Sunday, September 24, 2023

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಬಿರುಸಿನ ಮತದಾನ

ಇಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ನಡೆಯಿತು. ಪದವೀಧರ ಮತದಾರರು ಉತ್ಸಾಹಭರಿತರಾಗಿ ಸರದಿಯಲ್ಲಿ ನಿಂತು ಮತಚಲಾಯಿಸಿದರು‌. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಪ್ರಾರಂಭವಾಯಿತು.

ಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಮತದಾರರಿಗೆ ಪ್ರತ್ಯೇಕವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಗ್ರಾಮಾಂತರ ಪ್ರದೇಶದ ಮತದಾರರಿಗೆ ಅವಕಾಶ ಕಲ್ಪಿಸಿದ್ದರೆ, ವಿಶ್ವವಿದ್ಯಾನಿಲಯದ ಮುಖ್ಯ ಕಟ್ಟಡದಲ್ಲಿ ನಗರ ಪ್ರದೇಶದ ಮತದಾರರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. 45 ಮತಗಟ್ಟೆಗಳನ್ನು ತೆರೆಯಲಾಗಿದ್ದು,ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಪದವೀಧರ ಮತದಾರರು ಸರದಿ ಸಾಲಿನಲ್ಲಿ ನಿಂತ ಮತ ಹಾಕಿದರು.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಆರಂಭದಲ್ಲಿ ನಿಧಾನವಾಗಿ ಸಾಗುತ್ತಾ ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿರುಸು ಪಡೆಯಿತು. ಗ್ರಾಮೀಣ ಭಾಗದ ಮತದಾರರು ಕೂಡ ಮಂಡ್ಯ ವಿಶ್ವವಿದ್ಯಾನಿಲಯದಲ್ಲೇ ಮತ ಚಲಾವಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಉದ್ದನೆಯ ಸರದಿಯ ಸಾಲು ಕಂಡುಬಂತು. ವಾಣಿಜ್ಯ ಕಟ್ಟಡದ ಒಳಭಾಗದಲ್ಲಿರುವ ಹಲವು ಕೊಠಡಿಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದರೂ ಗಂಟೆಗಟ್ಟಲೆ ಮತದಾರರು ಕಾದು ಮತದಾನ ಮಾಡುವಂತಾಯಿತು.

ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಮತಗಟ್ಟೆ ತೆರೆದಿದ್ದರೆ ಇನ್ನು ಹೆಚ್ಚಿನ ಮತದಾನ ನಡೆಯುತ್ತಿತ್ತು ಎಂಬುದು ಗ್ರಾಮೀಣ ಭಾಗದ ಮತದಾರರ ಅಭಿಪ್ರಾಯ. ಮಂಡ್ಯಕ್ಕೆ ಬಂದು ಮತದಾನ ಮಾಡಬೇಕೆನ್ನುವ ಹಿನ್ನೆಲೆಯಲ್ಲಿ ಹಲವರು ಕೆಲಸ ಕಾರ್ಯಗಳನ್ನು ಬಿಟ್ಟು ಬರಲು ಉತ್ತಾಹ ತೋರುವಿದಿಲ್ಲ. ಹಾಗಾಗಿ ಪದವೀಧರ ಕ್ಷೇತ್ರದ ಮತದಾನದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತಚಲಾವಣೆ ಯಾಗುವುದು ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಸಾಬೀತಾಗಿದೆ.

ಪ್ರತಿ ಹೋಬಳಿ ಕೇಂದ್ರದಲ್ಲಿ ಒಂದು ಮತಗಟ್ಟೆ ಸ್ಥಾಪಿಸಿದ್ದರೆ ಜನರಿಗೆ ಮಂಡ್ಯಕ್ಕೆ ಬರುವ ಸಂಕಷ್ಟ ತಪ್ಪುತ್ತಿತ್ತು. ಅಲ್ಲದೆ ಮತದಾನದ ಪ್ರಮಾಣ ಕೂಡ ಹೆಚ್ಚಾಗುತ್ತಿತ್ತು ಎಂಬುದು ಗ್ರಾಮೀಣ ಭಾಗದ ಮತದಾರರ ಮಾತು.

ನಗರ ಪ್ರದೇಶದ ಮತದಾರರು ಕೂಡ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಆದರೆ ಗ್ರಾಮೀಣ ಪ್ರದೇಶದ ಮತದಾರರಗಿಂತ ನಗರ ಪ್ರದೇಶದ ಮತದಾರರ ಸಂಖ್ಯೆ ಕಡಿಮೆ ಇತ್ತು. ಅಂಗವಿಕಲರು ಹಾಗೂ ವೃದ್ಧರು ತಮ್ಮ ಕುಟುಂಬಸ್ಥರೊಂದಿಗೆ ಬಂದು ಮತ ಚಲಾಯಿಸಿದರು. ಅಂಗವಿಕಲರಿಗೆ ವೀಲ್ ಛೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕರ್ತರ ಮತಯಾಚನೆ

ಮಂಡ್ಯ ವಿಶ್ವವಿದ್ಯಾನಿಲಯದ ಮುಂಭಾಗ ವಿವಿಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ,ರೈತ ಸಂಘ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರತ್ಯೇಕವಾದ ಪೆಂಡಾಲ್ ವ್ಯವಸ್ಥೆ ಮಾಡಿಕೊಂಡು ಮತದಾರರನ್ನು ಅಂತಿಮ ಕ್ಷಣದಲ್ಲಿ ಒಲಿಸಿಕೊಳ್ಳುವ ಕೆಲಸ ಮಾಡಿದವು. ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾದ ಕರಪತ್ರ ಹಾಗೂ ಬ್ಯಾಲೆಟ್ ಪತ್ರದ ಮಾದರಿಗಳನ್ನು ನೀಡಿ ತಮ್ಮ ಅಭ್ಯರ್ಥಿಗೆ ಮತ ನೀಡಬೇಕೆಂದು ಕೋರುತ್ತಿದ್ದ ದೃಶ್ಯಗಳು ಕಂಡು ಬಂತು. ಪಕ್ಷೇತರ ಅಭ್ಯರ್ಥಿಗಳಾದ ಎನ್.ಎಸ್. ವಿನಯ್, ಪ್ರಸನ್ನ ಕುಮಾರ್ ಸೇರಿದಂತೆ ಹಲವು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಕೂಡ ಮತದಾರರಿಗೆ ಕರಪತ್ರ ನೀಡಿ ನಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದರು.

ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರಿಗೆ ಗುರುತಿನ ಸಂಖ್ಯೆ,ಮತಗಟ್ಟೆಯ ಕೊಠಡಿ ಸಂಖ್ಯೆ ಮೊದಲಾದ ಮಾಹಿತಿ ತಿಳಿಸಿ ಮಾರ್ಗದರ್ಶನ ನೀಡುತ್ತಿದ್ದರು.

ಒಟ್ಟಾರೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಬಿರುಸಾಗಿ ನಡೆದಿದ್ದು, ಮತದಾರರು ಬಿರು ಬಿಸಿಲನ್ನೂ ಲೆಕ್ಕಿಸದೆ ಸರದಿಯಲ್ಲಿ ನಿಂತು ಮತದಾನ ಮಾಡುವ ಸನ್ನಿವೇಶ ಕಂಡು ಬಂತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!