Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ

ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂದು ನಿಧನ ಹೊಂದಿದ್ದಾರೆ.

ಅವರು ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಒಮ್ಮೆ ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮುಲಾಯಂ ಜಾತ್ಯತೀತ ತತ್ವಗಳನ್ನು ಉಳಿಸಿಕೊಂಡು  ಹಿಂದುಳಿದ ಜಾತಿಗಳ ಅಗ್ರ ನಾಯಕನಾಗಿ ಹೊರ ಹೊಮ್ಮಿದ್ದರು. ಅವರ ಬೆಂಬಲಿಗರಿಂದ ನೇತಾಜಿ ಎಂದು ಕರೆಯಲ್ಪಡುವ ಮುಲಾಯಂ ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಆ.22ರಂದು ಗುರ್ಗಾಂವ್ನ ಮೇದಾಂತ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಅವರ ಸ್ಥಿತಿ ಸ್ಥಿತಿ ಇನ್ನೂ ಹದಗೆಟ್ಟಿದ್ದರಿಂದ ಅವರನ್ನು ಅಕ್ಟೋಬರ್ 2 ರ ಭಾನುವಾರದಂದು ಖಾಸಗಿ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಮೇದಾಂತ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಅವರು ಇಬ್ಬರು ಮಕ್ಕಳಾದ ಅಖಿಲೇಶ್ ಯಾದವ್ ಮತ್ತು ಪ್ರತೀಕ್ ಯಾದವ್ ಅವರನ್ನು ಅಗಲಿದ್ದಾರೆ

ಶಿಕ್ಷಕ-ಕುಸ್ತಿಪಟು

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ 22 ನವೆಂಬರ್ 1939 ರಂದು ಮೂರ್ತಿ ದೇವಿ ಮತ್ತು ಸುಗರ್ ಸಿಂಗ್ ದಂಪತಿಗೆ ಜನಿಸಿದ ಮುಲಾಯಂ ಅವರು 1992 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದರು. ಅವರು ಮೊದಲು 1989 ರಲ್ಲಿ ಮುಖ್ಯಮಂತ್ರಿಯಾದರು, 1991 ರವರೆಗೆ ಸೇವೆ ಸಲ್ಲಿಸಿದರು, ನಂತರ 1993 ರಿಂದ 1995 ಮತ್ತು 2003 ರಿಂದ 2007 ರವರೆಗೆ ಸೇವೆ ಸಲ್ಲಿಸಿದರು. ಅವರು 1996 ರಿಂದ 1998 ರವರೆಗೆ ಕೇಂದ್ರದ ಯುನೈಟೆಡ್ ಫ್ರಂಟ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಮುಲಾಯಂ ಅವರು ಮಣಿಪುರಿ ಜಿಲ್ಲೆಯ ಕರ್ಹಾಲ್ನಲ್ಲಿರುವ ಜೈನ್ ಇಂಟರ್ ಕಾಲೇಜಿನಲ್ಲಿ ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮ ಯೌವನದಲ್ಲಿ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದರು.

1960 ರ ದಶಕದ ಆರಂಭದಲ್ಲಿ, ಮುಲಾಯಂ ಅವರು ತಮ್ಮ 20 ರ ಹರೆಯದಲ್ಲಿದ್ದಾಗ ಇಟಾವಾದಲ್ಲಿನ ಜಸ್ವಂತ್ ನಗರದ ಸಮಾಜವಾದಿ ಪಕ್ಷದ ಶಾಸಕರಾದ ನಾಥು ಸಿಂಗ್ ಅವರು ನೆರೆಯ ಮೈನ್ಪುರಿ ಜಿಲ್ಲೆಯ ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡಲು ಬಂದರು. ಗಟ್ಟಿಮುಟ್ಟಾದ ಮುಲಾಯಂ ಅವರ ಕುಸ್ತಿ ಕೌಶಲ್ಯ ಮತ್ತು ಪ್ರಬಲ ಎದುರಾಳಿಗಳನ್ನು ಸೋಲಿಸುವ ಅವರ ಸಾಮರ್ಥ್ಯದಿಂದ ಪ್ರಭಾವಿತರಾದ ಸಿಂಗ್, ಯುವ ಕುಸ್ತಿಪಟುವನ್ನು ಭೇಟಿಯಾಗಲು ಆಸಕ್ತಿ ತೋರಿದರು.

ಆಗ ಅವರು ವಿದ್ಯಾವಂತನಾಗಿದ್ದು ಸ್ಥಳೀಯ ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದಾನೆ ಎಂದು ತಿಳಿದು, ಸಿಂಗ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಾಜಕೀಯ ಪರಿಚಯಿಸಿದರು.ಹೀಗೆ ಮುಲಾಯಂ ಸಿಂಗ್ ಯಾದವ್ ಅವರ ಸುದೀರ್ಘ ರಾಜಕೀಯ ಪಯಣ ಆರಂಭವಾಯಿತು. 1967 ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಸಿಂಗ್ ಪಕ್ಕಕ್ಕೆ ಸರಿದು ಜಸ್ವಂತ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿದರು.

27ನೇ ವಯಸ್ಸಿಗೆ ಶಾಸಕ

1967ರಲ್ಲಿ 27 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ಮುಲಾಯಂ, 1977 ರಲ್ಲಿ ರಾಜ್ಯ ಸಚಿವರಾದರು. 1989 ರಲ್ಲಿ ಜನತಾ ದಳದ ನಾಯಕರಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಅವರ ಅಧಿಕಾರಾವಧಿಯು 1991 ರವರೆಗೆ ಎರಡು ವರ್ಷಗಳ ಕಾಲ ನಡೆಯಿತು ಮತ್ತು ಬಹುಬೇಗ ಅವರು ಜನತಾ ದಳದಿಂದ ಬೇರ್ಪಟ್ಟು ನಂತರ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು, ಅದರ ಸ್ಥಾಪಕ-ಅಧ್ಯಕ್ಷರಾದರು.

ಅವರು 1970 ರ ದಶಕದ ರಾಜಕೀಯ ಪ್ರಕ್ಷುಬ್ಧ ಅವಧಿಯಲ್ಲಿ ಯುಪಿ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡರು. ನಂತರ 1980 ರ ದಶಕದ ಕೊನೆಯಲ್ಲಿ ಮತ್ತು 1990 ರ ದಶಕದ ಆರಂಭದಲ್ಲಿ ತೀವ್ರವಾದ ಜಾತಿ ರಾಜಕೀಯದಿಂದ ಗುರುತಿಸಲ್ಪಟ್ಟ ಅವರು ಸಮಾಜವಾದಿ ಒಬಿಸಿ ನಾಯಕರಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಪ್ರತಿಪಾದಿಸಿ, ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದರು ಮತ್ತು ಜಾತ್ಯತೀತವಾಗಿ ಕಾರ್ಯ ನಿರ್ವಹಿಸಿದರು. ಮುಸ್ಲಿಂ-ಯಾದವ್ ರಾಜಕೀಯ ಸೂತ್ರವು ರಾಜಕೀಯದಲ್ಲಿ ಅತಿ ಹೆಚ್ಚಿನ ಲಾಭವನ್ನು ತಂದು ಕೊಟ್ಟಿತು. 1993 ರಲ್ಲಿ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತಂದಿತು.

ಯುಪಿ ರಾಜಕೀಯದಲ್ಲಿ ಮುಲಾಯಂ ಅವರ ಪ್ರಗತಿಯು 1980 ರ ದಶಕದಿಂದ ನಿರಂತರವಾಗಿ ಕಾಂಗ್ರೆಸ್ ಕ್ಷಿಣಿಸುವಂತೆ ಮಾಡಿತು. ಅಧಿಕಾರದಿಂದ ಹೊರಗುಳಿದಾಗಲೂ ಮುಲಾಯಂ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದ್ದರು. 2012 ರಲ್ಲಿ ಸಮಾಜವಾದಿ ಪಕ್ಷದ ಐತಿಹಾಸಿಕ ಗೆಲುವಿನ ನಂತರ, ಪಕ್ಷವು ಮೊದಲ ಬಾರಿಗೆ ಪೂರ್ಣ ಬಹುಮತವನ್ನು ಗಳಿಸಿದ ನಂತರ, ಪಕ್ಷದ ಮೇಲೆ ಮತ್ತು ಆಡಳಿತದ ಮೇಲೆ ಬಿಗಿಯಾದ ಹಿಡಿತವನ್ನು ಇಟ್ಟುಕೊಂಡು ಮುಲಾಯಂ ತಮ್ಮ ಮಗ ಅಖಿಲೇಶ್ ಅವರನ್ನು ಮುನ್ನೆಲೆಗೆ ತಂದರು.

2017 ರ ಅಸೆಂಬ್ಲಿ ಚುನಾವಣೆಗೆ ಮುಂಚೆಯೇ, ಮುಲಾಯಂ ಅವರು ಕೌಟುಂಬಿಕ ಕಲಹದ ಮಧ್ಯದಲ್ಲಿ ಸಲುಕಿಕೊಂಡರು. ಇಬ್ಬರು ಮಕ್ಕಳಾದ ಅಖಿಲೇಶ್ ಮತ್ತು ಸಹೋದರ ಶಿವಪಾಲ್ ಪಕ್ಷದ ಮೇಲೆ ನಿಯಂತ್ರಣಕ್ಕಾಗಿ ಸಾರ್ವಜನಿಕ ಹೋರಾಟವನ್ನು ನಡೆಸಿದರು.

ಅಖಿಲೇಶ್ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದಂತೆ, ವಿವಾದಾತ್ಮಕ ತುರ್ತು ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ತಮ್ಮ ತಂದೆಯನ್ನು ಬದಲಿಸಿದರು. ಆಗ ಮುಲಾಯಂ ಅವರು ಮುಂಚೂಣಿಯಿಂದ ಹಿಂದೆ ಸರಿದರು, ಆದರೆ  2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ವೃತ್ತಿಜೀವನದ ಮೈಲಿಗಲ್ಲುಗಳು

ಹಲವು  ದಶಕಗಳ ವೃತ್ತಿಜೀವನದಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೂರು ಬಾರಿ ಅಧಿಕಾರಕ್ಕೇರಿದರು. ಒಮ್ಮೆ ಕೇಂದ್ರ ರಕ್ಷಣಾ ಸಚಿವರಾಗಿ, ಯುಪಿ ಅಸೆಂಬ್ಲಿಯ ಸದಸ್ಯರಾಗಿ ಮತ್ತು ಲೋಕಸಭೆಯ ಸಂಸದರಾಗಿ ಬಹು ಅವಧಿಗೆ ಸೇವೆ ಸಲ್ಲಿಸಿದರು.

  • 1967, 1974, 1977, 1985, 1989, 1991, 1993, 1996, 2003, 2007: ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆ
  • 1989-91, 1993-95, 2003-2007: ಮುಖ್ಯಮಂತ್ರಿ, ಉತ್ತರ ಪ್ರದೇಶ
  • 1996, 1998, 1999, 2004, 2009, 2014, 2019: ಲೋಕಸಭೆಗೆ ಆಯ್ಕೆ
  • 1996-98: ಕೇಂದ್ರ ಕ್ಯಾಬಿನೆಟ್ ಮಂತ್ರಿ, ರಕ್ಷಣಾ ಸಚಿವ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!