Saturday, November 21, 2026

ಪ್ರಾಯೋಗಿಕ ಆವೃತ್ತಿ

ಎಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-3 ಫಲಿತಾಂಶ ವಿಶ್ಲೇಷಣೆ : ಫಲಿತಾಂಶ ಉತ್ತಮಗೊಳಿಸಲು ಕರೆ

3 ಹಂತದಲ್ಲಿ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದ್ದೂ 3 ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಿ “ಈಚ್ ಒನ್ ಟೀಚ್ ಒನ್” ಮಾದರಿಯಲ್ಲಿ ಫಲಿತಾಂಶ ಉತ್ತಮಗೊಳಿಸುವಂತೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಸೂಚಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಎಲ್ಲಾ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ-3ರ ಫಲಿತಾಂಶ ವಿಶ್ಲೇಷಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯ ಪರೀಕ್ಷೆಯಲ್ಲಿ ಶೇಕಡ 95ರಷ್ಟು ಫಲಿತಾಂಶ ದಾಖಲಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು.

ಚರ್ಚಿಸಲಾದ ಅಂಶಗಳು

1) ಪ್ರಸ್ತುತ ವರ್ಷದ ಪೂರ್ವ ಸಿದ್ಧತಾ ಪರೀಕ್ಷೆ-3 ರಲ್ಲಿ 18816 ವಿದ್ಯಾರ್ಥಿಗಳ ಪೈಕಿ 1071 ವಿದ್ಯಾರ್ಥಿಗಳು ಒಂದೇ ಒಂದು ವಿಷಯದಲ್ಲಿ ಅನುತ್ತೀರ್ಣ ಹೊಂದಿದ್ದು, ಇವರುಗಳನ್ನು ಈಚ್ ಒನ್ ಟೀಚ್ ಒನ್ ಮಾದರಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಒಬ್ಬರು ಶಿಕ್ಷಕರನ್ನು ಅಥವಾ ವಸತಿ ನಿಲಯಗಳ ವಾರ್ಡನ್ ಗಳನ್ನು ನಿಯೋಜಿಸಿ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕ್ರಮವಹಿಸಬೇಕು.

2) ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಂಜೆ ತರಗತಿ ನಡೆಸಲು ಅನಾನುಕೂಲವಾಗುತ್ತಿದ್ದಲ್ಲಿ ಗ್ರಾಮ ಪಂಚಾಯಿತಿಯಲ್ಲಿನ ಅರಿವು ಕೇಂದ್ರ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಓದಿಕೊಳ್ಳಲು ಅವಕಾಶವಾಗುವಂತೆ ಮಾಡಬೇಕು.

3) ಮುಖ್ಯ ಪರೀಕ್ಷೆಯಲ್ಲಿ ಶೇಕಡ 95% ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಲು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಕ್ರೋ ಪ್ಲಾನ್ ಮಾಡಿಕೊಂಡು ನಿರಂತರವಾಗಿ ಅನುಸರಣೆ ಮಾಡಬೇಕು.

ಫಲಿತಾಂಶ ಸುಧಾರಣೆಗೆ ಸೂಚನೆ: ಪೂರ್ವ ಸಿದ್ಧತಾ ಪರೀಕ್ಷೆ-1 ರಲ್ಲಿ ಶೇಕಡ 68% ರಷ್ಟು ವಿದ್ಯಾರ್ಥಿಗಳು ಹಾಗೂ ಪೂರ್ವ ಸಿದ್ಧತಾ ಪರೀಕ್ಷೆ-3 ರಲ್ಲಿ ಶೇಕಡ 86% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಈ ಫಲಿತಾಂಶವನ್ನು ಶೇಕಡ 95%ಗೆ ಹೆಚ್ಚಿಸಬೇಕು. ಜಿಲ್ಲೆಯ ಒಟ್ಟಾರೆ ಫಲಿತಾಂಶಕ್ಕಿಂತ ಕಡಿಮೆ ಫಲಿತಾಂಶ ಪಡೆದ ಕೆ.ಆರ್.ಪೇಟೆ, ಮಳವಳ್ಳಿ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫಲಿತಾಂಶ ಸುಧಾರಿಸಲು ಅಗತ್ಯ ಕ್ರಮವಹಿಸಬೇಕೆಂದು ಸೂಚಿಸಿದರು.

ಒಂದು ವಿಷಯದಲ್ಲಿ – 1071 ವಿದ್ಯಾರ್ಥಿಗಳು, ಎರಡು ವಿಷಯದಲ್ಲಿ – 570 ವಿದ್ಯಾರ್ಥಿಗಳು, ಮೂರು ವಿಷಯದಲ್ಲಿ – 356 ವಿದ್ಯಾರ್ಥಿಗಳು, ನಾಲ್ಕು ವಿಷಯದಲ್ಲಿ – 286 ವಿದ್ಯಾರ್ಥಿಗಳು, ಐದು ವಿಷಯದಲ್ಲಿ – 197 ವಿದ್ಯಾರ್ಥಿಗಳು, ಆರು ವಿಷಯದಲ್ಲಿ – 212 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಕುರಿತು ತೀವ್ರ ಅಸಮಧಾನ ವ್ಯಕ್ತ ಪಡಿಸಿ, ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ, ಫಲಿತಾಂಶ ಸುಧಾರಿಸುವಂತೆ ಬಿಇಓ ಗಳಿಗೆ ಸೂಚಿಸಿದರು.

ವಸತಿ ನಿಲಯಗಳಲ್ಲಿನ ಫಲಿತಾಂಶಗಳ ವಿಶ್ಲೇಷಣೆ:

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ- 1 ರಲ್ಲಿ ಶೇಕಡ 69% ರಿಂದ ಪೂರ್ವ ಸಿದ್ಧತಾ ಪರೀಕ್ಷೆ-3 ಕ್ಕೆ ಶೇಕಡ 85% ಕ್ಕೆ ಏರಿಕೆಯಾಗಿದ್ದು, ಒಟ್ಟು 435 ವಿದ್ಯಾರ್ಥಿಗಳ ಪೈಕಿ 370 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 65 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಒಟ್ಟು 689 ವಿದ್ಯಾರ್ಥಿಗಳ ಪೈಕಿ 620 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 69 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಈ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ, ಫಲಿತಾಂಶ ಸುಧಾರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ಲೋಕೇಶ್ ಜಿ, ಉಪನಿರ್ದೇಶಕ (ಅಭಿವೃದ್ಧಿ) ಯೋಗೇಶ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಾದ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಮಂಜುಳಾ, ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು, ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ