವರನ್ನಲ್ಲ, ಮಹಿಳೆಯರನ್ನು! ನಿಸರ್ಗದೊಳಗೆ ಪಾಲನೆಯ ರೂಪದಲ್ಲಿ ಅಡಗಿರುವ ಹೆಣ್ತನವನ್ನು!!

ಕಾಮಾಲೆ ಕಣ್ಣಿಗೆ ಜಗತ್ತೆಲ್ಲ ಹಳದಿ ಅನ್ನೋ ಗಾದೆ ಮಾತಿನಂತೆ, ತಮ್ಮೊಳಗೆ ಹೆಣ್ಣಿನ ಬಗ್ಗೆ ಕ್ಷುಲ್ಲಕ ಭಾವನೆ ಇರುವವರಿಗೆ; ಆಕೆ ಕೇವಲ ಭೋಗದ ವಸ್ತು ಅಷ್ಟೇ ಅನ್ನೋ ಸಣ್ಣತನ ಇರುವವರಿಗೆ ಮಾತ್ರ ಹೀಗೆ ಬೇರೆಯವರ ನೋಟದಲ್ಲೂ ಕೆಟ್ಟ ಭಾವನೆಗಳೇ ಇಣುಕುತ್ತವೆ. ಇಂಥಾ ಸಂದರ್ಭದಲ್ಲಿ ನೆನಪಾಗೋದು ಪೆರೋ ಮತ್ತು ಸೈಮನ್‌ರ ಚಿತ್ರಕಥನ. ಕ್ರಿಸ್ತಶಕ 1ನೇ ಶತಮಾನದಲ್ಲಿ ಬದುಕಿದ್ದ ವೆಲೇರಿಯಸ್ ಮ್ಯಾಕ್ಸಿಮಸ್ ಎಂಬ ಲ್ಯಾಟಿನ್ ಇತಿಹಾಸಕಾರ ತನ್ನ ”ಫ್ಯಾಕ್ಟೋರಮ್ ಆಕ್ಟ್ ಡೀಕ್ಟೋರಮ್ ಮೆಮೋರೇಬಿಲಿಯಮ್” ಎನ್ನುವ ಕೃತಿಯಲ್ಲಿ ಒಂದು ಮನ ಕಲಕುವ ದೃಶ್ಯವನ್ನು ದಾಖಲಿಸುತ್ತಾನೆ.

ಸೈಮನ್ ಎಂಬ ಬಡ ವೃದ್ಧನೊಬ್ಬ ನ್ಯಾಯಾಲಯದ ಕಟಕಟೆಯಲ್ಲಿ ತಪ್ಪಿತಸ್ತನೆಂದು ತೀರ್ಮಾನವಾಗಿ, ಜೈಲಿನಲ್ಲಿ ಉಪವಾಸ ಕೊಳೆತು ಸಾಯುವ ಶಿಕ್ಷೆಗೆ ಗುರಿಯಾಗಿರುತ್ತಾನೆ. ಅನ್ನ, ನೀರು ಏನನ್ನೂ ಕೊಡದೆ ಹಸಿವೆಯಿಂದ ಆತ ಸಾಯಬೇಕೆನ್ನುವುದು ತೀರ್ಪಿನ ಸಾರಾಂಶ. ಆದರೆ ಆತನ ಮನೆಯವರು ಬಂದು ಭೇಟಿಯಾಗಲು ಯಾವ ನಿರ್ಬಂಧವೂ ಇರುವುದಿಲ್ಲ. ಹಾಗಂತ ಅವರು ಆಹಾರ ತಂದು ಕೊಡುವಂತೆಯೂ ಇರಲಿಲ್ಲ. ಜೈಲಿನ ಸೇವಕರು, ಹೆಚ್ಚೂಕಡಿಮೆ ವಿವಸ್ತ್ರಗೊಳಿಸಿಯೇ, ಅವರ ಬಳಿ ಏನೂ ಇಲ್ಲ ಎಂದು ಖಾತ್ರಿ ಪಡಿಸಿಕೊಂಡು ಒಳ ಬಿಡುತ್ತಿದ್ದರು. ಆ ನತದೃಷ್ಟ ಖೈದಿ ಸೈಮನ್‌ನ ಮಗಳು ಪೆರೋ. ಆಗಷ್ಟೇ ಹೆರಿಗೆಯಾಗಿ, ಮಗುವಿಗೆ ಹಾಲುಣಿಸುವ ಸ್ಥಿತಿಯಲ್ಲಿದ್ದ ಹಸಿ ಬಾಣಂತಿ. ತನ್ನ ತಂದೆಯ ಯಾತನೆಯನ್ನು ನೋಡಲಾಗದೆ ಆಕೆ, ಪ್ರತಿ ದಿನ ಜೈಲಿಗೆ ಬಂದು, ಸೇವಕರಿಗೆ ಗೊತ್ತಾಗದಂತೆ ತನ್ನ ಎದೆಹಾಲನ್ನೆ ತಂದೆಗೆ ಕುಡಿಸಿ, ನಾಲ್ಕು ತಿಂಗಳ ಕಾಲ ಅವನು ಜೀವದಿಂದಿರಲು ಆಸರೆಯಾಗಿದ್ದಳು. ಒಂದು ಕಡೆ ಹಸುಗೂಸಿಗೆ ತಾಯಿಯಾಗಿ, ಮತ್ತೊಂದೆಡೆ ವೃದ್ಧ ತಂದೆಗೆ ಮಗಳಾಗಿ ಪೆರೋ ತನ್ನನ್ನು ತಾನು ತೆತ್ತುಕೊಂಡ ರೀತಿ ಇದೆಯಲ್ಲ, ಅದು ಇಡೀ ಹೆಣ್ಣುಕುಲದ ಅಮಿತ ವ್ಯಾಪ್ತಿಯ ಅಗಾಧತೆಯ ಧ್ಯೋತಕವೆನಿಸುತ್ತದೆ.

ಇದು ನಿಜಕ್ಕೂ ನಡೆದ ಘಟನೆಯೋ ಅಥವಾ ಪೌರಾಣಿಕ ಪಾತ್ರಗಳಿಂದ ಪ್ರೇರಿತನಾಗಿ ಮ್ಯಾಕ್ಸಿಮಸ್ ಕಲ್ಪಿಸಿಕೊಂಡ ಕಥನವೋ ಗೊತ್ತಿಲ್ಲ. ಆದರೆ ಲ್ಯಾಟಿನ್ ಚರಿತ್ರೆಯಲ್ಲಿ ಪೆರೋ ಮತ್ತು ಸೈಮನ್‌ರ ದೃಷ್ಟಾಂತ ‘ರೋಮನ್ ಚಾರಿಟಿ’ಗೆ ಪೂರಕವಾಗಿ ಪ್ರಸಿದ್ಧಿಯಾಗಿರೋದನ್ನು ಗಮನಿಸಬಹುದು. ಆದರೆ ಶತಮಾನಗಳು ಉರುಳಿದಂತೆ, ಈ ಕಥನ ಜನರ ಗ್ರಹಿಕೆಯಿಂದ ಅಳಿಸುತ್ತಾ ಬಂತು.

ಹದಿನೈದನೇ ಶತಮಾನದಲ್ಲಿ ಜರ್ಮನಿಯಲ್ಲಿ ಜೀವಿಸಿದ್ದ ಬಾರ್ತೆಲ್ ಬೆಹಮ್ ಮತ್ತು ಸೆಬಾಲ್ಡ್ ಬೆಹಮ್ ಎಂಬ ಚಿತ್ರಕಾರ ಸೋದರರ ಗಮನಕ್ಕೆ ಅದೊಮ್ಮೆ ಈ ಕಥನದ ಮಾಹಿತಿ ತಿಳಿಯಿತು. ಅದನ್ನು ಆಧರಿಸಿ ಅವರು ಪೆರೋ ಮತ್ತು ಸೈಮನ್‌ರ ಚಿತ್ರವನ್ನು ಮೊದಲ ಬಾರಿ ರಚಿಸಿದರು. ಬೆಹಮ್ ಸೋದರರ ಮೂಲ ಚಿತ್ರದಲ್ಲಿ ವೃದ್ಧ ಸೈಮನ್‌ನನ್ನು ಎರಡೂ ಕೈ ಹಿಂದಕ್ಕೆ ಬಂಧಿಸಿ ಕಟ್ಟಲಾಗಿತ್ತು. ಕಾಲುಗಳಿಗೆ ಕಬ್ಬಿಣದ ಸರಪಳಿ ಬಿಗಿಯಲಾಗಿತ್ತು. ಕಲ್ಲು ಬೆಂಚಿನ ಮೇಲೆ ಕೂತ ಆತನ ಮುಂದೆ ಸಂಪೂರ್ಣ ಬೆತ್ತಲೆಯಾಗಿ ನಿಂತ ಮಗಳು ಪೆರೋ ತನ್ನ ಎದೆಯೂಡಿ ಹಾಲುಣಿಸುತ್ತಿದ್ದಳು.

ಮಗಳೊಬ್ಬಳು ಹೀಗೆ ತಂದೆಯ ಮುಂದೆ ನಗ್ನವಾಗಿ, ತನ್ನ ಸ್ತನಗಳನ್ನು ಅವನ ಬಾಯಿಗಿಟ್ಟಿರುವ ಚಿತ್ರವನ್ನು ಕಂಡಕೂಡಲೇ ಆಗಿನ ಅಧಿಕಾರರೂಢ ಧಾರ್ಮಿಕವಾದಿಗಳು, ’ಇದು ನಮ್ಮ ಭಾವನೆಗೆ ಧಕ್ಕೆ ತರುವಂತಿದೆ; ತಂದೆ-ಮಗಳ ನಡುವೆ ಅಶ್ಲೀಲ ಸಂಬಂಧ ಕಲ್ಪಿಸಿದ ಈ ಚಿತ್ರ ಧರ್ಮಬಾಹಿರ’ ಎಂಬ ತೀರ್ಮಾನಕ್ಕೆ ಬಂದು ಬಾರ್ತೆಲ್ ಬೆಹಮ್ ಮತ್ತು ಅವನ ಗೆಳೆಯ ಜಾರ್ಜ್ ಪೆಂಕ್ಜ್‌ರನ್ನು ಸೆರೆವಾಸಕ್ಕೆ ತಳ್ಳಿದ್ದರು. ಮ್ಯಾಕ್ಸಿಮಸ್‌ನ ಐತಿಹಾಸಿಕ ಕಥನವನ್ನು ಆಧರಿಸಿ ಚಿತ್ರ ರಚಿಸಿದ್ದ ಬೆಹಮ್ ಸೋದರರಿಗೆ ಅಲ್ಲಿ ತನ್ನ ನತದೃಷ್ಟ ತಂದೆಯನ್ನು ಬದುಕಿಸಿಕೊಳ್ಳುವ ಅಸಹಾಯಕ ಮಗಳೊಬ್ಬಳ ಪರಿಶುದ್ಧ, ಪ್ರಾಮಾಣಿಕ ಪ್ರೀತಿ ತುಂಬಿದ ತಾಯ್ತನ ಕಂಡು ಬಂದರೆ; ಮತಮೂಢರ ಕಣ್ಣಿಗೆ ಅಲ್ಲಿ ತಂದೆ ಮಗಳ ನಡುವಿನ ಹಾದರತನ ಕಾಣಿಸಿತ್ತು!

ಇದುವೇ, ನೋಟಗಳಲ್ಲಿರುವ ವ್ಯತ್ಯಾಸ!

ಮುಂದೆ, ಸೆಬಾಲ್ಡ್ ಬೆಹಮ್ ಅದೇ ಕಲಾಕೃತಿಯನ್ನು ಪುನರ್ ನವೀಕರಿಸಿ, ಅದರಲ್ಲಿ ’ನನ್ನ ಮಗಳ ಎದೆಹಾಲಿನಿಂದ ನಾನು ಬದುಕುಳಿದೆ’ ಎಂದು ಸೈಮನ್ ಹೇಳುತ್ತಿರುವಂತೆ ಹೇಳಿಕೆಯನ್ನು ಬರೆದು, ಕಥೆಯ ಐತಿಹಾಸಿಕ ಹಿನ್ನೆಲೆಯನ್ನು ಮತ್ತೆ ವಿವರಿಸಿ ಹೇಳಬೇಕಾಯ್ತು. ತದನಂತರ, ಪೆರೋ ಮತ್ತು ಸೈಮನ್‌ರ ಕಥೆಯನ್ನಾಧರಿಸಿ ಬಹಳಷ್ಟು ಕಲಾವಿದರು ತಮ್ಮದೇ ಕಲ್ಪನೆಯಲ್ಲಿ ಚಿತ್ರವನ್ನು ರಚಿಸಿದರು.

ಹೆಣ್ಣು ಎಂದಾಕ್ಷಣ ಕೇವಲ ಭೋಗದ ವಸ್ತುವೆಂದು ನಮ್ಮ ಸಮಾಜ ಸತತವಾಗಿ ಭಾವಿಸಿಕೊಂಡು ಬರುತ್ತಿದೆ. ಪೆರೋಳ ಬೆತ್ತಲೆ ಎದೆ ನೋಡಿದ ಕೂಡಲೇ, ಅದರ ಹಿಂದಿರುವ ಕರುಳು ಹಿಂಡುವ ಕಥನವನ್ನು ತಿಳಿದುಕೊಳ್ಳುವ ವ್ಯವಧಾನವೂ ಇಲ್ಲದೆ ಅಶ್ಲೀಲ ಅಂತ ಆರೋಪಿಸಿದ ಮನಸ್ಥಿತಿಗಳೇ ಇವತ್ತು ಸಿದ್ದರಾಮಯ್ಯನವರ ನೋಟದೊಳಗಿನ ಕೌತುಕ, ಮೆಚ್ಚುಗೆಗಳಿಗೂ ಕಾಮದ ವಾಸನೆಯನ್ನು ಆರೋಪಿಸಿ ಟ್ರೋಲ್ ಮಾಡುತ್ತಿವೆ. ಕಾಲ ಬದಲಾಗಿದೆ, ಆದರೆ ಮನುಷ್ಯನ ಸಣ್ಣತನಗಳು ಬದಲಾಗಿಲ್ಲ.

ಟ್ರೋಲ್ ಮಾಡುವ ಸಲುವಾಗಿ ಹೆಣ್ಣಿನ ಸ್ವಂತಿಕೆ, ಅವಳ ಸಾಮರ್ಥ್ಯ, ಅವಳ ತ್ಯಾಗ, ಅವಳ ಸಂದಿಗ್ಧತೆಗಳನ್ನೆಲ್ಲ ’ಹಾದರತನದ’ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಇಂತವರಿಗೆ ತುರ್ತಾಗಿ ಬೇಕಿರುವುದು ನಮ್ಮ ಮರುಕವಲ್ಲ; ಮಾನಸಿಕ ಚಿಕಿತ್ಸೆ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!