Thursday, July 25, 2024

ಪ್ರಾಯೋಗಿಕ ಆವೃತ್ತಿ

ಹಾಸನ| ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯದ ಆರೋಪ!

ದೇಶಾದ್ಯಂತ ಸುದ್ದಿಯಾಗಿದ್ದ ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಇನ್ನೂ ಸುದ್ದಿಯಲ್ಲಿರುವಾಗಲೇ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಕೂಡ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.

“ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ. ಈಗ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ” ಎಂದು ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತನೋರ್ವ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ.

“ಕಳೆದ ಜೂನ್ 16ರ ಭಾನುವಾರಂದು ತನಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದಕ್ಕೆ ತೆರಳಿದ್ದೆ. ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆ ನೀಡಿ ಕರೆಸಿಕೊಂಡಿದ್ದರು. ಅವರ ಸಂದೇಶ ನಂಬಿಕೊಂಡು ಅಲ್ಲಿ ತೆರಳಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ, ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ. ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೆಡಿಎಸ್ ಕಾರ್ಯಕರ್ತ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.

ದೌರ್ಜನ್ಯಕ್ಕೆ ಒಳಗಾದ ಯುವಕನೊಬ್ಬ ಪೊಲೀಸರ ಬಳಿ ನೀಡಿರುವ ದೂರಿನಲ್ಲಿ ಎಲ್ಲವನ್ನೂ ವಿವರಿಸಿದ್ದಾನೆ. ದೌರ್ಜನ್ಯಕ್ಕೆ ಒಳಗಾದ ಯುವಕನ  ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದಲ್ಲೂ ಗಾಯವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಹುಡುಗನಿಂದ ದೂರು ದಾಖಲಿಸಿಕೊಂಡಿರುವದಾಗಿ ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ಇನ್ನೂ ಸುದ್ದಿಯಲ್ಲಿರುವಾಗಲೇ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದೆ ಏನೇನಾಗಲಿದೆಯೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!