ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಸುದ್ದಿಗಳು ಹರಿದಾಡುತ್ತಿದ್ದು, ಬಿಜೆಪಿ ಸ್ಥಿರ ಸರ್ಕಾರ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.
ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ 4 ವರ್ಷಗಳಲ್ಲಿ ಮೂರು ಮುಖ್ಯಮಂತ್ರಿ ಗಳನ್ನು ರಾಜ್ಯ ಕಂಡಿದೆ. ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಸುದ್ದಿಗಳು ಬರುತ್ತಿದ್ದು, ಬಿಜೆಪಿ ಸರ್ಕಾರ ಸ್ಥಿರ ಸರ್ಕಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಐದು ವರ್ಷ ಸ್ಥಿರ ಸರ್ಕಾರ ಕೊಡಲು ಸಾಧ್ಯ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಆಡಳಿತ ನಡೆಸಿದ್ದಾರೆ ಎಂಬುದನ್ನು ರಾಜ್ಯದ ಜನರು ನೋಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ಚಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ಜನರು ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಮುಂದಿನ ಸರ್ಕಾರವನ್ನು ಕಾಂಗ್ರೆಸ್ ರಚಿಸಲಿದೆ ಎಂದರು.
ಮೈಷುಗರ್ ಕಾರ್ಖಾನೆ ವಿಚಾರವಾಗಿ ನಮ್ಮ ಪಕ್ಷ ದೊಡ್ಡ ಹೋರಾಟ ನಡೆಸಿದೆ, ರಾಗಿ ಖರೀದಿ,ಭತ್ತ ಖರೀದಿ,ರಸಗೊಬ್ಬರ ಸಮಸ್ಯೆಯ ಬಗ್ಗೆ ಹೋರಾಟ ನಡೆಸಿದೆ. ಕಾಂಗ್ರೆಸ್ ಪಕ್ಷ ಮಾತ್ರ ಈ ರಾಜ್ಯದ ಜನತೆಯ ಆಶಯಗಳನ್ನು ಈಡೇರಿಸಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಕೋಮುಗಳ ಮಧ್ಯೆ ಗಲಭೆ ಎಬ್ಬಿಸುವ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ಈ ಬಗ್ಗೆ ರಾಜ್ಯದ ಜನರು ಎಚ್ಚೆತ್ತಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಸಚ್ಚಿದಾನಂದ ನಮ್ಮ ಪಕ್ಷದಲ್ಲಿಲ್ಲ
ಜಿಲ್ಲೆಯ ಹಲವು ಮುಖಂಡರು ಬಿಜೆಪಿ ಸೇರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸಚ್ಚಿದಾನಂದ ಈಗ ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮೊಡನೆ ವಿಶ್ವಾಸದಲ್ಲಿರುವ ಆತ ಯಾವ ಪಕ್ಷವನ್ನಾದರೂ ಸೇರಲು ಸ್ವಾತಂತ್ರ್ಯವಿದೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ.ಮಾದೇಗೌಡ, ಕಾಂಗ್ರೆಸ್ ಮುಖಂಡರಾದ ಗಣಿಗ ರವಿ ಕುಮಾರ್,ಡಾ. ಕೃಷ್ಣ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು,ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಹಲವರಿದ್ದರು.