Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನ.19ಕ್ಕೆ ಶ್ರೀಯೋಗಿನಾರಾಯಣ ಯುವ ಒಕ್ಕೂಟದ ಉದ್ಘಾಟನೆ

ಬಲಿಜ ಸಮುದಾಯದ ಯುವ ಸಮೂಹದ ಅಭಿವೃದ್ಧಿ, ಸರ್ವತೋಮುಖ ಏಳಿಗೆಯನ್ನು ಪ್ರಮುಖ ಉದ್ದೇಶ ವಾಗಿಟ್ಟುಕೊಂಡು ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಅಖಿಲ ಕರ್ನಾಟಕ ಶ್ರೀಯೋಗಿನಾರಾಯಣ ಶ್ರೀ ಕೃಷ್ಣದೇವರಾಯ ಯುವ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ಮಂಡ್ಯದಲ್ಲಿ ನ.19ರಂದು ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಲ್.ಗಿರೀಶ್ ಲಕ್ಷ್ಮಿನಾರಾಯಣ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯನಗರದ ರೈತಸಭಾಂಗಣದಲ್ಲಿ ನ.19ರಂದು ಬೆಳಿಗ್ಗೆ 10.30 ಗಂಟೆಗೆ ಹಸ್ತಮುದ್ರ ತಜ್ಞರಾದ ಎಲ್.ಗಿರೀಶ್ ಲಕ್ಷ್ಮಿನಾರಾಯಣ್ ಗುರೂಜಿ ಅವರ ಸಾನಿಧ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕಾನಾಥ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆಂದರು.

ಮಮತಾ ಆರ್.ವಿ.ದೇವರಾಜ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಬಲಿಜ ಸಮುದಾಯದ ಸಾಧಕರಿಗೆ ಶ್ರೀಯೋಗಿನಾರಾಯಣ ಶ್ರೀಕೃಷ್ಣದೇವರಾಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಿದ್ದಾರೆ. ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರು, ಭಾರತ ಸರ್ಕಾರದ ಐಸಿಸಿಆರ್ ಸದಸ್ಯರೂ ಆದ ಡಾ.ಜಾನಪದ ಎಸ್.ಬಾಲಾಜಿ ಅವರು ಅಧ್ಯಕ್ಷತೆ ವಹಿಸಲಿದ್ದು, ದಕ್ಷಿಣ ಭಾರತ ಬಲಿಜ ಒಕ್ಕೂಟದ ಸಂಚಾಲಕ ಶ್ರೀದಾಸರಿ ರಾಮು ಉಪಸ್ಥಿತರಿದ್ದು, ಬಲಿಜ ವಾರ್ತೆ ಪತ್ರಿಕೆ ಸಂಪಾದಕ ಡಾ.ಕೆ.ಎನ್.ವಿಜಯ್‌ಕೊಪ್ಪ ಪ್ರಾಸ್ತಾವಿಕ ನುಡಿಯಾಡಲಿದ್ದಾರೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಆರ್.ಪ್ರಮೀಳ ನಾಯ್ಡು, ಬಿಬಿಎಂಪಿಯ ಮಾಜಿ ಮಹಾಪೌರರಾದ ಜಿ.ಪದ್ಮಾವತಿ, ಬಳ್ಳಾರಿಯ ಹೋರಾಟಗಾರ ಟಪಾಲ್ ಗಣೇಶ್, ಕರ್ನಾಟಕ ರಾಜ್ಯ ಕೃಷ್ಣದೇವರಾಯ ಬಲಿಜ ಸಂಘದ ಸಂಚಾಲಕ ಡಾ.ಶಿರಾ ಗೋವಿಂದಪ್ಪ, ಧರ್ಮದರ್ಶಿ ಲಯನ್ ಡಾ.ಬಿ.ಎಂ.ರವಿನಾಯ್ಡು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಶ್ರೀಯೋಗಿನಾರಾಯಣ ರಾಜ್ಯ ಪ್ರಶಸ್ತಿ ಹಾಗೂ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಡಾ.ಜಾನಪದ ಬಾಲಾಜಿ ಅವರು ಮಾತನಾಡಿ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಬಲಿಜ ಸಮುದಾಯದ ಯುವ ಜನರನ್ನು ಪ್ರೇರೇಪಿಸಿ ಅವರಿಗೆ ಅಗತ್ಯ ನೆರವು ಒದಗಿಸುವುದು, ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಹುದ್ದೆಗಳಿಗೆ ಹೋಗುವಂತಹ ಅರ್ಹರಿಗೆ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಮಾರ್ಗದರ್ಶನ ಮಾಡುವುದು ಒಕ್ಕೂಟದ ಉದ್ದೇಶವಾಗಿದೆ ಎಂದರು.

ಡಾ.ಕೆ.ಎನ್.ವಿಜಯ್‌ಕೊಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರೆನಿಸಿಕೊಂಡರೂ ಹಿಂದುಳಿದ ವರ್ಗದ ಬಲಿಜರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ 2ಎ ಮೀಸಲು ನೀಡಲು ಇಂದಿಗೂ ಮನಸ್ಸು ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ನಮ್ಮ ಸಮುದಾಯದ ಬೇಡಿಕೆ ಈಡೇರಿಸುವುದಾಗಿ ಮಾತುಕೊಟ್ಟಿದ್ದವರು ಅಧಿಕಾರ ಬಂದು ಇಷ್ಟು ದಿನಗಳಾದರೂ ಸ್ಪಂದಿಸಲೇ ಇಲ್ಲ.
ಆದ್ದರಿಂದ ಕೂಡಲೇ ಬಲಿಜರಿಗೆ ಉದ್ಯೋಗ ಕ್ಷೇತ್ರಕ್ಕೆ ಅನ್ವಯಿಸುವಂತೆ 2ಎ ಮೀಸಲು ಒದಗಿಸಬೇಕು. ಇಲ್ಲದಿದ್ದರೆ ಬರಲಿರುವ ಲೋಕಸಭೆ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬಲಿಜ ಸಮುದಾಯ ತಮ್ಮದೇ ಆದ ನಿರ್ಧಾರಕ್ಕೆ ಬರಬೇಕಾಗುತ್ತದೆಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕೀಲಾರ ಮಧು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!