Saturday, May 25, 2024

ಪ್ರಾಯೋಗಿಕ ಆವೃತ್ತಿ

ಆರೇಳು ಸಾವಿರ ಕೋಟಿ ಬರೀ ಕಾಗದದ ಮೇಲಿದೆ ಅಷ್ಟೇ

ಕೆಲವರು ಜಿಲ್ಲೆಯ ಅಭಿವೃದ್ಧಿಗೆ ಕಾಗದದಲ್ಲಿ ಮಾತ್ರ 6-7 ಸಾವಿರ ಕೋಟಿ ಕೊಟ್ಟಿದ್ದೇವೆ ಅಂತಾ ಹೇಳ್ತಾರೆ, ಆದರೆ 500 ಕೋಟಿಯನ್ನೂ ಕೊಡಲಿಲ್ಲ ಎಂದು ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಜೆಡಿಎಸ್ ನಾಯಕರ ಹೆಸರೇಳದೆ ವ್ಯಂಗ್ಯವಾಡಿದರು.

ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ಯಡಿಯೂರಪ್ಪನವರು ಎರಡೂವರೆ ಸಾವಿರ ಕೋಟಿ ಅನುದಾನವನ್ನು ಕೊಟ್ಟಿದ್ದಾರೆ.

ನಮ್ಮ ಸರ್ಕಾರ ಬಂದ್ಮೆಲೆ ಯಾವುದೇ ಕೆಲಸಕ್ಕೂ ಕೊಕ್ಕೆ ಹಾಕಿಲ್ಲ. ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಪಾಂಡವಪುರ, ಕೆಆರ್ ಪೇಟೆ, ನಾಗಮಂಗಲದಲ್ಲಿ ಮೊದಲ ಹಂತದಲ್ಲಿ ಜಲಧಾರ ಯೋಜನೆಗೆ 830 ಕೋಟಿ ಅನುದಾನ ನೀಡಲಾಗಿದೆ. ಎರಡನೇ ಹಂತದಲ್ಲಿ ನಾಲ್ಕು ತಾಲೂಕುಗಳಲ್ಲಿ 1200 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಾನು ಬಿಜೆಪಿ ಸೇರುವುದಕ್ಕೆ ಅಭಿವೃದ್ಧಿಯೇ ಕಾರಣ.

ರಾಜ್ಯದಲ್ಲಿ ಹಲವು ವರ್ಷಗಳ ಕಾಲ ಕಾಂಗ್ರೆಸ್ – ಜೆಡಿಎಸ್ ಅಧಿಕಾರ ನಡೆಸಿವೆ. ಆದರೆ, ಮಂಡ್ಯ ಜಿಲ್ಲೆಯ ಅಭಿವೃದ್ಧಿಯೇ ಮಾಡಿರಲಿಲ್ಲ. ಹಾಗಾಗಿ ಅಭಿವೃದ್ಧಿಗಾಗಿ ನಾವೆಲ್ಲರೂ ಬಿಜೆಪಿ ಪಕ್ಷಕ್ಕೆ ಬಂದೆವು ಎಂದು ಹೇಳಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಎಂಟು ವರ್ಷಗಳ ಕಾಲ ಸ್ಥಗಿತಗೊಳಿಸಿದ್ದರು. ಆದರೆ, ನಮ್ಮ ಬಿಜೆಪಿ ಸರ್ಕಾರ ಬಂದಮೇಲೆ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಪ್ರಾರಂಭ ಮಾಡಲಾಯಿತು. ಇದೀಗ ಮೈಶುಗರ್ ಕಾರ್ಖಾನೆ ಆರಂಭ ಮಾಡಲು ಎಲ್ಲಾ ಸಿದ್ಧತೆಯಾಗಿದ್ದು, ಜುಲೈ ಮಧ್ಯದಲ್ಲಿ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆದ್ದರೆ ಐದು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಸಿಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಳುಗುವ ಹಡಗು ಆಗಿದೆ. ಈಗಾಗಲೇ ಮೂರು ಮನೆ ಆಗಿದೆ, ಇನ್ನು ಎರಡು ಮನೆ ರೆಡಿ ಆಗ್ತಿದೆ. ಇನ್ನೂ ಜೆಡಿಎಸ್ ಕತೆ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದರು. ಆದರೆ, ಈಗ ಅದು ನಡೆಯಲ್ಲ. ನಾವೆಲ್ಲರೂ ಇದ್ದೇವೆ. ಬಿಜೆಪಿಯನ್ನು ಕಟ್ಟೋಣ. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ನಾವೆಲ್ಲರೂ ದುಡಿಯೋಣ ಎಂದರು
.
ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಅಬಕಾರಿ ಸಚಿವ ಕೆ ಗೋಪಾಲಯ್ಯ, ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯಎನ್. ರವಿ ಕುಮಾರ್, ಮುಡಾ ಅಧ್ಯಕ್ಷ ಶ್ರೀನಿವಾಸ್, ಮೈ ಶುಗರ್ ಅಧ್ಯಕ್ಷ ಶಿವಲಿಂಗೇಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯ್ ಕುಮಾರ್, ಪಾಂಡವಪುರ ಮುಖಂಡರಾದ ಡಾ.ಇಂದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!