ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿ ಮೌಢ್ಯ,ಕಂದಾಚಾರಗಳು ಹೆಚ್ಚುತ್ತಿದ್ದು, ಅದಕ್ಕೆ ಜನರಲ್ಲಿರುವ ಮನಸ್ಥಿತಿಯೇ ಕಾರಣವಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಡಾ. ಹುಲಿಕಲ್ ನಟರಾಜು ವಿಷಾದ ವ್ಯಕ್ತಪಡಿಸಿದರು.
ಮಂಡ್ಯದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಿಯವರೆಗೆ ಮೋಸ ಹೋಗುತ್ತೇವೆಯೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಯುವಕರು ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಮನಸ್ಸಿನ ನಿಲುವುಗಳನ್ನು ನಿರ್ದಿಷ್ಟವಾಗಿಸಲು ವೈಜ್ಞಾನಿಕ ಚಿಂತನೆಗಳಿಂದ ಮಾತ್ರ ಸಾಧ್ಯ.ಮೌಢ್ಯದಿಂದ ಹೊರಬಂದರೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವಿಜ್ಞಾನವನ್ನು ತೆರೆಮರೆಗೆ ಕಳುಹಿಸುವ ಹುನ್ನಾರ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಗ್ರಾಮೀಣ ಪ್ರದೇಶದ ಮುಗ್ದ ಮನಸ್ಸುಗಳನ್ನು ಮೌಢ್ಯಾಚರಣೆ ಮೂಲಕ ದುರುಪಯೋಗಪಡಿಸಿಕೊಳ್ಳುವ ಕಾರ‍್ಯ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದನ್ನು ವಿರೋಧಿಸಲು ಇಂತಹ ಕಾರ‍್ಯಾಗಾರ ಹಾಗೂ ಸಮ್ಮೇಳನ ಅಗತ್ಯ ಎಂದರು.