Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತೀವ್ರಗೊಂಡ ಕಾವೇರಿ ಹೋರಾಟ: ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭ

ಕಾವೇರಿ ವಿಚಾರದಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಕಳೆದ 82 ದಿನಗಳಿಂದ ನಡೆಸುತ್ತಿರುವ ನಿರಂತರ ಧರಣಿಯು, ಈಗ ಉಪವಾಸ ಸತ್ಯಾಗ್ರಹಕ್ಕೆ ಹೊರಳಿದ್ದು, ಹೋರಾಟ ಸಮಿತಿಯು ಸರ್ಕಾರಗಳ ವಿರುದ್ದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದೆ.

ಶನಿವಾರ ರೈತಸಂಘದ ಮುಖಂಡ ಗುನ್ನನಾಯಕನಹಳ್ಳಿ ಮುದ್ದೇಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ದೊಡ್ಡ ಗರುಡನಹಳ್ಳಿ ಕೃಷ್ಣೇಗೌಡ, ಕಿರಂಗೂರು ಪಾಪು, ಪಣಕನಹಳ್ಳಿ ಪಿ.ಜಿ ನಾಗೇಂದ್ರ ಹಾಗೂ ಸಿದ್ದಯ್ಯನಕೊಪ್ಪಲು ಎಸ್.ಕೆ ರಾಮಕೃಷ್ಣ ಅವರು ಮೊದಲ ದಿನದಲ್ಲಿ ಉಪವಾಸ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸಂಕಷ್ಟದಲ್ಲಿದೆ, ಮಳೆ ಕೊರತೆ ಎದುರಾಗಿ ಬರಗಾಲದ ಪರಿಸ್ಥಿತಿ ಉಲ್ಬಣಸಿದೆ, ಜಲಾಶಯಗಳಲ್ಲಿ ನೀರಿನ ಮಟ್ಟ ತಳ ಕಾಣುತ್ತಿದೆ, ಆದರೂ ಸಹ ಕರ್ನಾಟಕ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ, ಮುಖ್ಯಮಂತ್ರಿ,ನೀರಾವರಿ ಸಚಿವರು ತುಟಿ ಬಿಚ್ಚುತ್ತಿಲ್ಲ,ಮೌನಕ್ಕೆ ಶರಣಾಗಿ ಹೊಣೆಗಾರಿಕೆಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು.

ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರ ಕಾವೇರಿ ನೀರು ಸಂರಕ್ಷಿಸಿಕೊಳ್ಳಲು ಮುಂದಾಗಿಲ್ಲ. ಮತ್ತೊಂದೆಡೆ ಕಾನೂನಾತ್ಮಕ ಚಟುವಟಿಕೆಯು ಕಾಣುತ್ತಿಲ್ಲ ಸರ್ಕಾರದ ಬೇಜವಾಬ್ದಾರಿತನದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದರೂ ನೆರೆರಾಜ್ಯಕ್ಕೆ ನೀರು ಸ್ಥಗಿತ ಮಾಡುವುದಾಗಿ ದೃಢ ನಿಲುವು ಘೋಷಿಸಲಿಲ್ಲ, ಕಾನೂನಾತ್ಮಕವಾಗಿ ರಾಜ್ಯದ ಹಿತ ಕಾಪಾಡುವುದಾಗಿ ಹೇಳಿ ಹೋದರು, ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ, ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ಕಾವೇರಿ ವಿಚಾರವಾಗಿ ಸಮಗ್ರವಾಗಿ ಚರ್ಚೆ ದಿಟ್ಟ ನಿಲುವಿಗೆ ಒತ್ತಾಯ ಮಾಡಿದ್ದೆವು ಅದಕ್ಕೂ ಸಹ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದ ಧರಣಿಯೊಂದಿಗೆ ಉಪವಾಸ ಸತ್ಯಾಗ್ರಹವು ನಿರಂತರವಾಗಿ ನಡೆಯಲಿದೆ, ಪ್ರತಿದಿನ ಸರದಿಯಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಉಪವಾಸ ಕೂರಲಿದ್ದಾರೆ. ಈ ಮೂಲಕ ನಮ್ಮ ಹೋರಾಟವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುತ್ತಿದ್ದೇವೆ ಎಂದು ವಿವರಿಸಿದರು.

ಚಳವಳಿಯನ್ನು ಕೈ ಬಿಡಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಜೊತೆ ಮಾತುಕತೆ ನಡೆಸಿ ಕರ್ನಾಟಕದ ಹಿತ ಕಾಪಾಡಲು ಒತ್ತಾಯಿಸಲಿ, ಹೋರಾಟ ರೂಪಿಸುವುದು ಸುಲಭದ ಮಾತಲ್ಲ, ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ ,ರೈತಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ನಾರಾಯಣ್. ಬದರಿ ನಾರಾಯಣ್, ಸಿ.ಟಿ ಮಂಜುನಾಥ್, ಎಂ.ಎಲ್ ತುಳಸೀದರ್ ಸೇರಿದಂತೆ ಮತ್ತಿತರರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!