Saturday, May 18, 2024

ಪ್ರಾಯೋಗಿಕ ಆವೃತ್ತಿ

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ತಾತ್ಕಾಲಿಕ ತಡೆ; ಸಚಿವ ಕೆ ಎಚ್‌ ಮುನಿಯಪ್ಪ

ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸರ್ವರ್‌ ಲಿಂಕ್‌ ಅನ್ನು ನಾವೇ ಓಪನ್ ಮಾಡಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ. ಇನ್ನೂ ಒಂದಿಷ್ಟು ದಿನ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್‌ ಮುನಿಯಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅನ್ನಭಾಗ್ಯ ಯೋಜನೆಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿದರು.

“ಗ್ಯಾರಂಟಿ ಯೋಜನೆಗಳ ಘೋಷಣೆ ಬಳಿಕ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಿತ್ತು. ಆದರೆ, ಇಲಾಖೆಯ ನಿರ್ಧಾರ ಹಲವರಿಗೆ ನಿರಾಸೆ ತಂದಿದೆ. ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಡಿಬಿಟಿ ವಿಷಯದಲ್ಲಿ ಕಳೆದ ತಿಂಗಳು ತಡವಾಯಿತು. ಈ ತಿಂಗಳ 25 ಅಥವಾ 26ರೊಳಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತದೆ” ಎಂದರು.

“ಜೋಳ, ರಾಗಿ, ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಇಲಾಖೆಯಲ್ಲಿ ಖಾಲಿಯಿರುವ 2,181 ಹುದ್ದೆ ಭರ್ತಿ ಮಾಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

ಅಕ್ಕಿ ಕೊಡಲು ಒಪ್ಪಿದ ರಾಜ್ಯಗಳು

“ಅನ್ನಭಾಗ್ಯ ಯೋಜನೆಗೆ ಕೊರತೆಯಾಗಿರುವ ಅಕ್ಕಿ ಪ್ರಮಾಣವನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ಪೂರೈಸಲು ಮುಂದೆ ಬಂದಿವೆ. ಅಕ್ಕಿ ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ತಿಂಗಳ ಅಂತ್ಯದೊಳಗೆ ಮಾತುಕತೆ ಅಂತಿಮವಾಗಲಿದೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!