Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮರು ತನಿಖೆ ನಡೆಸಿ, ನ್ಯಾಯದ ಗ್ಯಾರಂಟಿ ಕೊಡಿ – ಪ್ರಗತಿಪರರ ಆಗ್ರಹ

ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಮರು ತನಿಖೆ ನಡೆಸಿ, ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ, ಸೌಜನ್ಯಳಿಗೆ ರಾಜ್ಯ ಸರ್ಕಾರವು ನ್ಯಾಯದ ಗ್ಯಾರಂಟಿ ನೀಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅತ್ಯಾಚಾರ ವಿರೋಧಿ ಆಂದೋಲನದ ನೇತೃತ್ವದಲ್ಲಿ ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ  ಮೆರವಣಿಗೆ ಹೊರಟ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನ್ಯಾಯದ ಗ್ಯಾರಂಟಿ ನೀಡಿ

ಸೌಜನ್ಯಳ ಕುಟುಂಬ 12 ವರ್ಷದಿಂದ ನ್ಯಾಯಕ್ಕಾಗಿ ಪರಿತಪಿಸುತ್ತಾ ಇದೆ, ಅವರ ತಾಯಿ ಇಂದಿಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯದ ಗ್ಯಾರಂಟಿಯನ್ನು ನೀಡಬೇಕು. ಪ್ರಕರಣವನ್ನು ಸಮಗ್ರ ಮರು ತನಿಖೆ ನಡೆಸಿ, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಿ, ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಆಗ್ರಹಿಸಿದರು.

ಈ ಪ್ರಕರಣದಲ್ಲಿ ಸಮವಸ್ತ್ರ ದರಿಸಿದ ಪೊಲೀಸರು ಲೋಪವೆಸಗಿದ್ದಾರೆ, ಅಲ್ಲದೇ ಸತ್ಯವೇಳಬೇಕಾದ ವೈದ್ಯರು ಲೋಪವೆಸಗಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಕಿಡಿಗೇಡಿಗಳು ಸೌಜನ್ಯಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದರೆ, ಮತ್ತೊಂದು ಕಡೆ ಇಡೀ ವ್ಯವಸ್ಥೆಯೇ ಸೌಜನ್ಯಳಿಗೆ ನ್ಯಾಯ ಸಿಗದಂತೆ ನಡೆದು ಕೊಳ್ಳುವ ಮತ್ತೊಂದು ರೀತಿಯಲ್ಲಿ ಅತ್ಯಾಚಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ 2012 ನೇ ಅಕ್ಟೋಬರ್ 9 ರಂದು ವಿದ್ಯಾರ್ಥಿನಿ ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಪೊಲೀಸರು ದುಷ್ಕೃತ್ಯ ಮಾಡಿದ ಅಪರಾಧಿಗಳನ್ನು ಬಂಧಿಸದೇ ಅಮಾಯಕ ಸಂತೋಷ್ ರಾವ್ ಅವರನ್ನು ಬಂಧಿಸಿ ಕಿರುಕುಳ ನೀಡಿ ತಾನೇ ಕೃತ್ಯ ಮಾಡಿರುವುದಾಗಿ ಬಲವಂತವಾಗಿ ಒಪ್ಪಿಕೊಳ್ಳುವಂತೆ ಮಾಡಿ ಜೈಲಿಗೆ ಕಳುಹಿಸಿದ್ದರು, ಈ ಪ್ರಕರಣದಲ್ಲಿ ಸಂತೋ‍ಷ್ ರಾವ್ ಅವರು ಅನ್ಯಾಯಕ್ಕೊಳಗಾಗಿದ್ದು, ಅವರಿಗೂ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಸೌಜನ್ಯ ಕುಟುಂಬದವರು ಪ್ರಕರಣ ನಡೆದಾಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರ ಸಹೋದರನ ಮಗ ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರಾದ ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಜೈನ್ ಮೇಲೆ ಶಂಕೆ ವ್ಯಕ್ತಪಡಿಸಿ ಬಂಧಿಸುವಂತೆ ಒತ್ತಾಯಿಸಿದ್ದರು, ಆದರೆ ಪೊಲೀಸರು ಮತ್ತು ಸಿ ಬಿ ಐ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಅಷ್ಟೇ ಅಲ್ಲದೆ ಪ್ರಮುಖ ಸಾಕ್ಷಿಗಳಾದ ಅಶ್ರತ್ ಖಾಲಿದ್, ವರ್ಷ ರವರ ಹೇಳಿಕೆಯನ್ನು ದಾಖಲು ಮಾಡದೇ ಸತ್ಯ ಮರೆಮಾಚಿದ್ದಾರೆ, ಆದ್ದರಿಂದ ಇಡೀ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಶಂಕಿತ ಆರೋಪಿಗಳಾದ ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರಾದ ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಜೈನ್ ರನ್ನ ಬಂಧಿಸಿ ವಿಚಾರಣೆ ನಡೆಸಬೇಕು, ಸೌಜನ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಮರ್ಪಕ ವರದಿ ನೀಡದ ಡಾ.ರಶ್ಮಿ, ಡಾ.ಆಡಂ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರಕರಣದ ತನಿಖಾಧಿಕಾರಿ ಯೋಗೀಶ್ ಕುಮಾರ್, ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಸಂತೋಷ್ ರಾವ್ ರನ್ನ ಪರೀಕ್ಷಿಸಿದ ಪೊರೆಸ್ಸಿಕ್ಸ್ ಮೆಡಿಸಿನ್ ಪ್ರಾಧ್ಯಾಪಕ ಡಾ.ಮಹಾಬಲ ಶೆಟ್ಟಿ ರನ್ನ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ನಾಯಕಿ ಸುನಂದ ಜಯರಾಂ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ಒಂದು ಕಡೆ ಸೌಜನ್ಯ ಕುಟುಂಬ ಅನ್ಯಾಯಕ್ಕೊಳಗಾಗಿದ್ದರೆ, ಮತ್ತೊಂದು ಕಡೆ ಸಂತೋಷ್ ರಾವ್ ಅವರನ್ನು ಆರೋಪಿ ಎಂದು ಗುರುತಿಸಿ, ನಿರಾಪರಾಧಿಯೂ ಆರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಲಾಗಿದೆ, ಈ ಇಬ್ಬರ ಕುಟುಂಬಕ್ಕೂ ನ್ಯಾಯ ಒದಗಿಸಬೇಕೆಂದರು.

ಕರ್ನಾಟಕ ಜನಶಕ್ತಿಯ ಪೂರ್ಣಿಮ ಮಾತನಾಡಿ, ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಅದೇ ರೀತಿ ರಾಯಚೂರಿನಲ್ಲಿ ಈರಮ್ಮ ಎಂಬುವರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಕಾಮುಕರನ್ನು ಬಂಧಿಸಬೇಕು, ರಾಜಸ್ಥಾನದಲ್ಲಿ ಹೆಣ್ಣು ಮಗಳ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು  ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ಒಡನಾಡಿ ಸಂಸ್ಥೆ ಪರಶುರಾಮ್, ಸ್ಪಂದನ ಮಹಿಳಾ ಸಂಘಟನೆಯ ನಾಗರೇವಕ್ಕ, ಕಿರಣ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಶಿಲ್ಪ, ಮಂಜುಳ, ಸೌಮ್ಯ,ಜ್ಯೋತಿ, ಪತ್ರಕರ್ತ ನಾಗೇಶ್, ವಿಮೋಚನ ಮಹಿಳಾ ಸಂಘಟನೆಯ ಜನಾರ್ಧನ್, ಪುರುಷೋತ್ತಮ್, ಪೌರಕಾರ್ಮಿಕರ ಸಂಘದ ಎಂ ಆರ್ ಮಹೇಶ್, ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!