ತಾಳಿ ಕಟ್ಟಿಸಿಕೊಂಡ ದಿನವೇ ಬಿ.ಕಾಂ.ಪರೀಕ್ಷೆ ಬರೆಯುವ ಮೂಲಕ ವಧು, ಶಿಕ್ಷಣದ ಮಹತ್ವವನ್ನು ಸಾರಿದ್ದಾಳೆ.
ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್.ಟಿ.ಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಐಶ್ವರ್ಯ ಎಂಬುವರ ಮದುವೆ ಪರೀಕ್ಷೆ ದಿನವಾದ ಇಂದು ಬೆಳಿಗ್ಗೆ ನೆರವೇರಿತ್ತು.
ತಾಳಿ ಕಟ್ಟಿಸಿಕೊಂಡು, ಆರತಕ್ಷತೆ ಮುಗಿಸಿಕೊಂಡು, ಮಧ್ಯಾಹ್ನದ ವೇಳೆಗೆ ನೂತನ ವಧು ಐಶ್ವರ್ಯ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದರು. ಆ ಮೂಲಕ ದಾಂಪತ್ಯ ಜೀವನದ ಜೊತೆಗೆ ಶಿಕ್ಷಣವೂ ಮುಖ್ಯ ಎಂಬುದನ್ನು ಸಾಬೀತು ಪಡಿಸಿದರು.
ಐಶ್ವರ್ಯ ಅವರು ಪರೀಕ್ಷೆ ಬರೆಯಲು ಅವರ ತಂದೆ,ತಾಯಿ ಪತಿ,ಅತ್ತೆ, ಮಾವ, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದರಿಂದ ಪರೀಕ್ಷೆ ಬರೆಯುವಂತಾಯಿತು. ಆ ಮೂಲಕ ದಾಂಪತ್ಯ ಜೀವನದ ಜೊತೆ ಜೊತೆಗೆ ಶಿಕ್ಷಣವೂ ನಿರಾತಂಕವಾಗಿ ಮುಂದುವರೆಯುವಂತಾಯಿತು.