Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ರಾಜಕೀಯ ನಡೆಯನ್ನು ಹಾಡಿ ಹೊಗಳಿದ ಸ್ಮೃತಿ ಇರಾನಿ !

“ರಾಹುಲ್ ಗಾಂಧಿಯವರ ರಾಜಕೀಯದಲ್ಲಿ ಬದಲಾವಣೆ ಬಂದಿದೆ. ಯಶಸ್ಸಿನ ರುಚಿ ನೋಡುತ್ತಿದ್ದಾರೆ….” ಹೀಗಂತ ಹೇಳಿರುವುದು ಕಾಂಗ್ರೆಸ್‌ನ ನಾಯಕರಲ್ಲ..ಬದಲಾಗಿ ಬದ್ಧ ರಾಜಕೀಯ ಎದುರಾಳಿಯಾಗಿ ಗುರುತಿಸಿಕೊಂಡಿರುವ ಮಾಜಿ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ.

ಪತ್ರಕರ್ತ ಸುಶಾಂತ್ ಸಿನ್ಹಾ ಅವರೊಂದಿಗೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಸ್ಮೃತಿ ಇರಾನಿ ಈ ಹೇಳಿಕೆ ನೀಡಿದ್ದಾರೆ. ತಮ್ಮ ಬದ್ಧ ಎದುರಾಳಿ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಈ ರೀತಿಯ ಹೇಳಿಕೆ ನೀಡಿರುವುದು ಸ್ವತಃ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ಸಿಗರಿಗೂ ಅಚ್ಚರಿ ಮೂಡಿಸಿದೆ.

“>

ಈ ಸಂದರ್ಶನದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ರಾಹುಲ್ ಗಾಂಧಿಯವರು ಯಶಸ್ಸಿನ ರುಚಿ ನೋಡುತ್ತಿದ್ದಾರೆ. ಈಗ ವಿಭಿನ್ನ ಶೈಲಿಯ ರಾಜಕೀಯ ತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಜಾತಿಯ ಬಗ್ಗೆ ಮಾತನಾಡುವಾಗ, ಸಂಸತ್ತಿನಲ್ಲಿ ಬಿಳಿ ಟಿ-ಶರ್ಟ್ ಧರಿಸಿದಾಗ, ಅದು ಯುವಕರಿಗೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ” ಎಂದು ಇರಾನಿ ಹೇಳಿದ್ದಾರೆ.

“ರಾಹುಲ್ ಗಾಂಧಿ ಅವರು ತಮ್ಮ ದೇವಾಲಯ ಭೇಟಿಗಳಿಂದ ಯಾವುದೇ ಗಮನ ಸೆಳೆಯಲಿಲ್ಲ. ಅದು ಜೋಕ್‌ಗಳ ಸರಮಾಲೆಯಾಯಿತು. ಆದ್ದರಿಂದ ಈ ತಂತ್ರವು ಕೆಲಸ ಮಾಡದಿದ್ದಾಗ, ಅವರು ಜಾತಿ ವಿಷಯಗಳತ್ತ ತಿರುಗಿದರು” ಎಂದು ಇರಾನಿ ಹೇಳಿಕೆ ನೀಡಿದ್ದು, ‘ರಾಹುಲ್ ಗಾಂಧಿಯವರ ಈ ನಡೆಗಳು ದೇಶದ ರಾಜಕೀಯದಲ್ಲಿ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ವಿಶಾಲ ಕಾರ್ಯತಂತ್ರದ ಭಾಗ’ ಎಂದೂ ಕೂಡ ಉಲ್ಲೇಖಿಸಿದ್ದಾರೆ.

ಮಿಸ್ ಇಂಡಿಯಾದಲ್ಲಿ ದಲಿತ ಅಥವಾ ಆದಿವಾಸಿ ಸ್ಪರ್ಧಿಗಳ ಕೊರತೆಯ ಬಗ್ಗೆ ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿರುವ ಇರಾನಿ, ಸಾರ್ವಜನಿಕರ ದೃಷ್ಟಿಯಲ್ಲಿ ಉಳಿಯಲು ರಾಹುಲ್ ಗಾಂಧಿ ಪ್ರಚೋದನಕಾರಿ ಹೇಳಿಕೆಗಳನ್ನು ಬಳಸುತ್ತಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ರಾಹುಲ್ ಗಾಂಧಿಯವರ ಆಪ್ತರಾಗಿರುವ ಕಿಶೋರಿ ಲಾಲ್ ಶರ್ಮಾ ಸೋಲಿಸಿದ್ದರು. ಈ ಸಂದರ್ಶನದಲ್ಲಿ ಅಮೇಠಿ ಸೋಲಿನ ಬಗ್ಗೆಯೂ ಸ್ಮೃತಿ ಇರಾನಿ ಮಾತನಾಡಿದ್ದಾರೆ.

‘ರಾಹುಲ್ ಗಾಂಧಿ ವಿರೋಧಿಗಳೆಲ್ಲ ಮಿತ್ರರಾಗುತ್ತಿದ್ದಾರೆ’ ಎಂದ ನೆಟ್ಟಿಗರು!

ಸ್ಮೃತಿ ಇರಾನಿ ನೀಡಿರುವ ಈ ಹೇಳಿಕೆಯು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ‘ರಾಹುಲ್ ಗಾಂಧಿಯವರ ವಿರೋಧಿಗಳೆಲ್ಲ ಮಿತ್ರರಾಗುತ್ತಿದ್ದಾರೆ’ ಎಂದ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಕೆಲವರು, “ರಾಹುಲ್ ಗಾಂಧಿಯವರ ಬಗ್ಗೆ ಸ್ಮೃತಿ ಇರಾನಿಯವರ ಮಾತುಗಳು ಇಷ್ಟೊಂದು ಮೃದುವಾದದ್ದು ಹೇಗೆ ಎಂದು ಯಾರಾದರೂ ಹೇಳಬಹುದೇ? ಇದಕ್ಕೆ ಕಾರಣ ಅಧಿಕಾರದ ನಷ್ಟವೋ ಅಥವಾ ಇನ್ನೇನಾದರೂ ಇದೆಯೋ?” ಎಂದು ಕೇಳಿದರೆ, ಮತ್ತೆ ಕೆಲವರು, “ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಫಲ ಈಗ ಕಾಣುತ್ತಿದೆ. ದ್ವೇಷ ಹರಡುತ್ತಿದ್ದವರೆಲ್ಲ ಪ್ರೀತಿಯ ಮಾತುಗಳನ್ನಾಡುತ್ತಿದ್ದಾರೆ. ದ್ವೇಷ ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿ ತೆರೆದಿರುವ ಪ್ರೀತಿಯ ಅಂಗಡಿಗೆ ಜನರು ಬರುತ್ತಿದ್ದಾರೆ ಎಂಬುದಕ್ಕೆ ಸ್ಮೃತಿ ಇರಾನಿಯವರ ಮಾತುಗಳು ಉದಾಹರಣೆ” ಎಂದು ಬರೆದುಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!