Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ಜನತಾದರ್ಶನದ ಉದ್ಧೇಶ: ಡಾ.ಕುಮಾರ

ರೈತರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿ ಕೊಡುವುದೇ ಜನತಾದರ್ಶನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜಿಲ್ಲಾಡಳಿತವೇ ರೈತರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಈ ಅವಕಾಶವನ್ನು ರೈತ ಬಾಂಧವರು ಬಳಸಿಕೊಂಡು, ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಜನತಾದರ್ಶನ ಭಾಷಣ ಮಾಡುವ ಕಾರ್ಯಕ್ರಮವಲ್ಲ, ರೈತರ ಸಮಸ್ಯೆಗಳಿಗೆ ನೇರವಾಗಿ ಪರಿಹಾರವನ್ನು ಕಂಡುಹಿಡಿದು ಸಮಸ್ಯೆಯನ್ನು ನಿವಾರಿಸುವ ಕಾರ್ಯಕ್ರಮವಾಗಿರುವುದರಿಂದ ಇಲ್ಲಿ ಹೆಚ್ಚು ಭಾಷಣಕ್ಕೆ ಅವಕಾಶವಿಲ್ಲ, ರೈತ ಬಾಂಧವರು ಸಲ್ಲಿಸುವ ಅರ್ಜಿಗಳಿಗೆ ಪರಿಹಾರವನ್ನು ಕಂಡು ಹಿಡಿಯುವ ಕಾರ್ಯಕ್ರಮವಾಗಿದೆ. ಈಗಾಗಲೇ ನಾಗಮಂಗಲ ಮಳವಳ್ಳಿ ಹಾಗೂ ಮದ್ದೂರಿನಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಕೆ.ಆರ್.ಪೇಟೆ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಜನತಾದರ್ಶನ ಕಾರ್ಯಕ್ರಮವು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಬೇಕು. ಈ ದಿಕ್ಕಿನಲ್ಲಿ ರೈತ ಬಾಂಧವರು ಸಲ್ಲಿಸುವ ಮನವಿಗಳಿಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ದೊರಕಿಸಿಕೊಡಲಾಗುವುದು, ಉಳಿದಂತೆ ಕಾನೂನಿನ ಪರಿಮಿತಿಯೊಳಗೆ ಬಗೆಹರಿಸಬಹುದಾದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಈ ಬಗ್ಗೆ ಯಾರೂ ಕೂಡ ಅನುಮಾನ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜನತಾದರ್ಶನ ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ನಿವೇಶನಗಳ ಸಮಸ್ಯೆ, ಕತ್ತರಘಟ್ಟ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತನಾದ ರೈತನಿಗೆ ಈವರೆಗೆ ಪರಿಹಾರ ನೀಡದಿರುವುದು, ನೆನೆಗುದಿಗೆ ಬಿದ್ದಿರುವ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಸಂಪೂರ್ಣ ಗೊಳಿಸಿ ಜನತೆಯ ಸೇವೆಗೆ ಸಮರ್ಪಿಸುವುದು, ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ರೈತರ ಜಮೀನುಗಳಿಗೆ ಹೋಗಲು ರಸ್ತೆಯನ್ನು ನಿರ್ಮಿಸಿ ಕೊಡುವುದು, ರೈತರ ಪಹಣಿ ದೋಷವನ್ನು ಸರಿಪಡಿಸುವುದು, ಪೌತಿ ಖಾತೆಗಳನ್ನು ಮಾಡುವುದು, ಕೆ. ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯ ನಿವಾಸಿಗಳ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಸೇರಿದಂತೆ ನೂರಾರು ಸಮಸ್ಯೆಗಳ ಕುರಿತಂತೆ ದೂರುಗಳು ಹರಿದು ಬಂದವು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ತಹಸಿಲ್ದಾರ್ ನಿಸರ್ಗಪ್ರಿಯ, ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ರಾಜಮೂರ್ತಿ ಅವರು ಹಾಜರಿದ್ದು, ಕೆಲವು ಸಮಸ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಟ್ಟರು.

ಜನತಾದರ್ಶನ ಕಾರ್ಯಕ್ರಮವು ರೈತ ಬಾಂಧವರ ಸಮಸ್ಯೆಗಳ ಇತ್ಯರ್ಥಕ್ಕೆ ಸೂಕ್ತ ವೇದಿಕೆಯಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅವರ ಸಮಕ್ಷಮದಲ್ಲಿಯೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ದೊರೆಯುತ್ತಿರುವುದರಿಂದ ಜನತಾದರ್ಶನದಲ್ಲಿ ಭಾಗವಹಿಸಿರುವ ರೈತ ಬಾಂಧವರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಶಾಸಕ ಮಂಜು ಹೇಳಿದರು .

ಹಿರಿಯ ರೈತ ಮುಖಂಡ ಮುದುಗೆರೆ ರಾಜೇಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಮುರುಗೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಸಮಾಜ ಸೇವಾ ಕಾರ್ಯಕರ್ತರಾದ ಅಗ್ರಹಾರ ಬಾಚಹಳ್ಳಿ ಕಾಂತರಾಜು, ಟೈಪಿಸ್ಟ್ ಜಯಣ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್, ವಲಯ ಅರಣ್ಯಾಧಿಕಾರಿ ಅನಿತಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಪೊಲೀಸ್ ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಜಗಧೀಶ್ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನತಾದರ್ಶನ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನೂರಾರು ಸಂಖ್ಯೆಯಲ್ಲಿ ರೈತ ಬಾಂಧವರು, ಮಹಿಳೆಯರು, ವಯೋವೃದ್ಧರು, ವಿಶೇಷ ಚೇತನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!